ದೇಶದಲ್ಲಿ ಇಂದು 3.48 ಲಕ್ಷ ಕೋವಿಡ್ ಪ್ರಕರಣ, 4,205 ಸೋಂಕಿತರ ಸಾವು

ಭಾರತದಲ್ಲಿ ಸತತ ಎರಡನೆಯ ದಿನ 3.5 ಲಕ್ಷಕ್ಕಿಂತ ಕಡಿಮೆ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆದರೆ ಕಳೆದ 24 ಗಂಟೆಗಳಲ್ಲಿ 4,205 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದು ಈವರೆಗಿನ ಅತ್ಯಧಿಕ ಸಾವಿನ ಪ್ರಕರಣವಾಗಿದೆ.

ದೇಶದಲ್ಲಿ ಇಂದು 3.48 ಲಕ್ಷ ಕೋವಿಡ್ ಪ್ರಕರಣ, 4,205 ಸೋಂಕಿತರ ಸಾವು
Linkup
ಹೊಸದಿಲ್ಲಿ: ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಸತತ ಇಳಿಕೆಯಾಗುತ್ತಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಕಳೆದ 24 ಗಂಟೆಗಳಲ್ಲಿ 4,205 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಇದು ಈವರೆಗಿನ ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ. ಭಾರತದಲ್ಲಿ ಇಂದು 3,48,421 ಹೊಸ ಪ್ರಕರಣಗಳು ಪತ್ತೆಯಾಗಿವೆ. 3,55,338 ಸೋಂಕಿತರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇದರಿಂದ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಇದುವರೆಗೂ 2,33,40,938 ಪ್ರಕರಣಗಳು ದಾಖಲಾಗಿವೆ. 1,93,82,642 ಮಂದಿ ಸೋಂಕಿತರು ಬಿಡುಗಡೆಯಾಗಿದ್ದಾರೆ. 2,54,197 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ 37,04,099 ಸಕ್ರಿಯ ಪ್ರಕರಣಗಳಿವೆ. ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದ ದೇಶದಲ್ಲಿ, ಸತತ ಎರಡನೆಯ ದಿನ 3.5 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿರುವುದು ಕೊಂಚ ಸಮಾಧಾನ ಮೂಡಿಸಿದೆ. ಈವರೆಗೂ 17,52,35,991 ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ. ಮೇ 5ರಿಂದ ಸುಮಾರು 30 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 19,83,804 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದು ಈವರೆಗೆ ದಿನವೊಂದರಲ್ಲಿ ನಡೆಸಿದ ಅತ್ಯಧಿಕ ಪರೀಕ್ಷೆಯಾಗಿದೆ. ಭಾರತದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾದ B.1.617 ರೂಪಾಂತರಿಯು 44 ದೇಶಗಳಲ್ಲಿ ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.