ನಿರ್ಮಲಾ ಸೀತಾರಾಮನ್‌ ಹೆಸರಲ್ಲಿ ನಕಲಿ ನೋಟಿಸ್‌; ಬೆಂಗಳೂರಿನ ಮಹಿಳೆಗೆ ₹80 ಲಕ್ಷ ವಂಚನೆ!

ಬನಶಂಕರಿ ನಿವಾಸಿ ಸಂಧ್ಯಾ ಗಾಯತ್ರಿ(50) ಕೊಟ್ಟ ದೂರಿನ ಆಧಾರದ ಮೇಲೆ ವಿದೇಶಿ ಪ್ರಜೆ ಡೇವಿಸ್‌ ಹಾರ್ಮನ್‌ ಎಂಬಾತನ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಳೆದ ಜ.23 ರಂದು ಸಂಧ್ಯಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಡೇವಿಸ್‌ ರಿಕ್ವೆಸ್ವ್‌ ಕಳುಹಿಸಿದ್ದ. ಸಂಧ್ಯಾ ರಿಕ್ವೆಸ್ವ್‌ ಸ್ವೀಕರಿಸಿದ ಕೂಡಲೇ ಆಪ್ತವಾಗಿ ಮಾತನಾಡಲು ಆರಂಭಿಸಿದ್ದ.

ನಿರ್ಮಲಾ ಸೀತಾರಾಮನ್‌ ಹೆಸರಲ್ಲಿ ನಕಲಿ ನೋಟಿಸ್‌; ಬೆಂಗಳೂರಿನ ಮಹಿಳೆಗೆ ₹80 ಲಕ್ಷ ವಂಚನೆ!
Linkup
ಬೆಂಗಳೂರು: ನಾನು ಹೃದಯ ತಜ್ಞ ಎಂದು ಮಹಿಳೆ ಮುಂದೆ ಸುಳ್ಳು ಹೇಳಿದ್ದ ನಕಲಿ ವೈದ್ಯನೊಬ್ಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರಿನಲ್ಲಿ ನೋಟಿಸ್‌ ಕಳುಹಿಸಿ ಬರೋಬ್ಬರಿ 80 ಲಕ್ಷ ರೂ. ವಂಚಿಸಿದ್ದಾನೆ. ಬನಶಂಕರಿ ನಿವಾಸಿ ಸಂಧ್ಯಾ ಗಾಯತ್ರಿ(50) ಕೊಟ್ಟ ದೂರಿನ ಆಧಾರದ ಮೇಲೆ ವಿದೇಶಿ ಪ್ರಜೆ ಡೇವಿಸ್‌ ಹಾರ್ಮನ್‌ ಎಂಬಾತನ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಳೆದ ಜ.23 ರಂದು ಸಂಧ್ಯಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಡೇವಿಸ್‌ ರಿಕ್ವೆಸ್ವ್‌ ಕಳುಹಿಸಿದ್ದ. ಸಂಧ್ಯಾ ರಿಕ್ವೆಸ್ವ್‌ ಸ್ವೀಕರಿಸಿದ ಕೂಡಲೇ ಆಪ್ತವಾಗಿ ಮಾತನಾಡಲು ಆರಂಭಿಸಿದ್ದು, ಕ್ರಮೇಣ ಇಬ್ಬರು ಸ್ನೇಹಿತರಾಗಿದ್ದರು. ಡೇವಿಸ್‌ ತನ್ನನ್ನು ಹೃದಯ ತಜ್ಞನೆಂದು ಪರಿಚಯಿಸಿಕೊಂಡಿದ್ದ. ಇತ್ತ ಸಂಧ್ಯಾ ಅವರು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಡೇವಿಸ್‌ ಜತೆ ಆಗಾಗ ಅಂತರ್ಜಾಲ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಚಾಟ್‌ ಮಾಡುತ್ತಿದ್ದರು. ಕೆಲ ದಿನದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯ ವಾಟ್ಸ್‌ಆ್ಯಪ್‌ ನಂಬರ್‌ ಪಡೆದು ಡೇವಿಸ್‌ ಆಕೆಗೆ ಸಲಹೆ ನೀಡುವಂತೆ ನಾಟಕವಾಡಿದ್ದ. ಕಳೆದ ಫೆ.6 ರಂದು ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಕಳುಹಿಸಿದ ಡೇವಿಸ್‌, ನಿಮಗೆ ಉಡುಗೊರೆಯೊಂದನ್ನು ಕಳುಹಿಸಿದ್ದು, ಅದರಲ್ಲಿ 35 ಸಾವಿರ ರೂ. ಪೌಂಡ್ಸ್‌ ಬೆಲೆಬಾಳುವ ವಿದೇಶಿ ಕರೆನ್ಸಿ, ಒಡವೆಗಳಿದ್ದು, ಕಸ್ಟಮ್ಸ್‌ ಶುಲ್ಕ ಪಾವತಿಸಿ ಅದನ್ನು ಪಡೆದುಕೊಳ್ಳಿ ಎಂದು ತಿಳಿಸಿದ್ದ. ಇದಾದ ಕೆಲ ಸಮಯದ ಬಳಿಕ ಅಪರಿಚಿತ ಮಹಿಳೆಯೊಬ್ಬರು ಸಂಧ್ಯಾಗೆ ಕರೆ ಮಾಡಿ ತನ್ನನ್ನು ಕಸ್ಟಮ್ಸ್‌ ಕೊರಿಯರ್‌ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ಶೀಘ್ರವೇ ಕಸ್ಟಮ್ಸ್‌ ಶುಲ್ಕ ಪಾವತಿಸಿ ನಿಮಗೆ ವಿದೇಶದಿಂದ ಬಂದಿರುವ ಐಶಾರಾಮಿ ಉಡುಗೊರೆ ಸ್ವೀಕರಿಸುವಂತೆ ಒತ್ತಡ ಹಾಕಿದ್ದಳು. ನಕಲಿ ಪತ್ರ: ಸಂಧ್ಯಾ ಅವರಿಗೆ ಈಕೆಯ ಮೇಲೆ ಅನುಮಾನ ಬಂದು ಹಣ ಕಳುಹಿಸಿರಲಿಲ್ಲ. ಎರಡು ದಿನದ ಬಳಿಕ ಮತ್ತೆ ಕಸ್ಟಮ್ಸ್‌ ಅಧಿಕಾರಿ ಎಂದು ಹೇಳಿ ಕರೆ ಮಾಡಿದ ಯುವತಿ, ನೀವು ತುಂಬಾ ದಿನವಾದರೂ ಉಡುಗೊರೆ ಪಾರ್ಸೆಲ್‌ ಸ್ವೀಕರಿಸಿಲ್ಲ. ವಿತ್ತ ಸಚಿವಾಲಯದಿಂದ ನಿಮ್ಮ ಹೆಸರಿಗೆ ನೋಟಿಸ್‌ ಬಂದಿದೆ ಎಂದು ನಿರ್ಮಲಾ ಸೀತಾರಾಮನ್‌ ಹೆಸರಿನಲ್ಲಿ ತಯಾರಿಸಿದ ನಕಲಿ ನೋಟಿಸ್‌ ಪತ್ರದ ಸ್ಕ್ರೀನ್‌ ಶಾಟ್‌ವೊಂದನ್ನು ಸಂಧ್ಯಾ ಅವರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದಳು. ಈ ಪತ್ರ ನೋಡಿದ ಸಂಧ್ಯಾ ಅವರು, ನಿಜವಾಗಿಯೂ ತನಗೆ ಉಡುಗೊರೆ ಬಂದಿರಬಹುದು ಎಂದು ನಂಬಿದ್ದರು. ಆರೋಪಿಗಳ ಸೂಚನೆಯಂತೆ ಫೆ.19 ರವರೆಗೆ ಹಂತ ಹಂತವಾಗಿ ಅವರು ಸೂಚಿಸಿದ ಬ್ಯಾಂಕ್‌ ಖಾತೆಗೆ ಒಟ್ಟು 80 ಲಕ್ಷ ರೂ. ಜಮೆ ಮಾಡಿದ್ದಾರೆ. ಇದಾದ ಬಳಿಕ ಆರೋಪಿ ಡೇವಿಸ್‌, ಸಂಧ್ಯಾ ಅವರ ಸಂಪರ್ಕಕ್ಕೆ ಸಿಗಲಿಲ್ಲ. ಸತತ ಪ್ರಯತ್ನ ಮಾಡಿದರೂ ಯಾವುದೇ ಸ್ಪಂದನೆ ಬರಲಿಲ್ಲ. ತಿಂಗಳು ಕಳೆದರೂ ಸಂಧ್ಯಾ ಅವರಿಗೆ ಯಾವುದೇ ಉಡುಗೊರೆ ಕಳಹಿಸದೇ ಹಣವನ್ನು ಮರಳಿಸದೇ ಇದ್ದಾಗ ತಾನು ಮೋಸ ಹೋದ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಬನಶಂಕರಿ ಠಾಣೆಗೆ ಸಂಧ್ಯಾ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.