ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ - ಪ್ರಿಯಾಂಕಾ ಗಾಂಧಿ ಭರವಸೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹೊಸ ಭರವಸೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ - ಪ್ರಿಯಾಂಕಾ ಗಾಂಧಿ ಭರವಸೆ
Linkup
ಲಕ್ನೋ: ಶತಾಯಗತಾಯ ಚುನಾವಣೆಯಲ್ಲಿ ಒಂದಿಷ್ಟು ಪ್ರಭಾವ ಬೀರಲೇಬೇಕು ಎಂದು ನಿರ್ಧರಿಸಿರುವ ಪಕ್ಷ ದಿನಕ್ಕೊಂದು ಭರ್ಜರಿ ಭರವಸೆಗಳನ್ನು ಜನರ ಮುಂದಿಡುತ್ತಿದೆ. ಒಂದೊಮ್ಮೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 10 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ಸೋಮವಾರ ವಾದ್ರಾ ಹೊಸ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಶನಿವಾರ ಬಾರಬಂಕಿ ಜಿಲ್ಲೆಯಲ್ಲಿ 'ಪ್ರತಿಜ್ಞಾ ಯಾತ್ರೆ'ಗೆ ಚಾಲನೆ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ, 7 ಭರವಸೆಗಳನ್ನು ಜನರ ಮುಂದಿಟ್ಟಿದ್ದರು. ರೈತರ ಸಾಲ ಮನ್ನಾ, 20 ಲಕ್ಷ ಜನರಿಗೆ ಉದ್ಯೋಗದ ಭರವಸೆಯನ್ನು ಅವರು ನೀಡಿದ್ದರು. “ಕೊರೊನಾ ಅವಧಿಯಲ್ಲಿ ಮತ್ತು ಈಗ ಜ್ವರ ಹರಡುವ ಸಮಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಯ ಶಿಥಿಲ ಸ್ಥಿತಿಯನ್ನು ಎಲ್ಲರೂ ನೋಡಿದ್ದಾರೆ. ಉತ್ತಮ ಮತ್ತು ಅಗ್ಗದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, ಪ್ರಣಾಳಿಕೆ ಸಮಿತಿಯ ಒಪ್ಪಿಗೆಯೊಂದಿಗೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರವು ಯಾವುದೇ ರೋಗದ ಚಿಕಿತ್ಸೆಗಾಗಿ 10 ಲಕ್ಷ ರೂ.ಗಳವರೆಗೆ ನೆರವು ನೀಡಲು ನಿರ್ಧರಿಸಿದೆ," ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹಿಂದಿಯಲ್ಲಿ ಟ್ಟೀಟ್‌ ಮಾಡಿದ್ದಾರೆ. ಇದೇ ರೀತಿ ಈಗಾಗಲೇ ಹಲವು ಭರವಸೆಗಳನ್ನು ಕಾಂಗ್ರೆಸ್‌ ಜನರಿಗೆ ನೀಡಿದೆ. ದೇಶದ ಅತೀ ದೊಡ್ಡ ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಗೋಧಿ ಮತ್ತು ಭತ್ತವನ್ನು ಕ್ವಿಂಟಾಲ್‌ಗೆ 2,500 ರೂ.ಗೆ ಹಾಗೂ ಕಬ್ಬನ್ನು ಕ್ವಿಂಟಾಲ್‌ಗೆ 400 ರೂ. ಖರೀದಿಸುವುದಾಗಿ ಕಾಂಗ್ರೆಸ್‌ ತಿಳಿಸಿದೆ. 20 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿರುವ ಕಾಂಗ್ರೆಸ್, ವಿದ್ಯುತ್‌ ಬಿಲ್‌ನ್ನು ಅರ್ಧಕ್ಕೆ ಇಳಿಸುವುದಾಗಿ ಹೇಳಿದೆ. ಜತೆಗೆ ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ತೊಂದರೆಗೆ ಸಿಲುಕಿರುವ ಕುಟುಂಬಗಳಿಗೆ 25,000 ರೂ. ನೀಡುವುದಾಗಿಯೂ ಪಕ್ಷ ಹೇಳಿದೆ. ಇದಲ್ಲದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ. 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಲಾಗುವುದು. ಪಿಯುಸಿ ಪಾಸ್‌ ಆಗುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ ಹಾಗೂ ಪದವೀಧರ ವಿದ್ಯಾರ್ಥಿನಿಯರಿಗೆ ಇ-ಸ್ಕೂಟರ್‌ ನೀಡುವುದಾಗಿಯೂ ಪಕ್ಷ ಭರವಸೆ ಇತ್ತಿದೆ.