ರೈತರಿಗೆ ಸಿಗುತ್ತಿಲ್ಲ ಬೆಲೆ, ಗ್ರಾಹಕರಿಗೂ ಇಲ್ಲ ಲಾಭ..! ತರಕಾರಿ ಮಾರಾಟದಲ್ಲಿ ದಲ್ಲಾಳಿಗಳದ್ದೇ ದರ್ಬಾರು..!

'ಕೋವಿಡ್‌ನಿಂದ ಮಾರುಕಟ್ಟೆಗೆ ಮಾಲು ಬರುತ್ತಿಲ್ಲ. ಹೀಗಾಗಿ, ಬೆಲೆಗಳು ಹೆಚ್ಚಾಗಿವೆ' ಎನ್ನುತ್ತಾರೆ. ಇದರಿಂದ ಬೆಳೆದವರಿಗೆ ಬಿಡಿಗಾಸು ಸಿಗದಿದ್ದರೂ, ಗ್ರಾಹಕರಿಗೆ ಮಾತ್ರ ಹೊರೆಯಾಗಿ ಪರಿಣಮಿಸಿದೆ.

ರೈತರಿಗೆ ಸಿಗುತ್ತಿಲ್ಲ ಬೆಲೆ, ಗ್ರಾಹಕರಿಗೂ ಇಲ್ಲ ಲಾಭ..! ತರಕಾರಿ ಮಾರಾಟದಲ್ಲಿ ದಲ್ಲಾಳಿಗಳದ್ದೇ ದರ್ಬಾರು..!
Linkup
: ಬೆಳೆದ ರೈತರು ಬೆಲೆಯಿಲ್ಲದೆ ತತ್ತರಿಸಿದ್ದಾರೆ. ಆದ್ರೆ, ಇತ್ತ ಬೆಂಗಳೂರಿನಲ್ಲಿ ವ್ಯಾಪಾರಿಗಳು ಮನಬಂದಂತೆ ದರ ವಿಧಿಸಿ ಮಾರುತ್ತಿದ್ದಾರೆ. ಬೀನ್ಸ್‌ ಬರೋಬ್ಬರಿ 90-100 ರೂ.ಗೆ ಮಾರಿದರೆ, ಕ್ಯಾರೆಟ್‌, ಕ್ಯಾಪ್ಸಿಕಂ, ಹಾಗಲಕಾಯಿ, ಹೀರೇಕಾಯಿ ಕೆ.ಜಿ. ಗೆ 50-60 ರೂ. ದರವಿದೆ. ಟೊಮೇಟೊ ಬೆಳೆದ ರೈತರ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಕೂಲಿಯೂ ಬಾರದ ಸ್ಥಿತಿಯಿಂದಾಗಿ ಜನ ಬೆಳೆಯನ್ನೇ ನಾಶಮಾಡುತ್ತಿದ್ದಾರೆ. ಆದರೆ, ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿಒಂದು ಕೆ.ಜಿ. ಟೊಮೇಟೊ ಬೆಲೆ 13 ರೂ.ಗಳಷ್ಟಿದೆ. ದಾಸನಪುರ ಉಪ ಮಾರುಕಟ್ಟೆಯಲ್ಲಿ ಸಗಟು ಬೆಲೆ ಕೆ.ಜಿ. 10-12 ರೂ. ಇದೆ. ಇನ್ನು, ಚಿಲ್ಲರೆ ಮಾರಾಟಗಾರರು ಗುಣಮಟ್ಟವಲ್ಲದ ಟೊಮೇಟೊ ತಂದು ಕೆ.ಜಿ.ಗೆ 15 ರೂ. ನಂತೆ ಮಾರುತ್ತಿದ್ದಾರೆ. ಈ ಬಗ್ಗೆ ತರಕಾರಿ ವ್ಯಾಪಾರಿಗಳನ್ನು ಪ್ರಶ್ನಿಸಿದರೆ, 'ಕೋವಿಡ್‌ನಿಂದ ಮಾರುಕಟ್ಟೆಗೆ ಮಾಲು ಬರುತ್ತಿಲ್ಲ. ಹೀಗಾಗಿ, ಬೆಲೆಗಳು ಹೆಚ್ಚಾಗಿವೆ' ಎನ್ನುತ್ತಾರೆ. ಇದರಿಂದ ಬೆಳೆದವರಿಗೆ ಬಿಡಿಗಾಸು ಸಿಗದಿದ್ದರೂ, ಗ್ರಾಹಕರಿಗೆ ಮಾತ್ರ ಹೊರೆಯಾಗಿ ಪರಿಣಮಿಸಿದೆ. ಕೊರೊನಾ ಕಾಲದಲ್ಲಿ ಮಧ್ಯವರ್ತಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ. ಹಣ್ಣುಗಳ ದರ ಕೊಂಚ ಸುಧಾರಣೆ: ಮಾವಿನ ಸೀಸನ್‌ ಇರುವುದರಿಂದ ಇದೀಗ ಇತರೆ ಹಣ್ಣುಗಳಿಗೆ ತುಸು ಬೇಡಿಕೆ ಕಡಿಮೆಯಾಗಿದ್ದು, ಬಾಳೆಹಣ್ಣು, ಸಪೋಟ ಮತ್ತಿತರ ಹಣ್ಣುಗಳ ಬೆಲೆ ಕೆ.