ಕಾಮನ್‌ ಮೊಬಿಲಿಟಿ ಕಾರ್ಡ್‌ ಅ. 21ರಿಂದ ಬಳಕೆಗೆ, ಮೆಟ್ರೋದಲ್ಲಿ ಮಾತ್ರವಲ್ಲದೆ ಶಾಪಿಂಗ್‌ಗೂ ಉಪಯೋಗ

ಬಿಎಂಆರ್‌ಸಿಎಲ್‌ ಅಕ್ಟೋಬರ್‌ 21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಬಿಡುಗಡೆ ಮಾಡುತ್ತಿದೆ. ಮೊದಲ ಹಂತದಲ್ಲಿ 25,000 ಕಾರ್ಡ್‌ಗಳನ್ನು ಸಂಸ್ಥೆ ಪರಿಚಯಿಸುತ್ತಿದೆ. ನಮ್ಮ ಮೆಟ್ರೋದಲ್ಲಿ ಮಾತ್ರವಲ್ಲದೆ ಶಾಪಿಂಗ್‌ಗೂ ಇದನ್ನು ಉಪಯೋಗ ಮಾಡಬಹುದಾಗಿದೆ.

ಕಾಮನ್‌ ಮೊಬಿಲಿಟಿ ಕಾರ್ಡ್‌ ಅ. 21ರಿಂದ ಬಳಕೆಗೆ, ಮೆಟ್ರೋದಲ್ಲಿ ಮಾತ್ರವಲ್ಲದೆ ಶಾಪಿಂಗ್‌ಗೂ ಉಪಯೋಗ
Linkup
ಬೆಂಗಳೂರು: ಸೇವೆ ಪ್ರಾರಂಭವಾಗಿ ಒಂದು ದಶಕ ಪೂರ್ಣಗೊಳ್ಳುತ್ತಿರುವ ಹಿನ್ನೆಯಲ್ಲಿ ಬಿಎಂಆರ್‌ಸಿಎಲ್‌ ಅ.21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ (ಎನ್‌ಸಿಎಂಸಿ) ಬಿಡುಗಡೆ ಮಾಡುತ್ತಿದೆ. ಮೊದಲ ಹಂತದಲ್ಲಿ 25,000 ಕಾರ್ಡ್‌ಗಳನ್ನು ಬಿಎಂಆರ್‌ಸಿಎಲ್‌ ಪರಿಚಯಿಸುತ್ತಿದೆ. ಆದರೆ ಇವುಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಬಿಎಂಟಿಸಿ ಇನ್ನೂ ಸಿದ್ಧಗೊಂಡಿಲ್ಲ. ''ಮೊದಲ ಹಂತದ ಮೆಟ್ರೋೕ ನಿಲ್ದಾಣದಲ್ಲಿ ಸ್ವಯಂಚಾಲಿತ ಪಾವತಿ ಗೇಟ್‌ಗಳನ್ನು ಎನ್‌ಸಿಎಂಸಿ ಕಾರ್ಡ್‌ಗಳ ಬಳಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಎರಡನೇ ಹಂತದ ಮೆಟ್ರೋ ಸ್ಟೇಷನ್‌ಗಳು ಸಿದ್ಧಗೊಂಡಿವೆ. ರುಪೇ ಡೆಬಿಟ್‌ ಕಾರ್ಡ್‌ಗಳು ಎಲ್ಲಾ ಬ್ಯಾಂಕ್‌ ಹಾಗೂ ಮೆಟ್ರೋ ಸ್ಟೇಷನ್‌ಗಳಲ್ಲಿ ಲಭ್ಯವಿರಲಿದೆ,'' ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಹೇಳಿದ್ದಾರೆ. ಎನ್‌ಸಿಎಂಸಿ ಬೆಲೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದೆ. ಆದರೆ ಅಂತಿಮವಾಗಿಲ್ಲ ಎಂದು ಅಂಜುಂ ಪರ್ವೇಜ್‌ ತಿಳಿಸಿದ್ದಾರೆ. ಈ ಕಾರ್ಡ್‌ ಅನ್ನು ಕೇವಲ ಕರ್ನಾಟಕದ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಈ ಕಾರ್ಡ್‌ಗಳನ್ನು ಬಳಸಬಹುದಾಗಿದೆ. ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ. ದಿಲ್ಲಿ ಮೆಟ್ರೋದ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲಿ ಎನ್‌ಸಿಎಂಸಿ ಕಾರ್ಡ ಬಳಕೆಗೆ ಚಾಲನೆ ನೀಡಲಾಗಿದೆ. 'ಸಾರ್ವಜನಿಕರಿಗೆ ಈ ಕಾರ್ಡ್‌ನಿಂದ ಸಾಕಷ್ಟು ಅನುಕೂಲವಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಬಿಎಂಟಿಸಿಯಲ್ಲಿ ಅಳವಡಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ಹದಿನೈದು ದಿನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್‌. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಎಂದರೇನು? ರುಪೇ ಪೇಮೆಂಟ್‌ ವ್ಯವಸ್ಥೆಯ ಆಧಾರದಲ್ಲಿ ಈ ಕಾರ್ಡ್‌ ಕಾರ್ಯನಿರ್ವಹಣೆ ಮಾಡಲಿದ್ದು ಬಸ್‌, ಪಾರ್ಕಿಂಗ್‌, ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್‌ ಶಾಪಿಂಗ್‌ಗಳಲ್ಲಿ ಒಂದೇ ಕಾರ್ಡ್‌ ಮೂಲಕ ವ್ಯವಹರಿಸಬಹುದಾಗಿದೆ. ಬ್ಯಾಂಕ್‌ನಿಂದ ನೀಡಲಾಗುವ ರೂಪೇ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ನಂತೆಯೇ ಈ ಕಾರ್ಡ್‌ ಕೂಡ ಇರುತ್ತದೆ. ಈ ರೂಪೇ ಕಾರ್ಡ್‌ ಅನ್ನು ಪಾಲುದಾರ ಬ್ಯಾಂಕಿನ ಡೆಬಿಟ್‌/ಕ್ರೆಡಿಟ್‌ ಅಥವಾ ಪ್ರಿಪೇಯ್ಡ್‌ ಕಾರ್ಡ್‌ ರೂಪದಲ್ಲಿ ನೀಡಬಹುದು. 'ಒಂದು ದೇಶ, ಒಂದು ಕಾರ್ಡ್‌' ಎಂಬ ಪರಿಕಲ್ಪನೆಯಡಿ ಕಾರ್ಡ್‌ ರೂಪಿಸಿದ್ದು, ಇಡೀ ದೇಶದ ಮೆಟ್ರೋದಲ್ಲಿ ಇದನ್ನು ಬಳಸಬಹುದು.