ಲಡಾಕ್‌ ರಸ್ತೆ ಪೂರ್ಣ: ವಿಶ್ವದಲ್ಲೇ ಎತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಿದ ದಾಖಲೆ..!

ಪೂರ್ವ ಲಡಾಕ್‌ನ ಚುಮಾರ್‌ ಪ್ರದೇಶದ ಹಲವು ಪಟ್ಟಣಗಳಿಗೆ ಉಮ್ಲಿಂಗ್ಲಾ ಪಾಸ್‌ ಮೂಲಕ ಸಂಪರ್ಕ ಕಲ್ಪಿಸಲು 52 ಕಿ.ಮೀ. ಉದ್ದದ ಡಾಂಬರು ರಸ್ತೆ ನಿರ್ಮಿಸಿದ್ದು, ಲೇಹ್‌ನಿಂದ ಚಿಸುಮ್ಲೆ ಹಾಗೂ ಡೆಮ್ಚೋಕ್‌ಗೆ ಪರ್ಯಾಯ ಮಾರ್ಗವೂ ಸಿಕ್ಕಂತಾಗಿದೆ.

ಲಡಾಕ್‌ ರಸ್ತೆ ಪೂರ್ಣ: ವಿಶ್ವದಲ್ಲೇ ಎತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಿದ ದಾಖಲೆ..!
Linkup
ಲೇಹ್‌: ಪೂರ್ವ ಲಡಾಕ್‌ನ ಉಮ್ಲಿಂಗ್ಲಾ ಪಾಸ್‌ನಲ್ಲಿ ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ)ಯು ಸಮುದ್ರ ಮಟ್ಟದಿಂದ 19,300 ಅಡಿ ಎತ್ತರದಲ್ಲಿ ನಿರ್ಮಿಸಿದ್ದು, ವಿಶ್ವದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ ಮಾಡಿದೆ. ಬೊಲಿವಿಯಾದಲ್ಲಿ 18,953 ಅಡಿ ಎತ್ತರದಲ್ಲಿ ರಸ್ತೆ ನಿರ್ಮಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. 'ಪೂರ್ವ ಲಡಾಕ್‌ನ ಚುಮಾರ್‌ ಪ್ರದೇಶದ ಹಲವು ಪಟ್ಟಣಗಳಿಗೆ ಉಮ್ಲಿಂಗ್ಲಾ ಪಾಸ್‌ ಮೂಲಕ ಸಂಪರ್ಕ ಕಲ್ಪಿಸಲು 52 ಕಿ.ಮೀ. ಉದ್ದದ ಡಾಂಬರು ರಸ್ತೆ ನಿರ್ಮಿಸಿದ್ದು, ಲೇಹ್‌ನಿಂದ ಚಿಸುಮ್ಲೆ ಹಾಗೂ ಡೆಮ್ಚೋಕ್‌ಗೆ ಪರ್ಯಾಯ ಮಾರ್ಗವೂ ಸಿಕ್ಕಂತಾಗಿದೆ. ಅಲ್ಲದೆ, ಇದರಿಂದ ಲಡಾಕ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 'ಎತ್ತರ ಪ್ರದೇಶಗಳಿಗೆ ರಸ್ತೆ ನಿರ್ಮಾಣದ ಸಲಕರಣೆ ಕೊಂಡೊಯ್ಯುವುದು, -40 ಡಿಗ್ರಿ ತಾಪಮಾನದಂತಹ ಸಮಸ್ಯೆಗಳ ಮಧ್ಯೆಯೂ ಬಿಆರ್‌ಒ ಯಶಸ್ವಿಯಾಗಿ ರಸ್ತೆ ಕಾಮಗಾರಿ ಮುಗಿಸಿದೆ' ಎಂದು ಹೇಳಿದೆ. ನೇಪಾಳದಲ್ಲಿರುವ ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ನಲ್ಲಿ 17,598 ಅಡಿ ಎತ್ತರದಲ್ಲಿ ನಿರ್ಮಿಸಿರುವ ರಸ್ತೆ ಹಾಗೂ ಟಿಬೆಟ್‌ನ ಉತ್ತರ ಬೇಸ್‌ ಕ್ಯಾಂಪ್‌ನಲ್ಲಿ 16,900 ಅಡಿ ಎತ್ತರದಲ್ಲಿನ ರಸ್ತೆಗಳು ಸಹ ಅತಿ ಎತ್ತರದ ಪ್ರದೇಶಗಳ ರಸ್ತೆ ಎಂಬ ಹಿರಿಮೆ ಹೊಂದಿವೆ.