ಬೆಂಗಳೂರಿನಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಸ್ಕೈವಾಕ್ನಿಂದ ಜಿಗಿದು ಸಾವು..
ಬೆಂಗಳೂರಿನಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಸ್ಕೈವಾಕ್ನಿಂದ ಜಿಗಿದು ಸಾವು..
ಪೊಲೀಸರು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿ ಶಕ್ತಿವೇಲು, ಟಿನ್ ಫ್ಯಾಕ್ಟರಿ ಬಳಿಯ ಸ್ಕೈವಾಕ್ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಪರಿಣಾಮ ಸ್ಕೈವಾಕ್ನ ಕೆಳಗಿನ ರಸ್ತೆಗೆ ಬಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದವು.
ಕೆ. ಆರ್. ಪುರ (): ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸ್ಕೈವಾಕ್ನಿಂದ ಕೆಳಗೆ ಜಿಗಿದು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೆ. ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆ. ಆರ್. ಪುರದ ವಿಜಿನಾಪುರ ನಿವಾಸಿ ಶಕ್ತಿವೇಲು (32) ಮೃತಪಟ್ಟ . ಶಕ್ತಿವೇಲು 7 ವರ್ಷದ ಹಿಂದೆ ಸಂಗೀತಾ ಎಂಬಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕೆಲ ತಿಂಗಳುಗಳಿಂದ ಕೌಟುಂಬಿಕ ಕಲಹ ಉಂಟಾಗಿತ್ತು.
ಇತ್ತೀಚೆಗೆ ಶಕ್ತಿವೇಲು ತನ್ನ ಪತ್ನಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದ. ಪತಿಯ ಕಿರುಕುಳ ತಾಳಲಾರದೇ ಸಂಗೀತಾ ಕೆಲ ದಿನಗಳ ಹಿಂದೆ ಮನೆಯ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಮ್ಮ ಮಗಳ ಸಾವಿಗೆ ಪತಿ ಶಕ್ತಿವೇಲು ಕಾರಣ ಎಂದು ಆರೋಪಿಸಿ ಸಂಗೀತಾ ಅವರ ಪಾಲಕರು ಕೆ. ಆರ್. ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತಿ ಕಿರುಕುಳ ಕೊಟ್ಟಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಗೀತಾ ಡೆತ್ ನೋಟ್ ಬರೆದಿಟ್ಟಿದ್ದಳು. ಈ ಆಧಾರದ ಮೇಲೆ ಶಕ್ತಿವೇಲು ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಕೆ. ಆರ್. ಪುರ ಪೊಲೀಸರು ಭಾನುವಾರ ಸಂಜೆ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ರಾತ್ರಿಯಿಡೀ ಠಾಣೆಯಲ್ಲೇ ಇದ್ದ ಶಕ್ತಿವೇಲುನನ್ನು ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ದತೆ ನಡೆಸಿದ್ದರು.
ಶೌಚಗೃಹಕ್ಕೆ ಕರೆದೊಯ್ದಾಗ ಎಸ್ಕೇಪ್
ಆರೋಪಿ ಶಕ್ತಿವೇಲು ಸೋಮವಾರ ಮುಂಜಾನೆ ಶೌಚ ಗೃಹಕ್ಕೆ ಹೋಗಬೇಕು ಎಂದು ಠಾಣೆಯಲ್ಲಿದ್ದ ಕಾನ್ಸ್ಟೇಬಲ್ ಬಳಿ ಕೇಳಿಕೊಂಡಿದ್ದ. ಇದಕ್ಕೆ ಪೊಲೀಸ್ ಪೇದೆ ಆತನನ್ನು ಶೌಚ ಗೃಹದ ಬಳಿ ಕರೆದೊಯ್ದು ಮತ್ತೆ ಕರೆ ತರುತ್ತಿದ್ದಾಗ, ಏಕಾಏಕಿ ಠಾಣೆಯಿಂದ ಹೊರಗೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಆರೋಪಿಯನ್ನು ಬೆನ್ನಟ್ಟಿಕೊಂಡು ಹೋಗಿದ್ದರು. ಪೊಲೀಸರು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿ ಶಕ್ತಿವೇಲು, ಟಿನ್ ಫ್ಯಾಕ್ಟರಿ ಬಳಿಯ ಸ್ಕೈವಾಕ್ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಪರಿಣಾಮ ಸ್ಕೈವಾಕ್ನ ಕೆಳಗಿನ ರಸ್ತೆಗೆ ಬಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಆರೋಪಿ ಕೆಳಗೆ ಜಿಗಿಯುವ ವೇಳೆ ಸ್ಕೈವಾಕ್ ಕೆಳಗಿನ ರಸ್ತೆಯಲ್ಲಿ ಬಂದ ಕಾರಿನ ಇಂಡಿಕೇಟರ್ ಸಹ ಶಕ್ತಿವೇಲುಗೆ ತಾಗಿತ್ತು. ಇದಾದ ಕೆಲ ಹೊತ್ತಿನಲ್ಲಿ ಶಕ್ತಿವೇಲು ಸ್ಥಳದಲ್ಲೇ ಮೃತಪಟ್ಟಿದ್ದ.