ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚೇತರಿಕೆಗಿಂತ ಸಾವಿನ ಸಂಖ್ಯೆಯೇ ಅಧಿಕ..!

ಕೋವಿಡ್‌ ಸೋಂಕಿನಲ್ಲಿ ಅಗ್ರಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರು, ಬ್ಲ್ಯಾಕ್‌ ಫಂಗಸ್‌ ಪ್ರಕರಣದಲ್ಲೂ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ನಗರದಲ್ಲಿ 959 ಪ್ರಕರಣಗಳು ವರದಿಯಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಚೇತರಿಕೆಗಿಂತ ಸಾವಿನ ಸಂಖ್ಯೆಯೇ ಅಧಿಕ..!
Linkup
ಮಹಾಬಲೇಶ್ವರ ಕಲ್ಕಣಿ : ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಗುಣಮುಖರ ಸಂಖ್ಯೆಗಿಂತ ಮೃತರ ಸಂಖ್ಯೆ ಹೆಚ್ಚಾಗಿದ್ದು, ಆತಂಕ ಸೃಷ್ಟಿಸಿದೆ. ಜೂನ್ 17ರ ವೇಳೆಗೆ ರಾಜ್ಯದಲ್ಲಿ 2,856 ಕೇಸ್‌ ವರದಿಯಾಗಿದ್ದು, 225 ಜನ ಬಲಿಯಾಗಿದ್ದಾರೆ. ಆದ್ರೆ, ಈ ಅವಧಿಯಲ್ಲಿ ಗುಣಮುಖರಾಗಿರೋದು 191 ಜನರು ಮಾತ್ರ. ರಾಜ್ಯದಲ್ಲಿ ಇನ್ನೂ 2,316 ಜನರು ಸದ್ಯ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರ ಸಂಖ್ಯೆ ಶೇ. 6.68 ಇದ್ದು, ಮೃತರ ಸಂಖ್ಯೆ 7.88ರಷ್ಟಿದೆ. ಸೋಂಕು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯದೇ ಇರುವುದು ಸಾವಿನ ಪ್ರಮಾಣ ಅಧಿಕವಾಗಲು ಕಾರಣ ಎನ್ನುತ್ತಾರೆ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌. ರಾಜಧಾನಿಯೇ ಮೊದಲು: ಕೋವಿಡ್‌ ಸೋಂಕಿನಲ್ಲಿ ಅಗ್ರಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರು, ಬ್ಲ್ಯಾಕ್‌ ಫಂಗಸ್‌ ಪ್ರಕರಣದಲ್ಲೂ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ನಗರದಲ್ಲಿ 959 ಪ್ರಕರಣಗಳು ವರದಿಯಾಗಿದೆ. ಅಪರೂಪದ ಬ್ಲ್ಯಾಕ್‌ ಫಂಗಸ್‌ ಸೋಂಕು ಮೂಗಿನ ಮೂಲಕ ಪ್ರವೇಶಗೊಂಡು ನಂತರ ಕಣ್ಣು, ಶ್ವಾಸಕೋಶ ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಇದು ಹೆಚ್ಚಾಗಿ ಕೋವಿಡ್‌ನಿಂದ ಚೇತರಿಸಿಕೊಂಡ ಅನಿಯಂತ್ರಿತ ಮಧುಮೇಹವಿರುವ ರೋಗಿಗಳಲ್ಲಿ ಕಂಡು ಬರುತ್ತದೆ. ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಮಾತ್ರವೇ ಸೋಂಕಿನಿಂದ ಚೇತರಿಸಿಕೊಳ್ಳಬಹುದು. ಇಲ್ಲದಿದ್ದರೆ ಕಷ್ಟ ಸಾಧ್ಯ. ಬಹಳಷ್ಟು ಬಾರಿ ಜೀವ ಉಳಿದರೂ ದೃಷ್ಟಿ ಉಳಿಯುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುತ್ತಾರೆ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ್‌ ಶೆಟ್ಟಿ. ದೃಷ್ಟಿ ಕಳೆದುಕೊಂಡ ಮಕ್ಕಳು: ಬಳ್ಳಾರಿ ಜಿಲ್ಲೆಯ 14 ವರ್ಷದ ಬಾಲಕಿ ಮತ್ತು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ 11 ವರ್ಷದ ಬಾಲಕ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಇಬ್ಬರೂ ಒಂದು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. 144 ಮಂದಿ ಆಸ್ಪತ್ರೆಗಳಿಂದ ಬಲವಂತವಾಗಿ ಡಿಸ್ಚಾರ್ಜ್‌ ಮಾಡಿಸಿಕೊಂಡಿದ್ದಾರೆ.