ಕೊಳಚೆ ನೀರು ವಿಲೇವಾರಿಗೆ ಕಳ್ಳದಾರಿ; ಲಕ್ಷ ಖರ್ಚು ಮಾಡುವ ಬದಲು ಸಾವಿರ ರೂ. ನಲ್ಲೇ ಮುಗಿಯುತ್ತೆ ಕೆಲಸ!

ಕಟ್ಟಡದ ವಿಸ್ತೀರ್ಣ, ಫ್ಲ್ಯಾಟ್‌ಗಳ ಸಂಖ್ಯೆ ಆಧರಿಸಿ ಅಪಾರ್ಟ್‌ಮೆಂಟ್‌ಗಳು ನಿಗದಿತ ಠೇವಣಿ ಮೊತ್ತವನ್ನು ಪಾವತಿಸಿ, ಒಳಚರಂಡಿ ಸಂಪರ್ಕ ಪಡೆಯಬೇಕಿದೆ. ಮದ್ಯಮ ಪ್ರಮಾಣದ ಅಪಾರ್ಟ್‌ಮೆಂಟ್‌ ಆದರೂ ಸುಮಾರು 5 ಲಕ್ಷ ರೂ. ಠೇವಣಿ ಕಟ್ಟಬೇಕು. ಇದರ ಬದಲು ಹಲವು ಅಪಾರ್ಟ್‌ಮೆಂಟ್‌ನ ಬಿಲ್ಡರ್‌ಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಜಲಮಂಡಳಿಯ ಅನುಮತಿ ಇಲ್ಲದೆ ಒಳಚರಂಡಿ ಸಂಪರ್ಕ ಪಡೆಯುತ್ತಿದ್ದಾರೆ.

ಕೊಳಚೆ ನೀರು ವಿಲೇವಾರಿಗೆ ಕಳ್ಳದಾರಿ; ಲಕ್ಷ ಖರ್ಚು ಮಾಡುವ ಬದಲು ಸಾವಿರ ರೂ. ನಲ್ಲೇ ಮುಗಿಯುತ್ತೆ ಕೆಲಸ!
Linkup
ಶಶಿಕುಮಾರ್‌ ಎಸ್‌ ಬೆಂಗಳೂರು ದಕ್ಷಿಣ ಬೆಂಗಳೂರು: ಬೇಗೂರು ವಾರ್ಡ್‌ನ ಎಂಎಲ್‌ಎ ಲೇಔಟ್‌ನಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳು ಕಳ್ಳಮಾರ್ಗದ ಮೂಲಕ ಒಳಚರಂಡಿ ನೀರನ್ನು ಜಲಮಂಡಳಿಯ ಕೊಳಚೆ ನೀರಿನ ಮಾರ್ಗಕ್ಕೆ ಹರಿಯ ಬಿಡುತ್ತಿವೆ. ಆ ಮೂಲಕ ಜಲಮಂಡಳಿಗೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ. ಅಕ್ರಮ ಹೇಗೆ ? ಕಟ್ಟಡದ ವಿಸ್ತೀರ್ಣ, ಫ್ಲ್ಯಾಟ್‌ಗಳ ಸಂಖ್ಯೆ ಆಧರಿಸಿ ಅಪಾರ್ಟ್‌ಮೆಂಟ್‌ಗಳು ನಿಗದಿತ ಠೇವಣಿ ಮೊತ್ತವನ್ನು ಪಾವತಿಸಿ, ಪಡೆಯಬೇಕಿದೆ. ಮದ್ಯಮ ಪ್ರಮಾಣದ ಅಪಾರ್ಟ್‌ಮೆಂಟ್‌ ಆದರೂ ಸುಮಾರು 5 ಲಕ್ಷ ರೂ. ಠೇವಣಿ ಕಟ್ಟಬೇಕು. ಇದರ ಬದಲು ಹಲವು ಅಪಾರ್ಟ್‌ಮೆಂಟ್‌ನ ಬಿಲ್ಡರ್‌ಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಜಲಮಂಡಳಿಯ ಅನುಮತಿ ಇಲ್ಲದೆ ಒಳಚರಂಡಿ ಸಂಪರ್ಕ ಪಡೆಯುತ್ತಿದ್ದಾರೆ. ಖಾಸಗಿ ಕೆಲಸಗಾರರ ಮೂಲಕ ಈ ಕೆಲಸ ಮಾಡಿಸುತ್ತಿದ್ದಾರೆ. ಸಂಪರ್ಕವೊಂದಕ್ಕೆ ಖಾಸಗಿ ಕೆಲಸಗಾರರು 15000 ರೂ. ಪಡೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೊಡುವ ಬದಲು ಕನಿಷ್ಠ ಹಣದಲ್ಲೇ ಕೆಲಸ ಆಗುವುದರಿಂದ ಹಲವು ಅಪಾರ್ಟ್‌ಮೆಂಟ್‌ ಕಳ್ಳದಾರಿಯನ್ನು ಹಿಡಿದಿವೆ. ಅಪಾರ್ಟ್‌ಮೆಂಟ್‌ಗಳು ಅಕ್ರಮವಾಗಿ ಒಳಚರಂಡಿ ಸಂಪರ್ಕ ಪಡೆಯುತ್ತಿರುವ ಕುರಿತು ಸ್ಥಳೀಯರಾದ ಉಮೇಶ್‌ ಮತ್ತು ನಾಗರಾಜ್‌ ಎಂಬುವವರು ಹಾಗೂ ಪಾಲಿಕೆಗೆ ದೂರು ನೀಡಿದ್ದಾರೆ. ''ಒಳಚರಂಡಿ ಸಂಪರ್ಕಕ್ಕೆ ಎಂದು ಪ್ರತಿ ನಿವಾಸಿಗಳಿಂದ ಕ್ಷೇಮಾಭಿವೃದ್ಧಿ ಸಂಘದವರು 2000 ರೂ. ಪಡೆದಿದ್ದಾರೆ. ನಮ್ಮಲ್ಲಿ 20 ಫ್ಲ್ಯಾಟ್‌ಗಳಿದ್ದು, ಹೀಗೆ ಸಂಗ್ರಹಿಸಿದ ಮೊತ್ತ 40000 ರೂ. ಆಗುತ್ತದೆ. ನಮ್ಮ ಅಪಾರ್ಟ್‌ಮೆಂಟ್‌ನವರು ಸೇರಿದಂತೆ ಹೆಚ್ಚಿನವರು ಅಕ್ರಮವಾಗಿ ಒಳಚರಂಡಿ ನೀರಿನ ಸಂಪರ್ಕ ಪಡೆಯುತ್ತಿದ್ದಾರೆ. ಇದಕ್ಕೆ 15000 ರೂ. ಮಾತ್ರ ವೆಚ್ಚವಾಗುತ್ತದೆ. ಉಳಿದ ಹಣವನ್ನು ಅಸೋಸಿಯೇಶನ್‌ನವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ಸಂಪರ್ಕ ಪಡೆದಿರುವುದು ಜಲಮಂಡಳಿಗೆ ಗೊತ್ತಾದರೆ ದಂಡ ಕಟ್ಟಬೇಕು. ಇದರ ಅರಿವಿದ್ದೂ ಅಸೋಸಿಯೇಶನ್‌ಗಳು ಕಳ್ಳಮಾರ್ಗ ಹಿಡಿದಿವೆ,'' ಎಂದು ಹೆಸರು ಹೇಳಲಿಚ್ಛಿಸದ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ. ಜಲಮಂಡಳಿ ಅಸಿಸ್ಟೆಂಟ್‌ ಇಂಜಿನಿಯರ್‌ ವಿನಯ್‌ ಕುಮಾರ್‌ ಅವರನ್ನು ಈ ಬಗ್ಗೆ ಮಾತನಾಡಿಸಿದಾಗ, ''ಜಲಮಂಡಳಿ ಪೈಪ್‌ಗಳನ್ನು ಯಾರೊಬ್ಬರೂ ಅಗೆಯುವಂತಿಲ್ಲ. ಹಾಗೆ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು,'' ಎಂದರು. ಅಕ್ರಮ ಸಂಪರ್ಕಕ್ಕೆ ದಂಡ 110 ಹಳ್ಳಿಗಳಿಗೆ ನೀರೊದಗಿಸುವ ಜಲಮಂಡಳಿ ಯೋಜನೆಯ ಎಇ ರಂಗಪ್ಪ ಅವರನ್ನು ಈ ಬಗ್ಗೆ ಕೇಳಿದಾಗ, ''ಯಾವುದೇ ಅಪಾರ್ಟ್‌ಮೆಂಟ್‌ ಆದರೂ ನಿಗದಿತ ಠೇವಣಿ ಮೊತ್ತವನ್ನು ಕಟ್ಟಿ ಒಳಚರಂಡಿ ಸಂಪರ್ಕ ಪಡೆಯಬೇಕು. ನಮ್ಮ ಸಿಬ್ಬಂದಿಯೇ ಸಂಪರ್ಕ ನೀಡಬೇಕು. ಖಾಸಗಿ ವ್ಯಕ್ತಿಗಳಿಂದ ಈ ಕೆಲಸ ಮಾಡಿಸುವಂತಿಲ್ಲ. ಅಕ್ರಮವಾಗಿ ಸಂಪರ್ಕ ಪಡೆದಿರುವುದು ಕಂಡು ಬಂದಲ್ಲಿ ತಕ್ಷಣ ಸ್ಥಗಿತಗೊಳಿಸುತ್ತೇವೆ. ಅಸೋಸಿಯೇಶನ್‌ಗೆ ದಂಡವನ್ನೂ ವಿಧಿಸುತ್ತೇವೆ,'' ಎಂದರು. ಎಸ್‌ಟಿಪಿ ನಿಯಮ ಉಲ್ಲಂಘನೆ2015ರ ನಂತರ ಕಟ್ಟಿರುವ ಅರ್ಪಾಮೆಂಟ್‌ಗಳಲ್ಲಿ 20 ಹೆಚ್ಚು ಪ್ಲಾಟ್‌ಗಳು ಇದ್ದರೆ ಅವುಗಳು ಎಸ್‌ಟಿಪಿ ಅಳವಡಿಸಿಕೊಳ್ಳುವುದು ಕಡ್ಡಾಯ. ಆದರೆ 40-50 ಫ್ಲ್ಯಾಟ್‌ ಇರುವ ಅಪಾರ್ಟ್‌ಮೆಂಟ್‌ಗಳಲ್ಲೂ ಎಸ್‌ಟಿಪಿ ಅಳವಡಿಸಿರುವುದು ಕಂಡು ಬಂದಿಲ್ಲ.