ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಿದ ಮಂಗಳೂರು ನಗರಪಾಲಿಕೆ!

ಮಂಗಳೂರು ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಸ್ತಿ ತೆರಿಗೆಯನ್ನು ಆನ್‌ ಲೈನ್‌ ಮೂಲಕ ಪಾವತಿಸಲು ಮತ್ತು ಆಸ್ತಿ ಹಾಗೂ ಪಾವತಿಗಳ ವಿವರಗಳನ್ನು ಪರಿಶೀಲಿಸಲು ವೆಬ್‌ ಅಪ್ಲಿಕೇಶನ್‌ಗೆ ಪಾಲಿಕೆ ಚಾಲನೆ ನೀಡಲಾಗಿದೆ.

ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಿದ ಮಂಗಳೂರು ನಗರಪಾಲಿಕೆ!
Linkup
ಮಂಗಳೂರು: ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಸ್ತಿ ತೆರಿಗೆಯನ್ನು ಆನ್‌ ಲೈನ್‌ ಮೂಲಕ ಪಾವತಿಸಲು ಮತ್ತು ಆಸ್ತಿ ಹಾಗೂ ಪಾವತಿಗಳ ವಿವರಗಳನ್ನು ಪರಿಶೀಲಿಸಲು ವೆಬ್‌ ಅಪ್ಲಿಕೇಶನ್‌ಗೆ ಪಾಲಿಕೆ ಚಾಲನೆ ನೀಡಲಾಗಿದೆ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ. ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಆಸ್ತಿ ತೆರಿಗೆ ಪಾವತಿ ಆನ್‌ಲೈನ್‌ ವ್ಯವಸ್ಥೆ ವೆಬ್‌ ಅಪ್ಲಿಕೇಶನ್‌ ಲೋಕಾರ್ಪಣೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಮನೆ ಅಥವಾ ಯಾವುದೇ ಸ್ಥಳದಿಂದ ಸುಲಭವಾಗಿ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಮೊತ್ತವನ್ನು ಪಾವತಿ ಮಾಡಬಹುದಾಗಿದೆ. ಜನಸ್ನೇಹಿ ತಂತ್ರಾಂಶವಾಗಿರುವ ಈ ಅಪ್ಲಿಕೇಶನ್‌ನಲ್ಲಿ ತಮ್ಮ ಆಸ್ತಿಯ ಸಂಪೂರ್ಣ ಮಾಹಿತಿ, ಹಿಂದಿನ ಸಾಲುಗಳಲ್ಲಿ ಕಟ್ಟಿರುವ ಮತ್ತು ಮುಂದೆ ಕಟ್ಟಬೇಕಾಗಿರುವ ಮೊತ್ತಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಬಾಕಿ ಇರುವ ಮೊತ್ತವನ್ನು ಪಾವತಿಸಲೂ ಸಹ ಅನುಕೂಲವಾಗಲಿದೆ ಎಂದರು. ಹಾಲಿ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಆರ್ಥಿಕ ವಹಿವಾಟುಗಳಿಗೆ ಡಿಜಿಟಲ್‌ ಪಾವತಿ ತಂತ್ರಜ್ಞಾನದ ವ್ಯವಸ್ಥೆಯನ್ನು ಬಳಸಕೊಳ್ಳಲಾಗುತ್ತಿದ್ದು, ಸಾರ್ವಜನಿಕ ದೈನಂದಿನ ಜೀವನದಲ್ಲಿ ಮಹತ್ವ ಪಡೆದುಕೊಂಡಿರುತ್ತದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ಸಹ ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆಗಳನ್ನು