ಪೌರಕಾರ್ಮಿಕರ ಕೊರತೆ: ಸ್ವಚ್ಛ ನಗರಿಯ ಗರಿಮೆಗೆ ಹಿನ್ನಡೆ; ಕಡಿಮೆ ಸಂಬಳ, ಸೌಲಭ್ಯವೂ ಇಲ್ಲ!

ಕಾಯಂ ಪೌರಕಾರ್ಮಿಕರಿಗೆ ತಿಂಗಳಿಗೆ 30 ಸಾವಿರ ರೂ.ನಿಂದ 35 ಸಾವಿರ ರೂ.ವೇತನ ಸೇರಿ ಡಿ ದರ್ಜೆ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ಸಿಗುತ್ತವೆ. ಆದರೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಗೆ 13 ಸಾವಿರ ರೂ.ವೇತನ ನೀಡಲಾಗುತ್ತಿದೆ.

ಪೌರಕಾರ್ಮಿಕರ ಕೊರತೆ: ಸ್ವಚ್ಛ ನಗರಿಯ ಗರಿಮೆಗೆ ಹಿನ್ನಡೆ; ಕಡಿಮೆ ಸಂಬಳ, ಸೌಲಭ್ಯವೂ ಇಲ್ಲ!
Linkup
ಎಚ್‌.ಪಿ. ಪುಣ್ಯವತಿ, ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ 4,251 ಪೌರಕಾರ್ಮಿಕರ ಹುದ್ದೆಗಳು ಖಾಲಿಯಿದ್ದು, ಸಿಬ್ಬಂದಿಯ ಕೊರತೆ ಎದುರಾಗಿದೆ. ಇದರಿಂದ ಕೇಂದ್ರ ಸರಕಾರದ 'ಸ್ವಚ್ಛ ನಗರಿ' ಎಂಬ ಗರಿಮೆ ಪಡೆಯಲೂ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ. ಪ್ರತಿ 500 ಜನರಿಗೆ ಒಬ್ಬ ಪೌರಕಾರ್ಮಿಕರಿರಬೇಕೆಂಬ ನಿಯಮವಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕದ್ದಾರೆ. ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿಲ್ಲ. ರಾಜ್ಯದಲ್ಲಿ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳಿವೆ. 16,732 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,794 ಕಾಯಂ ಪೌರಕಾರ್ಮಿಕರು, 6,687 ನೇರ ಪಾವತಿ, ದಿನಗೂಲಿ ಅಥವಾ ಗುತ್ತಿಗೆ ಸೇರಿ ಒಟ್ಟು 12,481 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 4,251 ಹುದ್ದೆಗಳು ಖಾಲಿಯಿವೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಹೆಚ್ಚು ಕೊರತೆಯಿದ್ದು, 570 ಹುದ್ದೆಗಳು ಖಾಲಿಯಿವೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 18 ಸಾವಿರ ಪೌರಕಾರ್ಮಿಕರಿದ್ದು, 1,500 ಮಂದಿ ಕಾಯಂ ಆಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಕಡಿಮೆ ವೇತನ ಕಾಯಂ ಪೌರಕಾರ್ಮಿಕರಿಗೆ ತಿಂಗಳಿಗೆ 30 ಸಾವಿರ ರೂ.ನಿಂದ 35 ಸಾವಿರ ರೂ.ವೇತನ ಸೇರಿ ಡಿ ದರ್ಜೆ ನೌಕರರಿಗೆ ದೊರೆಯುವ ಎಲ್ಲ ಸೌಲಭ್ಯಗಳು ಸಿಗುತ್ತವೆ. ಆದರೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಿಂಗಳಿಗೆ 13 ಸಾವಿರ ರೂ.