ರಾಜ್ಯಗಳ ಬಳಿ ಇನ್ನೂ 3 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳು ಲಭ್ಯ: ಆರೋಗ್ಯ ಸಚಿವಾಲಯ

ದೇಶಾದ್ಯಂತ ಜೂನ್ 21ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರಕಾರ ಹೇಳಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಈಗಲೂ 3.06 ಕೋಟಿ ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯಗಳ ಬಳಿ ಇನ್ನೂ 3 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳು ಲಭ್ಯ: ಆರೋಗ್ಯ ಸಚಿವಾಲಯ
Linkup
ಹೊಸದಿಲ್ಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 3.06 ಕೋಟಿ ಡೋಸ್‌ಗಳಿಗೂ ಅಧಿಕ ಲಸಿಕೆಗಳು ಈಗಲೂ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ 24.53 ಲಕ್ಷ ಡೋಸ್‌ಗಳು ದೊರಕಲಿವೆ ಎಂದು ಕೇಂದ್ರ ಭಾನುವಾರ ತಿಳಿಸಿದೆ. ಕೇಂದ್ರ ಸರಕಾರದ ಉಚಿತ ಯೋಜನೆ ಹಾಗೂ ರಾಜ್ಯಗಳಿಂದ ನೇರ ಖರೀದಿ ವಿಭಾಗಗಳ ಅಡಿಯಲ್ಲಿ ಇದುವರೆಗೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 29,10,54,050 ಡೋಸ್ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ. ಇದರಲ್ಲಿ ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ವ್ಯರ್ಥಗೊಂಡ ಲಸಿಕೆ ಸೇರಿದಂತೆ ಒಟ್ಟು 26,04,19,412 ಡೋಸ್‌ಗಳು ಬಳಕೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ. 'ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 3,06,34,638 ಡೋಸ್‌ಗಳು ಜನರಿಗೆ ನೀಡಲು ಲಭ್ಯವಿದೆ. 24,53,080ಕ್ಕೂ ಅಧಿಕ ಲಸಿಕೆ ಡೋಸ್‌ಗಳು ಸರದಿಯಲ್ಲಿದ್ದು, ಮುಂದಿನ ಮೂರು ದಿನಗಳಲ್ಲಿ ಅವರನ್ನು ತಲುಪಲಿವೆ' ಎಂದು ಸಚಿವಾಲಯ ಹೇಳಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ ಭಾರತ ಸರಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ 19 ಲಸಿಕೆಗಳನ್ನು ಪೂರೈಸುವ ಮೂಲಕ ನೆರವು ನೀಡುತ್ತಿದೆ. ಜತೆಗೆ ರಾಜ್ಯ ಹಾಗೂ ಯುಟಿಗಳಿಗೆ ನೇರ ಖರೀದಿ ಸೌಲಭ್ಯವನ್ನೂ ಒದಗಿಸುತ್ತಿದೆ ಎಂದು ಅದು ತಿಳಿಸಿದೆ.