ಜಿ.ಗೆ 50-60 ರೂ. ದರವಿದೆ. ಗ್ರಾಹಕರಿಗೆ ಬೇಸರ: 'ರೈತರಿಗೆ ಬೆಲೆಯೇ ಇಲ್ಲದೆ ಟೊಮೇಟೊ ಸೇರಿದಂತೆ ನಾನಾ ಬೆಳೆಗಳನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಆದರೆ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬೆಲೆಗಳು ಹೆಚ್ಚಾಗಿವೆ. ನಾವು ಯಾರಿಗೆ ತಾನೆ ಹೇಳಲು ಸಾಧ್ಯ?' ಎಂದು ಪ್ರಶ್ನಿಸುತ್ತಾರೆ ಗ್ರಾಹಕರು. 'ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ತರಿಸುತ್ತೇವೆ. ಇದಕ್ಕೆ ತೆರಿಗೆ, ಡೆಲಿವರಿ ಚಾರ್ಜ್ ಸೇರಿದಂತೆ ಮತ್ತಷ್ಟು ಹೊರೆಯಾಗುತ್ತದೆ. ಆದರೂ, ಇದು ಅನಿವಾರ್ಯ' ಎನ್ನುತ್ತಾರೆ ಉದ್ಯೋಗಿ ಶಾಂತಲಕ್ಷ್ಮಿ. ಯಶವಂತಪುರ ಎಪಿಎಂಸಿಯಲ್ಲಿ ಟೊಮೇಟೊ ಸಗಟು ದರದಲ್ಲಿ ಕೆ.ಜಿ.ಗೆ 10-12 ರೂ. ಇದೆ. ಬೀನ್ಸ್‌ಗೆ 50-80 ರೂ. (ನಾನಾ ತಳಿಗಳಿದ್ದು, ತಳಿಯ ಮೇಲೆ ಆಧಾರಿತ) ದರ ಇದೆ. ಮೂಲಂಗಿ, ಬದನೆಕಾಯಿ ಕೆ.ಜಿ.ಗೆ 20 ರೂ., ಹೀರೇಕಾಯಿ 25 ರೂ., ನುಗ್ಗೆಕಾಯಿ 30 ರೂ., ಬೀನ್ಸ್‌ ಇಳುವರಿಯಿಲ್ಲದೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಪರಿಣಾಮ ದರ ಏರಿಕೆಯಾಗಿದೆ ಎನ್ನುತ್ತಾರೆ ದಾಸನಪುರ ಉಪ ಮಾರುಕಟ್ಟೆಯ ವ್ಯಾಪಾರಿ ಪ್ರಕಾಶ್‌. ಬೇರೆಡೆ ರವಾನೆ ಸ್ಥಗಿತ: 'ಎಪಿಎಂಸಿಗೆ ಸೀಸನ್‌ನಲ್ಲಿ ನಿತ್ಯ ಕೋಲಾರದಿಂದ ನಾಲ್ಕು ಲಕ್ಷ ಬಾಕ್ಸ್‌ ಟೊಮೇಟೊ ಹಣ್ಣು ಬರುತ್ತಿತ್ತು. ಈಗ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶೇ.50ರಷ್ಟು ಕುಸಿದಿದೆ. ಜ್ಯೂಸ್‌ಗಾಗಿ ಹೊರರಾಜ್ಯಗಳಿಗೆ ಪಾರ್ಸೆಲ್‌ ಹೋಗುತ್ತಿತ್ತು. ಈಗ ಮಾವಿನ ಸೀಸನ್‌ ಬಂದ ನಂತರ ಟೊಮೇಟೊ ಅದಕ್ಕೂ ಹೋಗುತ್ತಿಲ್ಲ. ಬೆಳೆದ ಬೆಳೆಯನ್ನು ಸ್ಥಳೀಯ ಉದ್ದೇಶಕ್ಕಾಗಿ ಮಾತ್ರವೇ ಬಳಸಲಾಗುತ್ತಿದೆ. ಅಲ್ಲದೆ, ಈಗ ಸಮಾರಂಭಗಳು ಇಲ್ಲ. ಹೀಗಾಗಿ, ಬೆಲೆ ಇಲ್ಲದಂತಾಗಿದೆ' ಎನ್ನುತ್ತಾರೆ ಕೋಲಾರ ಎಪಿಎಂಸಿ ರೈಟರ್‌ ಬಿ.ಎಂ. ಶ್ರೀನಿವಾಸ್‌.