ಲಾಕ್‌ಡೌನ್ ನಡುವೆ ಪತ್ನಿಯನ್ನು ಭೇಟಿ ಮಾಡಲು ಬಸ್ ಕಳವು ಮಾಡಿದ ಭೂಪ!

ಕೇರಳದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸುಮಾರು 270 ಕಿಮೀ ದೂರದಲ್ಲಿರುವ ಪತ್ನಿಯನ್ನು ಭೇಟಿ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬ ಖಾಸಗಿ ಬಸ್‌ ಕಳವು ಮಾಡಿ ರಾತ್ರಿಯಿಡೀ ಚಲಾಯಿಸಿಕೊಂಡು ಸಾಗಿದ್ದಾನೆ.

ಲಾಕ್‌ಡೌನ್ ನಡುವೆ ಪತ್ನಿಯನ್ನು ಭೇಟಿ ಮಾಡಲು ಬಸ್ ಕಳವು ಮಾಡಿದ ಭೂಪ!
Linkup
ತಿರುವನಂತಪುರಂ: ಕೋವಿಡ್ ಸೋಂಕು ಪ್ರಸರಣದ ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅದರ ನಡುವೆಯೂ ಅನೇಕರು ಕಾನೂನು ಉಲ್ಲಂಘಿಸುವ ಸಾಹಸಕ್ಕೆ ಕೈಹಾಕುತ್ತಾರೆ. ಕೇರಳದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ನೋಡುವ ಸಲುವಾಗಿ ಮಾಡಿದ ಕಿತಾಪತಿ ಸ್ವತಃ ಪೊಲೀಸರನ್ನು ಕಕ್ಕಾಬಿಕ್ಕಿಯಾಗಿಸಿದೆ. ಕೋವಿಡ್ ನಿಯಂತ್ರಣಕ್ಕಾಗಿ ಕೇರಳದಲ್ಲಿ ಪ್ರಸ್ತುತ ಜಾರಿಯಲ್ಲಿದೆ. ಖಾಸಗಿ, ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಪತ್ನಿಯನ್ನು ಭೇಟಿ ಮಾಡಬೇಕೆಂಬ ಹಠದಿಂದ ದಿನೂಪ್ (30) ಎಂಬಾತ ಕೋಯಿಕ್ಕೋಡ್‌ನ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಒಂದನ್ನು ಎಗರಿಸಿದ್ದಾನೆ. ಶನಿವಾರ ರಾತ್ರಿ ಬಸ್ ಮಾಡಿದ ಆತ, ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಬಸ್ ಚಲಾಯಿಸಿದ್ದಾನೆ. ಕೊನೆಗೆ ಕುಮಾರಕೊಮ್ ಪ್ರವಾಸಿ ತಾಣದಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈಗ ದಿನೂಪ್ ಕೊಯಿಕ್ಕೋಡ್‌ನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಆತ ಬಸ್ ಕಳವು ಮಾಡಿದ ಕುಟ್ಟಿಯಾಡಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ತನಮಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿರುವ ಪತ್ನಿ ಹಾಗೂ ಮಗುವಿನ ಜತೆಗಿರಲು ತಾನು ಬಯಸಿದ್ದಾಗಿ ಪೊಲೀಸರಿಗೆ ದಿನೂಪ್ ತಿಳಿಸಿದ್ದಾನೆ. ಕೊಯಿಕ್ಕೋಡ್‌ನಿಂದ ತಿರುವಲ್ಲಾಕ್ಕೆ 270 ಕಿಮೀ ದೂರವಿದ್ದು, ಲಾಕ್‌ಡೌನ್ ಕಾರಣದಿಂದ ಅಷ್ಟು ದೂರ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ನೋಡಿದ ದಿನೂಪ್, ಸುತ್ತಮುತ್ತ ಯಾರೂ ಇಲ್ಲದ್ದನ್ನು ಗಮನಿಸಿ ಬಸ್ ಏರಿದ್ದಾನೆ. ಹೇಗೋ ಪ್ರಯತ್ನಿಸಿ ಅದನ್ನು ಸ್ಟಾರ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಬಸ್‌ ಟ್ಯಾಂಕ್‌ನಲ್ಲಿ ಇಂಧನ ಭರ್ತಿಯಾಗಿತ್ತು. ಅಲ್ಲಿಂದ ನೇರವಾಗಿ ತಿರುವಲ್ಲಾಕ್ಕೆ ಗಾಡಿ ಚಲಾಯಿಸಿದ್ದಾನೆ. ರಾತ್ರಿ ಎರಡು ಸ್ಥಳಗಳಲ್ಲಿ ಪೊಲೀಸರು ಆತನನ್ನು ತಡೆದು ಪ್ರಶ್ನಿಸಿದ್ದಾರೆ. ಪತ್ತನಮಿಟ್ಟದಿಂದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರುವಂತೆ ತನಗೆ ಸೂಚನೆ ನೀಡಲಾಗಿದೆ ಎಂಬ ಕಾರಣ ಹೇಳಿದ್ದರಿಂದ ಪೊಲೀಸರು ಬಿಟ್ಟುಕಳುಹಿಸಿದ್ದಾರೆ. ಕೊಯಿಕ್ಕೋಡ್‌ನಿಂದ ಹೊರಟು ಆತ ಮಲಪ್ಪುರಂ, ತ್ರಿಶ್ಶೂರ್, ಎರ್ನಾಕುಲಂ ಮೂಲಕ ಹಾದು ಕೊಟ್ಟಾಯಂ ಜಿಲ್ಲೆ ಪ್ರವೇಶಿಸಿದ್ದಾನೆ. ಆದರೆ ಭಾನುವಾರ ಬೆಳಿಗ್ಗೆ ಕುಮಾರಕೊಮ್ ಸ್ಥಳಕ್ಕೆ ತೆರಳಿದಾಗ ಅಲ್ಲಿನ ಪೊಲೀಸರು ತಡೆದು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ದಿನೂಪ್ ಕೆಲವು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ ಸಿಕ್ಕಿಬಿದ್ದಿದ್ದಾನೆ. ಕುಮಾರಕೊಮ್ ಪೊಲೀಸರು ನೀಡಿದ ಮಾಹಿತಿ ಅನ್ವಯ ಅಲ್ಲಿಗೆ ತೆರಳಿದ ಕುಟ್ಟಿಯಾಡಿ ಪೊಲೀಸರು, ದಿನೂಪ್‌ನನ್ನು ತಮ್ಮ ವಶಕ್ಕೆ ಪಡೆದುಕೊಂಡು ಬಸ್ ಅನ್ನು ಚಲಾಯಿಸಿಕೊಂಡು ಮರಳಿದ್ದಾರೆ.