ಜನ್‌ಧನ್‌ ಖಾತೆ 43 ಕೋಟಿಗೆ ಏರಿಕೆ, ಅಕೌಂಟ್‌ನಲ್ಲಿದೆ 1.46 ಲಕ್ಷ ಕೋಟಿ ರೂ. ಠೇವಣಿ!

ಪ್ರಧಾನ ಮಂತ್ರಿ ಜನ್‌ಧನ್‌ ಯೋಜನೆಗೆ 7 ವರ್ಷ ಭರ್ತಿಯಾಗಿದ್ದು, ಯೋಜನೆ ಅಡಿಯಲ್ಲಿ ಇದುವರೆಗೆ 43.04 ಕೋಟಿ ಫಲಾನುಭವಿಗಳು ಬ್ಯಾಂಕ್‌ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಇದರಲ್ಲಿ ಒಟ್ಟು 1.46 ಲಕ್ಷ ಕೋಟಿ ರೂ. ಠೇವಣಿ ಇದೆ.

ಜನ್‌ಧನ್‌ ಖಾತೆ 43 ಕೋಟಿಗೆ ಏರಿಕೆ, ಅಕೌಂಟ್‌ನಲ್ಲಿದೆ 1.46 ಲಕ್ಷ ಕೋಟಿ ರೂ. ಠೇವಣಿ!
Linkup
ಹೊಸದಿಲ್ಲಿ: ಪ್ರಧಾನ ಮಂತ್ರಿ ಜನ್‌ಧನ್‌ ಯೋಜನೆಗೆ 7 ವರ್ಷ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಟ್ವೀಟ್‌ನಲ್ಲಿ, ಈ ಯೋಜನೆಯು ಭಾರತದ ಅಭಿವೃದ್ಧಿಯ ಪಥವನ್ನು ಸುಧಾರಿಸಿದೆ ಎಂದು ಹೇಳಿದ್ದಾರೆ. ''ಜನ್‌ಧನ್‌ ಯೋಜನೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಜನತೆಗೆ ಬ್ಯಾಂಕಿಂಗ್‌ ಸೌಲಭ್ಯ ವಿಸ್ತರಿಸಲು ಹಾಗೂ ಅವರ ಜೀವನದ ಗುಣಮಟ್ಟ ವೃದ್ಧಿಸಲು ಯೋಜನೆ ಸಹಕಾರಿಯಾಗಿದೆ'' ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಜನ್‌ ಧನ್‌ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಇದುವರೆಗೆ 43.04 ಕೋಟಿ ಫಲಾನುಭವಿಗಳು ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಇದರಲ್ಲಿ 36.86 ಕೋಟಿ ಬ್ಯಾಂಕ್‌ ಖಾತೆಗಳು ಸಕ್ರಿಯವಾಗಿವೆ. ಒಟ್ಟು 1.46 ಲಕ್ಷ ಕೋಟಿ ರೂ. ಠೇವಣಿ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಬಡ ಜನತೆಗೆ ಹಲವಾರು ಸಾಮಾಜಿಕ ಕಲ್ಯಾಣ ಯೋಜನೆಗಳ ಫಲವನ್ನು ತಲುಪಿಸಲು, ನಗದು ವರ್ಗಾವಣೆಗೆ ಸಹಕಾರಿಯಾಗಿದೆ ಎಂದು ಸರಕಾರ ತಿಳಿಸಿದೆ. ಶೇ.85.6ರಷ್ಟು ಖಾತೆಗಳು ಸಕ್ರಿಯವಾಗಿದ್ದು, ಪ್ರತಿ ಖಾತೆಯಲ್ಲಿನ ಸರಾಸರಿ ಠೇವಣಿ 3,398 ರೂ.ಗಳಾಗಿದೆ. ಈ ಯೋಜನೆಯನ್ನು 2014ರ ಆಗಸ್ಟ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದ್ದರು. ಅದಾಗಿ 7 ವರ್ಷಗಳಲ್ಲಿ ಜನ್‌ ಧನ್‌ ಉತ್ತಮ ಪ್ರಗತಿ ದಾಖಲಿಸಿದೆ. ಜನ್‌ ಧನ್‌ನ ಮೊದಲ ವರ್ಷ 17 ಕೋಟಿ ಖಾತೆಗಳನ್ನು ತೆರೆಯಲಾಗಿತ್ತು. 31 ಕೋಟಿ ಖಾತೆದಾರರಿಗೆ ರುಪೇ ಕಾರ್ಡ್‌ ವಿತರಣೆಯಾಗಿದೆ. 2018ರ ಆಗಸ್ಟ್‌ 28ರ ನಂತರ ಜನ್‌ ಧನ್‌ ಖಾತೆ ಮತ್ತು ರುಪೇ ಕಾರ್ಡ್‌ ಹೊಂದಿರುವವರಿಗೆ ಉಚಿತ ಅಪಘಾತ ವಿಮೆಯ ಕವರೇಜ್‌ ಅನ್ನು 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ವೃದ್ಧಿಸಲಾಗಿದೆ. ಇದೇ ವೇಳೆ "ಇದು ಯುಪಿಎ ಸರಕಾರದ ಬೇಸಿಕ್‌ ಸೇವಿಂಗ್ಸ್‌ ಬ್ಯಾಂಕ್‌ ಡಿಪಾಸಿಟ್‌ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹೆಸರು ಬದಲಿಸಿದ್ದಾರೆ ಅಷ್ಟೇ" ಎಂದು ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.