ಅಳವಡಿಸಲು ಸಾರ್ವಜನಿಕ ವಲಯದಿಂದ, ಪಾಲಿಕೆಯ ವ್ಯಾಪ್ತಿಗಳಲ್ಲಿ ಮತ್ತು ಪರವೂರುಗಳಲ್ಲಿ ನೆಲೆಸಿರುವ ನಾಗರಿಕರಿಂದ ಹಲವಾರು ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಆನ್‌ಲೈನ್‌ ವ್ಯವಸ್ಥೆಯನ್ನು ಮಾಡಿದೆ ಎಂದರು. ಶಾಸಕರಾದ ಡಿ. ವೇದವ್ಯಾಸ್‌ ಕಾಮತ್‌, ಡಾ.ವೈ.ಭರತ್‌ ಶೆಟ್ಟಿ, ಉಪ ಮೇಯರ್‌ ಸುಮಂಗಲಾ ರಾವ್‌, ಪಾಲಿಕೆ ಮುಖ್ಯ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್‌ ಗರೋಡಿ, ಲೀಲಾ ಪ್ರಕಾಶ್‌, ಶೋಭಾ ರಾಜೇಶ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ನೂತನ ವೆಬ್‌ ಲೋಕಾರ್ಪಣೆ ಸಂದರ್ಭ ಉಪಸ್ಥಿತರಿದ್ದರು. ಆನ್‌ಲೈನ್‌ ಪಾವತಿ ಹೇಗೆ? ಆಸ್ತಿ ತೆರಿಗೆ ಪಾವತಿದಾರರು ಮೊದಲು ಅಧಿಕೃತ ವೆಬ್‌ಸೈಟ್ ಲಿಂಕ್‌ ಮೂಲಕ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಬರುವ ಒಟಿಪಿಯನ್ನು ದಾಖಲಿಸಿ. ನಂತರ, ನಿಮ್ಮ ಆಸ್ತಿಯ ಭೂಪರಿವರ್ತನೆ ಆಗಿದೆಯೇ ಎಂಬುದನ್ನು ಖಚಿತಪಡಿಸಿ. ಆಗಿದ್ದಲ್ಲಿ, ರಸ್ತೆ ವಿಸ್ತೀರ್ಣಕ್ಕೆ ಮಾಡಿರುವ ದಾನ ಪತ್ರದ ಬಗ್ಗೆ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಬೇಕು. ಕಟ್ಟಡ ಸಂಖ್ಯೆ, ಖಾತಾ ಸಂಖ್ಯೆ, ಪ್ರಾಪರ್ಟಿ ಐಡಿ, ಆಸ್ತಿದಾರರ ವಿಳಾಸಗಳನ್ನು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ, ಅಗತ್ಯವಿರುವ ಮಾಹಿತಿ ಭರ್ತಿ ಮಾಡುವುದು. ಆಸ್ತಿಯಲ್ಲಿ ಬಾಡಿಗೆದಾರರು ಇದ್ದರೆ, ಅವರ ಮಾಹಿತಿ ದಾಖಲಿಸುವುದು. ನಿಮ್ಮ ಆಸ್ತಿ ಬರುವ ರಸ್ತೆಯನ್ನು ಆಯ್ಕೆ ಮಾಡಿ, ಆಸ್ತಿಯ ವಿಧ (ವಾಣಿಜ್ಯ, ವಸತಿ, ವಾಣಿಜ್ಯೇತರ) ದಾಖಲಿಸುವುದು. ಆಸ್ತಿಯ ವಿಸ್ತೀರ್ಣ, ಕಟ್ಟಡದ ವಿಸ್ತೀರ್ಣವನ್ನು ದಾಖಲಿಸಿ, ಕೇಳಿರುವ ವಿವರಗಳನ್ನು ಸಲ್ಲಿಸಿ. ಪಾವತಿಸಬೇಕಾದ ತೆರಿಗೆ ಮೊತ್ತವನ್ನು ಆನ್‌ಲೈನ್‌ ಮೂಲಕ (ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಗೂಗಲ್‌ ಪೇ, ಫೋನ್‌ ಪೇ, ಬ್ಯಾಂಕ್‌ ಟ್ರಾನ್ಸ್‌ಫರ್‌) ಅಥವಾ ಆಫ್‌ಲೈನ್‌ ಆದರೆ ಚಲನ್‌ ಪಡೆದುಕೊಂಡು ಅನುಕೂಲವಾಗುವ ಯಾವುದೇ ಬ್ಯಾಂಕಿನಿಂದ ಸಂಪೂರ್ಣ ಪಾವತಿಯನ್ನು ಮಾಡಬಹುದು.