ಡಾ.ರಾಜ್‌ಕುಮಾರ್ ಜನ್ಮದಿನೋತ್ಸವ: ಅನರ್ಘ್ಯ ರತ್ನ ಧರೆಗೆ ಉದುರಿದ ದಿನದ ಸವಿನೆನಪು

ಇಂದು ವರನಟ ಡಾ.ರಾಜ್‌ಕುಮಾರ್‌ರವರ 92ನೇ ಹುಟ್ಟುಹಬ್ಬ. ಡಾ.ರಾಜ್‌ಕುಮಾರ್‌ರವರ ಹುಟ್ಟಿದ ದಿನವಾದ ಇಂದು ಅಭಿಮಾನಿಗಳು ಅಣ್ಣಾವ್ರ ಸ್ಮರಣೆ ಮಾಡುತ್ತಿದ್ದಾರೆ.

ಡಾ.ರಾಜ್‌ಕುಮಾರ್ ಜನ್ಮದಿನೋತ್ಸವ: ಅನರ್ಘ್ಯ ರತ್ನ ಧರೆಗೆ ಉದುರಿದ ದಿನದ ಸವಿನೆನಪು
Linkup
ವರನಟ, ನಟ ಸಾರ್ವಭೌಮ, ಕನ್ನಡಿಗರ ಕಲಾರತ್ನ, ಗಾನ ಗಂಧರ್ವ, ರಸಿಕರ ರಾಜ.. ಅಬ್ಬಬ್ಬಾ.. 'ಬಂಗಾರದ ಮನುಷ್ಯ' ಡಾ.ರಾಜ್‌ಕುಮಾರ್‌ಗೆ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಿರುವ ಬಿರುದುಗಳು ಒಂದಾ ಎರಡಾ. 'ಅಭಿಮಾನಿಗಳೇ ದೇವರು' ಎನ್ನುತ್ತ ಅಭಿಮಾನಿಗಳಲ್ಲೇ ದೇವರನ್ನು ಕಾಣುತ್ತಿದ್ದರೆ, 'ಅಣ್ಣಾವ್ರು' ಎನ್ನುತ್ತಿದ್ದ ಅಭಿಮಾನಿಗಳು ಡಾ.ರಾಜ್‌ರನ್ನ ಹಿರಿಯ ಸಹೋದರನ ಸ್ಥಾನದಲ್ಲಿ ಕೂರಿಸಿದ್ದರು. ಇಂತಿಪ್ಪ ಡಾ.ರಾಜ್‌ಕುಮಾರ್‌ರವರ ಜನ್ಮದಿನೋತ್ಸವ ಇಂದು..! ಏಪ್ರಿಲ್ 24, 2021.. ಡಾ.ರಾಜ್‌ಕುಮಾರ್ ಇಂದು ನಮ್ಮೊಂದಿಗೆ ಇದ್ದಿದ್ದರೆ 92ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಡಾ.ರಾಜ್‌ ಇಂದು ನಮ್ಮೊಂದಿಲ್ಲ. ದೈಹಿಕವಾಗಿ ಡಾ.ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಡಾ.ರಾಜ್‌ಕುಮಾರ್ ಹಚ್ಚಹಸಿರಾಗಿದ್ದಾರೆ. ಡಾ.ರಾಜ್‌ಕುಮಾರ್‌ರವರ ಹುಟ್ಟಿದ ದಿನವಾದ ಇಂದು ಅಭಿಮಾನಿಗಳು ಅಣ್ಣಾವ್ರ ಸ್ಮರಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಏಪ್ರಿಲ್ 24 ಬಂತೆಂದ್ರೆ ಸಾಕು.. ಕನ್ನಡಿಗರು ದೊಡ್ಡ ಹಬ್ಬದ ರೀತಿಯಲ್ಲೇ ಡಾ.ರಾಜ್‌ಕುಮಾರ್‌ರವರ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಮಹಾಮಾರಿ ಕೊರೊನಾ ವೈರಸ್ ಕಾರಣದಿಂದ ಡಾ.ರಾಜ್‌ಕುಮಾರ್ ಜನ್ಮದಿನೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಇಂದು ವೀಕೆಂಡ್ ಲಾಕ್‌ಡೌನ್ ಇರುವುದರಿಂದ ಡಾ.ರಾಜ್‌ಕುಮಾರ್ ಜನ್ಮದಿನೋತ್ಸವವನ್ನು ಆಚರಿಸಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ವೀಕೆಂಡ್ ಲಾಕ್‌ಡೌನ್ ಇಲ್ಲದಿದ್ದರೆ, ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಜನ್ಮದಿನೋತ್ಸವ ಆಚರಣೆ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಇನ್ನೂ, ಲಾಕ್‌ಡೌನ್ ಇರುವ ಕಾರಣ ಕುಟುಂಬಸ್ಥರು ಸಹ ಸರಳವಾಗಿ ಪೂಜೆ ಸಲ್ಲಿಸಿ, ಅಪ್ಪಾಜಿಗೆ ನಮನ ಸಲ್ಲಿಸಿದ್ದಾರೆ. ಏಪ್ರಿಲ್ 24, 1929... ಅನರ್ಘ್ಯ ರತ್ನ ಧರೆಗೆ ಉದುರಿದ ದಿನ... ಗಾಜನೂರಿನಲ್ಲಿ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗೆ ಹುಟ್ಟಿದ ಪುತ್ರ ಮುತ್ತುರಾಜ್. ಅಭಿನಯ ರಕ್ತಗತವಾಗಿಯೇ ಮುತ್ತುರಾಜ್ ಮೈಗೂಡಿತ್ತು. ಬಾಲನಟನಾಗಿ ಮುತ್ತುರಾಜ್ ರಂಗಭೂಮಿ ಪ್ರವೇಶ ಮಾಡಿದರು. ಬಳಿಕ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ರಾಜ್‌ಕುಮಾರ್‌ಆಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿರುವ ಡಾ.ರಾಜ್‌ಕುಮಾರ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಉತ್ತಮ ಗಾಯಕ ಕೂಡ ಆಗಿರುವ ಡಾ.ರಾಜ್‌ಕುಮಾರ್‌ಗೆ ರಾಷ್ಟ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ. ಏಪ್ರಿಲ್ 12, 2006 ರಂದು ಡಾ.ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು.