6 ಲಕ್ಷ ಕೋಟಿ ರೂ. ಆಸ್ತಿ ನಗದೀಕರಣಕ್ಕೆ ಯೋಜನೆ ರೂಪಿಸಿದ ಕೇಂದ್ರ ಸರಕಾರ

ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ರಾಷ್ಟ್ರೀಯ ಹೆದ್ದಾರಿ ಮತ್ತಿತರ ವಲಯಗಳಲ್ಲಿ ಆಸ್ತಿ ನಗದೀಕರಣಕ್ಕೆ ಯೋಜಿಸಲಾಗಿದೆ ಎಂದು ಸಾರ್ವಜನಿಕ ಆಸ್ತಿ ಹೂಡಿಕೆ ಮತ್ತು ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ.

6 ಲಕ್ಷ ಕೋಟಿ ರೂ. ಆಸ್ತಿ ನಗದೀಕರಣಕ್ಕೆ ಯೋಜನೆ ರೂಪಿಸಿದ ಕೇಂದ್ರ ಸರಕಾರ
Linkup
ಹೊಸದಿಲ್ಲಿ: ಸರಕಾರ ನಾನಾ ಇಲಾಖೆಗಳಲ್ಲಿನ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ನಗದೀಕರಣಗೊಳಿಸಲು ಯೋಜಿಸಿದೆ. ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಪಿಜಿಸಿಐಎಲ್‌), ರಾಷ್ಟ್ರೀಯ ಹೆದ್ದಾರಿ ಮತ್ತಿತರ ವಲಯಗಳಲ್ಲಿ ನಗದೀಕರಣಕ್ಕೆ ಯೋಜಿಸಲಾಗಿದೆ ಎಂದು ಸಾರ್ವಜನಿಕ ಆಸ್ತಿ ಹೂಡಿಕೆ ಮತ್ತು ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸಲು ಟೆಂಡರ್‌ಗಳನ್ನು ಕರೆಯಲಾಗಿದೆ. ಏರ್‌ಪೋರ್ಟ್‌ ಮಾದರಿಯಲ್ಲಿ ರೈಲ್ವೆ ನಿಲ್ದಾಣಗಳನ್ನೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ವಿವರಿಸಿದರು. ಖಾಸಗಿ ಸಹಭಾಗಿತ್ವಕ್ಕೆ ಸಾಧ್ಯತೆ ಇರುವ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಯ ನಗದೀಕರಣ ನಡೆಯಲಿದೆ ಎಂದರು. ನೀತಿ ಆಯೋಗವು ರಾಷ್ಟ್ರೀಯ ನೀಲನಕ್ಷೆ ತಯಾರಿಸಿದ್ದು, ಇಲಾಖೆಗಳಿಗೆ ಗುರಿ ನೀಡಲಾಗಿದೆ. ಏನಿದು ಸರಕಾರಿ ಆಸ್ತಿ ನಗದೀಕರಣ? ಸರಕಾರಕ್ಕೆ ಹೊಸ ಆದಾಯ ಮೂಲವನ್ನು ಸೃಷ್ಟಿಸಲು ಸರಕಾರದ ನಾನಾ ಇಲಾಖೆಯಲ್ಲಿ ಬಳಕೆಯಾಗದೆ ಉಳಿದಿರುವ ಅಥವಾ ಭಾಗಶಃ ಬಳಕೆಯಲ್ಲಿರುವ ಆಸ್ತಿಗಳ ಸಂಪೂರ್ಣ ಬಳಕೆಯನ್ನು ಆಸ್ತಿ ನಗದೀಕರಣ ಎನ್ನುತ್ತಾರೆ. ಇದು ಸಾರ್ವಜನಿಕ ಆಸ್ತಿಯ ಬಂಡವಾಳ ಹಿಂತೆಗೆತ ಅಥವಾ ಮಾರಾಟವಲ್ಲ. ಸಾರ್ವಜನಿಕ ಸ್ಥಿರ ಅಥವಾ ಚರ ಆಸ್ತಿಯ ಸಮಗ್ರ ಬಳಕೆ. ರಸ್ತೆ, ರೈಲ್ವೆ ನಿಲ್ದಾಣ, ಮೊಬೈಲ್‌ ಗೋಪುರ, ಪೈಪ್‌ ಲೈನ್‌ ಇತ್ಯಾದಿ ಆಸ್ತಿಗಳನ್ನು ಬಳಸಿಕೊಂಡು ಸರಕಾರದ ಆದಾಯ ಹೆಚ್ಚಿಸುವುದು. ಇದಕ್ಕೆ ಖಾಸಗಿ ಸಹಭಾಗಿತ್ವವನ್ನೂ ಬಳಸಬಹುದು. ಸರಕಾರ 100 ಸರಕಾರಿ ಆಸ್ತಿಗಳ ನಗದೀಕರಣಕ್ಕೆ ಗುರುತಿಸಿದೆ.