ರೂಪಾಯಿ ಮೇಲೆ ಅಮೆರಿಕ ನಿಗಾ, ದೊಡ್ಡಣ್ಣನ ನಡೆಗೆ ಭಾರತ ಆಕ್ಷೇಪ

ಭಾರತದ ರೂಪಾಯಿ ಕರೆನ್ಸಿಯನ್ನು ಅಮೆರಿಕ ತನ್ನ ನಿಗಾ ಪಟ್ಟಿಗೆ ಸೇರಿಸಿದ್ದನ್ನು ಭಾರತ ಆಕ್ಷೇಪಿಸಿದ್ದು, "ಅಮೆರಿಕವು ರೂಪಾಯಿಯನ್ನು ತನ್ನ 'ನಿಗಾ ಪಟ್ಟಿ'ಯಲ್ಲಿ ಸೇರ್ಪಡೆಗೊಳಿಸಿರುವುದಕ್ಕೆ ಅರ್ಥ ಇಲ್ಲ" ಎಂದು ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ತಿಳಿಸಿದ್ದಾರೆ.

ರೂಪಾಯಿ ಮೇಲೆ ಅಮೆರಿಕ ನಿಗಾ, ದೊಡ್ಡಣ್ಣನ ನಡೆಗೆ ಭಾರತ ಆಕ್ಷೇಪ
Linkup
ಹೊಸದಿಲ್ಲಿ: ಭಾರತದ ಕರೆನ್ಸಿಯನ್ನು ತನ್ನ ನಿಗಾ ಪಟ್ಟಿಗೆ ಸೇರಿಸಿದ್ದನ್ನು ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ಆಕ್ಷೇಪಿಸಿದ್ದಾರೆ. ಅಮೆರಿಕವು ರೂಪಾಯಿಯನ್ನು ತನ್ನ 'ನಿಗಾ ಪಟ್ಟಿ'ಯಲ್ಲಿ ಸೇರ್ಪಡೆಗೊಳಿಸಿರುವುದಕ್ಕೆ ಅರ್ಥ ಇಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ತಿಳಿಸಿದ್ದಾರೆ. ಅಮೆರಿಕವು ಕಳೆದ ವಾರ ಭಾರತ ಸೇರಿದಂತೆ 11 ರಾಷ್ಟ್ರಗಳ ಕರೆನ್ಸಿಗಳನ್ನು ತನ್ನ 'ಮಾನಿಟರಿಂಗ್‌ ಲಿಸ್ಟ್‌'ಗೆ ಸೇರಿಸಿತ್ತು. ಅಂದರೆ ಈ ಹತ್ತು ದೇಶಗಳ ಕರೆನ್ಸಿಗಳ ಚಲನವಲನಗಳ ಮೇಲೆ ಅಮೆರಿಕ ಸರಕಾರ ಹದ್ದಿನ ಕಣ್ಣಿಡಲಿದೆ. ಈ ಪಟ್ಟಿಯಿಂದ ವಿಯೆಟ್ನಾಂ, ತೈವಾನ್‌ ಮತ್ತು ಸ್ವಿಜರ್ಲೆಂಡ್‌ ಅನ್ನು ತೆಗೆದು ಹಾಕಿದೆ. ಅಮೆರಿಕದ ಹಣಕಾಸು ಇಲಾಖೆಯು ಪ್ರಮುಖ ವ್ಯಾಪಾರ ಪಾಲುದಾರಿಕೆಯ ರಾಷ್ಟ್ರಗಳ ಕರೆನ್ಸಿಗಳ ಚಲನವಲನಗಳನ್ನು ಮತ್ತು ಒಟ್ಟಾರೆ ಆರ್ಥಿಕ ನೀತಿಗಳನ್ನು ಹೆಚ್ಚು ನಿಕಟವಾಗಿ ಗಮನಿಸಲಿದೆ. ಅಮೆರಿಕದಿಂದ ಈ ಕ್ರಮ ಏಕೆ? ಈ ದೇಶಗಳು ತಮ್ಮ ಕರೆನ್ಸಿಗಳನ್ನು ಅಪಮೌಲ್ಯಗೊಳಿಸುವ ಮೂಲಕ ಅಮೆರಿಕದ ಜತೆಗಿನ ವ್ಯಾಪಾರ ವಹಿವಾಟಿನಲ್ಲಿ ಲಾಭ ಗಳಿಸುತ್ತಿವೆಯೇ ಎಂಬುದರ ಬಗ್ಗೆ ಅಮೆರಿಕ ಪರಿಶೀಲಿಸಲು ಈ ಕರೆನ್ಸಿ ನಿಗಾ ಪಟ್ಟಿಯನ್ನು ರಚಿಸಿದೆ. ಚೀನಾದಲ್ಲಿ ದೇಶೀಯ ಬಳಕೆ ಮತ್ತು ವೆಚ್ಚಗಳು ಮಂದಗತಿಯಲ್ಲಿದ್ದರೂ, ಜಿಡಿಪಿ ಬೆಳವಣಿಗೆಯಾಗಿರುವುದರ ಬಗ್ಗೆ ಅಮೆರಿಕ ಶಂಕಿಸಿದ್ದು, ಕರೆನ್ಸಿ ಅಪಮೌಲ್ಯದ ಮೂಲಕ ಲಾಭ ಮಾಡಿಕೊಳ್ಳುತ್ತಿರುವ ಅನುಮಾನ ವ್ಯಕ್ತಪಡಿಸಿದೆ. ಕಳೆದ 12 ತಿಂಗಳುಗಳಲ್ಲಿ ಅಮೆರಿಕದ ಜತೆಗೆ ಕನಿಷ್ಠ 20 ಶತಕೋಟಿ ಡಾಲರ್‌ಗೂ ಹೆಚ್ಚು ದ್ವಿಪಕ್ಷೀಯ ವ್ಯಾಪಾರ ವಹಿವಾಟು ನಡೆಸಿರುವ ದೇಶಗಳನ್ನು ಗುರುತಿಸಿ ಪಟ್ಟಿ ತಯಾರಿಸಲಾಗಿದೆ. ಈ ಹಿಂದೆ 2018ರ ಅಕ್ಟೋಬರ್‌ನಲ್ಲಿ ನಿಗಾ ಪಟ್ಟಿಗೆ ಭಾರತವನ್ನು ಸೇರಿಸಲಾಗಿತ್ತು. ನಂತರ 2019ರ ಮೇನಲ್ಲಿ ತೆಗೆದು ಹಾಕಲಾಗಿತ್ತು. ಕರೆನ್ಸಿ ಅಪಮೌಲ್ಯ ಹೇಗೆ? ಅಮೆರಿಕ ಆರೋಪಿಸುವ ಪ್ರಕಾರ, ಅಮೆರಿಕದ ಜತೆಗೆ ವ್ಯಾಪಾರ ನಡೆಸುವ ರಾಷ್ಟ್ರಗಳು ತಮ್ಮ ಕರೆನ್ಸಿಗಳ ಬೆಲೆಯನ್ನು ಅಪಮೌಲ್ಯಗೊಳಿಸಿ ರಫ್ತುದಾರರಿಗೆ ಅನುಕೂಲ ಮಾಡಿಕೊಡುತ್ತವೆ. ತಮ್ಮದೇ ಕರೆನ್ಸಿಯನ್ನು ಮಾರಿ, ಡಾಲರ್‌ಗಳನ್ನು ಕೊಳ್ಳುತ್ತವೆ. ಇದರಿಂದ ಆ ದೇಶಗಳ ಕರೆನ್ಸಿ ದುರ್ಬಲವಾಗುತ್ತದೆ. ಇದರಿಂದ ರಫ್ತು ಅಗ್ಗವಾಗುತ್ತದೆ. ರಫ್ತುದಾರರ ಆದಾಯ ಹೆಚ್ಚುತ್ತದೆ. ಆಮದು ತುಟ್ಟಿಯಾಗುತ್ತದೆ. ಅಮೆರಿಕದ ಕರೆನ್ಸಿ ನಿಗಾ ಪಟ್ಟಿಗೆ ಸೇರ್ಪಡೆಯಾಗಿರುವ ರಾಷ್ಟ್ರಗಳು: ಭಾರತ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಐರ್ಲೆಂಡ್‌, ಮಲೇಷ್ಯಾ, ಸಿಂಗಾಪುರ, ಥಾಯ್ಲೆಂಡ್‌, ಮೆಕ್ಸಿಕೊ ಭಾರತವನ್ನು ಸೇರಿಸಿದ್ದೇಕೆ? ಭಾರತ ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಜತೆಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುತ್ತಿದೆ. ಭಾರತಕ್ಕೆ ಅಮೆರಿಕದಿಂದ ಆಮದು ಕಡಿಮೆ. ಆದರೆ ಭಾರತದಿಂದ ಅಮೆರಿಕಕ್ಕೆ ರಫ್ತು ಹೆಚ್ಚು. 2019ರ ದ್ವಿತೀಯಾರ್ಧದಿಂದ ಭಾರತದ ವಿದೇಶಿ ವಿನಿಮಯ ಸಂಗ್ರಹ ಗಣನೀಯ ಹೆಚ್ಚಳವಾಗಿರುವುದೂ ಅಮೆರಿಕಾ ನಿಗಾ ಇಡಲು ಪ್ರಮುಖ ಕಾರಣವಾಗಿದೆ.