ವೇತನ ನೀಡಲಾಗುತ್ತಿದೆ. ''ಕಾಯಂ ಸಿಬ್ಬಂದಿ ಮಾದರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಗ್ಗೆ ಸ್ವಚ್ಛತೆ ಮಾಡುತ್ತಿದ್ದೇವೆ. ವೇತನದಲ್ಲಿ ಕಡಿತಗೊಳ್ಳುವ ಇಎಸ್‌ಐ, ಪಿಎಫ್‌ ಹೊರತುಪಡಿಸಿ ಯಾವುದೇ ರೀತಿಯ ವೈದ್ಯ ಸೌಲಭ್ಯಗಳು ಸಿಗುತ್ತಿಲ್ಲ. ಅಲ್ಲದೆ, ಕೆಲ ಗುತ್ತಿಗೆದಾರರು ಇಎಸ್‌ಐ ಹಾಗೂ ಪಿಎಫ್‌ ಪಾವತಿಸುತ್ತಿಲ್ಲ. ಮನೆ, ಮಠ ಎಲ್ಲವನ್ನೂ ಬಿಟ್ಟು ಬೆಳಗ್ಗೆ ಚಳಿ, ಗಾಳಿ, ಮಳೆ ಎನ್ನದೆ ಬಂದು ರಸ್ತೆ ಗುಡಿಸಬೇಕು. ಮನೆಗಳ ಮುಂದೆ ಎಸೆದಿರುವ ಗಬ್ಬು ನಾರುವ ಸತ್ತ ಇಲಿ, ಹೆಗ್ಗಣ ಎಲ್ಲವನ್ನೂ ಗುಡಿಸಬೇಕು. ಇಷ್ಟು ಕಡಿಮೆ ವೇತನಕ್ಕೆ ನಾವು ಹೇಗೆ ಕೆಲಸ ಮಾಡುವುದು?'' ಎಂದು ಆರೋಪಿಸುತ್ತಾರೆ ಹೆಬ್ಬಾಳದ ಪೌರಕಾರ್ಮಿಕರಾದ ನಾರಾಯಣಮ್ಮ. 22 ವಸ್ತುಗಳು ನೀಡುತ್ತಿಲ್ಲ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿಶ್ರಾಂತಿ, ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸೆ, ಶುಚಿತ್ವ ಸೌಲಭ್ಯ, ಸಮವಸ್ತ್ರ, ಹ್ಯಾಂಡ್‌ ಗ್ಲೌಸ್, ಟೋಪಿ, ರಬ್ಬರ್‌ ಶೂಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಪೊರಕೆ, ತರಿಮಣಿ, ಸನಿಕೆ, ಮಾಸ್ಕ್‌, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಾಣೆ ತಳ್ಳು ಬಂಡಿ, ಫಿನಾಯಲ್‌ ಹಾಗೂ ಬ್ಲೀಚಿಂಗ್‌ ಪೌಡರ್‌ ಸೇರಿ 22 ವಸ್ತುಗಳ ಸೌಲಭ್ಯವನ್ನು ಒದಗಿಸಬೇಕು. ಆದರೆ ಬಹುತೇಕ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಈ ಸೌಲಭ್ಯಗಳಿಲ್ಲ. ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗೆ ಸರಿಯಾಗಿ ಮಾಸಿಕ ವೇತನವನ್ನೂ ನೀಡುತ್ತಿಲ್ಲ ಎನ್ನುತ್ತಾರೆ ಪೌರ ಕಾರ್ಮಿಕರ ಸಂಘಟನೆಯ ಸದಸ್ಯ ಪಳನಿರಾಜ್‌. ಜಿಲ್ಲಾವಾರು ಖಾಲಿ ಹುದ್ದೆಗಳು ಬೆಳಗಾವಿ-570, ಬಳ್ಳಾರಿ-407, ಬೆಂಗಳೂರು-291, ಉತ್ತರ ಕನ್ನಡ-262, ರಾಯಚೂರು-249, ದಕ್ಷಿಣ ಕನ್ನಡ-218, ಗದಗ- 206, ಬೀದರ್‌-198, ಚಿತ್ರದುರ್ಗ-166, ಕೋಲಾರ -131, ವಿಜಯಪುರ-126, ಮೈಸೂರು -124, ಚಿಕ್ಕಬಳ್ಳಾಪುರ- 121, ಕಲಬುರಗಿ -120, ಶಿವಮೊಗ್ಗ- 118, ಯಾದಗಿರಿ- 117, ಹಾವೇರಿ -117, ಹಾಸನ- 106, ಬಾಗಲಕೋಟೆ -103, ಬೆಂಗಳೂರು ಗ್ರಾಮಾಂತರ- 88, ತುಮಕೂರು -80, ರಾಮನಗರ -79, ಉಡುಪಿ- 73, ದಾವಣಗೆರೆ-63, ಧಾರವಾಡ -50, ಕೊಪ್ಪಳ -33, ಚಾಮರಾಜನಗರ -20, ಕೊಡಗು -15, ಮಂಡ್ಯ ಮತ್ತು ಚಿಕ್ಕಮಗಳೂರು ತಲಾ 8 ಹುದ್ದೆಗಳು ಖಾಲಿಯಿವೆ.