ಜಿ7 ಶೃಂಗಸಭೆ: ಕೋವಿಡ್ ಲಸಿಕೆ ಪೇಟೆಂಟ್ ವಿನಾಯಿತಿಯ ಬೇಡಿಕೆ ಇರಿಸಿದ ಪ್ರಧಾನಿ ಮೋದಿ

ಜಿ7 ಶೃಂಗಸಭೆಯಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಬಾಪ್ರಭುತ್ವದ ಮೌಲ್ಯಗಳು, ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದರು. ಜತೆಗೆ ಲಸಿಕೆಗಳ ಪೇಟೆಂಟ್ ಮನ್ನಾಕ್ಕೆ ಬೆಂಬಲ ಕೋರಿದರು.

ಜಿ7 ಶೃಂಗಸಭೆ: ಕೋವಿಡ್ ಲಸಿಕೆ ಪೇಟೆಂಟ್ ವಿನಾಯಿತಿಯ ಬೇಡಿಕೆ ಇರಿಸಿದ ಪ್ರಧಾನಿ ಮೋದಿ
Linkup
ಹೊಸದಿಲ್ಲಿ: ಭಾರತವು ಜಿ 7 ದೇಶಗಳ ಸಹಜ ಮಿತ್ರ ದೇಶವಾಗಿದ್ದು, ಸಾಮಾನ್ಯ ಮೌಲ್ಯಗಳು ಹಾಗೂ ಕಾಳಜಿಗಳನ್ನು ಹಂಚಿಕೊಂಡಿದೆ ಎಂದು ಪ್ರಧಾನಿ ಭಾನುವಾರ ಹೇಳಿದರು. ಜಿ7 ಶೃಂಗಸಭೆಯಲ್ಲಿ ಆನ್‌ಲೈನ್‌ ಮೂಲಕ ಮಾತನಾಡಿದ ಪ್ರಧಾನಿ, ಪ್ರಜಾಪ್ರಭುತ್ವ, ಆಲೋಚನೆಯ ಸ್ವಾತಂತ್ರ್ಯ ಮತ್ತು ಮುಕ್ತತೆಗೆ ನಾಗರಿಕತೆಯ ಬದ್ಧತೆಯನ್ನು ಪ್ರತಿಪಾದಿಸಿದರು. ಭಾರತವು ನಿರಂಕುಶಾಧಿಕಾರ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದದ ಬೆದರಿಕೆಗಳನ್ನು ಎದುರಿಸುವಲ್ಲಿ ಭಾರತವು ಸಾಮಾನ್ಯ ಮೌಲ್ಯಗಳನ್ನು ಹಂಚಿಕೊಂಡಿದೆ ಎಂದು ಹೇಳಿದರು. ಜಿ7 ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದ ಮೋದಿ, ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಟ್ರಿಪ್ಸ್ ಮನ್ನಾದ ಪ್ರಸ್ತಾಪಕ್ಕೆ ಬೆಂಬಲ ಕೋರಿದರು. ಇಡೀ ಜಾಗತಿಕ ಜನಸಂಖ್ಯೆಗೆ ನೀಡಲು ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಅನುಕೂಲವಾಗುವಂತೆ ಜಾಗತಿಕ ಲಸಿಕೆ ಯೋಜನೆಗೆ ಮಹತ್ವದ ಸಂಗತಿಯಾಗಿರುವ ಪೇಟೆಂಟ್ ಹಾಗೂ ಇತರೆ ನಿರ್ಬಂಧಗಳ ವಿನಾಯಿತಿಯನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ರತಿಪಾದಿಸಿವೆ. ಜಾಗತಿಕ ಆರೋಗ್ಯ ಲಸಿಕೆಗಳು, ಪರಿಸರ ಮತ್ತು ಮುಂತಾದವುಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಯಿತು. ಭೂಮಿಯ ವಾತಾವರಣ, ಜೀವವೈವಿಧ್ಯ, ಸಮುದ್ರಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಜಿ7 ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ ಮತ್ತು ಬ್ರಿಟನ್ ಅನ್ನು ಒಳಗೊಂಡ ಸಂಘಟನೆಯಾಗಿದೆ. ಭಾರತವು ಜಿ7 ಭಾಗವಾಗಿರದೆ ಇದ್ದರೂ, ಶೃಂಗಸಭೆಯ ಆತಿಥ್ಯ ವಹಿಸಿರುವ ಬ್ರಿಟನ್‌ನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಸದಸ್ಯ ದೇಶಗಳಲ್ಲದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾಗಳಿಗೂ ಈ ಆಹ್ವಾನ ನೀಡಲಾಗಿದೆ.