
ಹೊಸದಿಲ್ಲಿ: ಭಾರತದ ಅತಿ ದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ () 40,000 ಮಂದಿ ಪದವೀಧರರನ್ನು ಈ ವರ್ಷ ಕ್ಯಾಂಪಸ್ ಸಂದರ್ಶನಗಳ ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ.
ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕದಲ್ಲೂ 2,000 ನೇಮಕಾತಿ ನಡೆಸುವುದಾಗಿ ತಿಳಿಸಿದೆ. ಭಾರತದಲ್ಲಿ ಹೊಸಬರನ್ನು ನೇಮಕಗೊಳಿಸಿ, ತರಬೇತಿ ಕೊಟ್ಟು ತನ್ನ ಪ್ರಾಜೆಕ್ಟ್‌ಗಳ ನಿರ್ವಹಣೆಗೆ ನಿಯುಕ್ತಿಗೊಳಿಸುವುದರಲ್ಲಿ ಟಿಸಿಎಸ್ ಯಶಸ್ವಿಯಾಗಿದೆ. ಅದೇ ಮಾದರಿಯನ್ನು ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಕೂಡ ಅಳವಡಿಸಲು ಮುಂದಾಗಿದೆ.
ಪ್ರಸ್ತುತ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದ್ದು, ಖಾಸಗಿ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವ ಕಂಪನಿಯಾಗಿ ಟಿಸಿಎಸ್ ಹೊರಹೊಮ್ಮಿದೆ. 2020ರಲ್ಲಿ ಟಿಸಿಎಸ್ 40 ಸಾವಿರ ಉದ್ಯೋಗಿಗಳನ್ನು ನೇಮಿಸಿತ್ತು. ಕಳೆದ ಏಪ್ರಿಲ್-ಜೂನ್‌ನಲ್ಲಿ ಕಂಪನಿ 20,409 ಮಂದಿಯನ್ನು ನೇಮಿಸಿತ್ತು. 155 ರಾಷ್ಟ್ರಗಳ ಉದ್ಯೋಗಿಗಳನ್ನು ಟಿಸಿಎಸ್ ಒಳಗೊಂಡಿದ್ದು, ಅದರಲ್ಲಿ ಶೇ.36ರಷ್ಟು ಮಂದಿ ಮಹಿಳೆಯರೇ ಆಗಿರುವುದು ವಿಶೇಷ.
"ಭಾರತದಲ್ಲಿ ಪ್ರತಿಭಾವಂತ ಯುವ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಸ್ಟಾರ್ಟಪ್‌ಗಳ ಅಭಿವೃದ್ಧಿಯಿಂದಲೂ ಯಾವುದೇ ಸಮಸ್ಯೆ ಉಂಟಾಗಿಲ್ಲ," ಎಂದು ಟಿಸಿಎಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಎನ್‌ಜಿ ಸುಬ್ರಮಣಿಯನ್ ತಿಳಿಸಿದ್ದಾರೆ.
''ಕೆಲವರು ಪೋಲೆಂಡ್ ಮತ್ತು ಪೂರ್ವ ಯುರೋಪ್‌ಗಿಂತ ಭಾರತದಲ್ಲಿ ಟೆಕ್ಕಿಗಳ ವೇತನ ಹೆಚ್ಚು ಎನ್ನುತ್ತಾರೆ. ಒಂದು ವೇಳೆ ಹಾಗೆಯೇ ಆಗಿದ್ದರೆ ಅದಕ್ಕೆ ಕಾರಣ ಬಹುರಾಷ್ಟ್ರೀಯ ಕಂಪನಿಗಳು ಭಾರತದ ಪ್ರತಿಭಾವಂತ ಸಂಪನ್ಮೂಲಕ್ಕೆ ನೀಡುತ್ತಿರುವ ಆದ್ಯತೆ'' ಎಂದು ಅವರು ತಿಳಿಸಿದ್ದಾರೆ.
ಟಿಸಿಎಸ್ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 45,111 ಕೋಟಿ ರೂ. ಆದಾಯ ಗಳಿಸಿತ್ತು. 9,008 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಟಿಸಿಎಸ್ ಕಳೆದ ಜನವರಿ-ಮಾರ್ಚ್‌ನಲ್ಲಿ 8.1 ಶತಕೋಟಿ ಡಾಲರ್ (ಅಂದಾಜು 59,130 ಕೋಟಿ ರೂ.) ಮೌಲ್ಯದ ಆರ್ಡರ್‌ಗಳನ್ನು ಗಳಿಸಿದೆ.