ಕೇರಳ ರೂಪದರ್ಶಿಯರ ಸಾವು ಅಪಘಾತವಲ್ಲ, ವ್ಯವಸ್ಥಿತ ಹತ್ಯೆ? ಖಾಕಿ ಸಂಶಯಕ್ಕೆ ಕಾರಣವೇನು?
ಕೇರಳ ರೂಪದರ್ಶಿಯರ ಸಾವು ಅಪಘಾತವಲ್ಲ, ವ್ಯವಸ್ಥಿತ ಹತ್ಯೆ? ಖಾಕಿ ಸಂಶಯಕ್ಕೆ ಕಾರಣವೇನು?
ಕೇರಳದ ರೂಪದರ್ಶಿಯರಿಬ್ಬರ ನಿಗೂಢ ಸಾವಿನ ಪ್ರಕರಣದ ಸುತ್ತ ವ್ಯವಸ್ಥಿತ ಕೊಲೆ ಸಂಚಿನ ಸಂಶಯ ಆವರಿಸಿದೆ. ಇದು ಅಪಘಾತವಲ್ಲ ಬದಲಾಗಿ ಕೊಲೆ ಎಂಬ ಅನುಮಾನ ಪೊಲೀಸರಿಗೆ ದಟ್ಟವಾಗಿದೆ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಮಿಸ್ ಕೇರಳ ಅನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ನಿಗೂಢ ರೀತಿಯ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತಿರುವನಂತಪುರ: ಕೇರಳದ ರೂಪದರ್ಶಿಯರಿಬ್ಬರ ನಿಗೂಢ ಸಾವಿನ ಪ್ರಕರಣದ ಸುತ್ತ ವ್ಯವಸ್ಥಿತ ಕೊಲೆ ಸಂಚಿನ ಸಂಶಯ ಆವರಿಸಿದ್ದು ರಾಜ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ರಾತ್ರಿ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಮಿಸ್ ಕೇರಳ ಮತ್ತು ರನ್ನರ್ ಅಪ್ ನಿಗೂಢ ರೀತಿಯ ಅಪಘಾತದಲ್ಲಿ ಮೃತಪಟ್ಟಿದ್ದರು.
ನವೆಂಬರ್ 1ರ ರಾತ್ರಿ ಕೊಚ್ಚಿ ಸಮೀಪ ಸಂಭವಿಸಿತ್ತು. ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರೂಪದರ್ಶಿಯರಿದ್ದ ಕಾರು ಪಲ್ಟಿಯಾಗಿತ್ತು. ಅಂದು ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಚಾಲಕ ಸೇರಿ ನಾಲ್ಕು ಜನರಿದ್ದರು. ರೂಪದರ್ಶಿಯರ ಸ್ನೇಹಿತ ಆಶಿಕ್ ಕೂಡ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಕೆಲ ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಅವರೂ ಕೊನೆಯುಸಿರೆಳೆದಿದ್ದಾರೆ.
ಈಗ ಘಟನೆಯ ಖುದ್ದು ಸಾಕ್ಷಿಯಾಗಿ ಉಳಿದಿರುವುದು ಕಾರು ಚಾಲಕ ಅಬ್ದುಲ್ ರೆಹಮಾನ್ ಮಾತ್ರ. ಘಟನೆ ಸ್ವರೂಪ ಗಮನಿಸಿದ ಪೊಲೀಸರು ಇದೊಂದು ನೈಜ ಅಪಘಾತ ಎಂದೇ ಭಾವಿಸಿದ್ದರು. ಆದರೆ, ಕೆಲವು ಅಧಿಕಾರಿಗಳು ಪ್ರಕರಣದ ಸೂಕ್ಷ್ಮ ಎಳೆಗಳನ್ನು ಜೋಡಿಸಿದಾಗಿ ಸಂಚಿನ ಸುಳಿವುಗಳು ಗೋಚರಿಸಿ ಆಳದ ತನಿಖೆ ಕೈಹಾಕಿದ್ದಾರೆ.
ಸಂಚಿನ ಸುಳಿ!ಘಟನೆ ದಿನ ರೂಪದರ್ಶಿಯರಿಬ್ಬರು ಕೊಚ್ಚಿಯ ಹೋಟೆಲ್‌ವೊಂದರ ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಂದು ಅಲ್ಲಿದ್ದವರೆಲ್ಲ ಮದ್ಯ ಸೇವನೆ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಪಾರ್ಟಿ ಮಧ್ಯ ಹೋಟೆಲ್ ಮಾಲೀಕ ಮತ್ತು ರೂಪದರ್ಶಿಯರ ನಡುವೆ ವಾಗ್ವಾದ ನಡೆದಿತ್ತು. ಅದು ಅಪಾಯದ ಮಟ್ಟಕ್ಕೆ ತಿರುಗುತ್ತಿದ್ದಂತೆಯೇ ರೂಪದರ್ಶಿಯರು ತಮ್ಮ ಸ್ನೇಹಿತ ಆಶಿಕ್‌ನನ್ನು ಕರೆದುಕೊಂಡು ತರಾತುರಿಯಲ್ಲಿ ಕಾರು ಹತ್ತಿ ಪರಾರಿಯಾಗಿದ್ದರು. ಅಲ್ಲಿಂದ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಕಾರು ಅಪಘಾತಕ್ಕೀಡಾಗಿ ಮೂವರು ಸತ್ತಿದ್ದು, ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದರು. ಹೋಟೆಲ್‌ನಲ್ಲಿ ದಾಖಲಾಗಿದ್ದ ಪಾರ್ಟಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶ ಮಾಡಲಾಗಿದೆ.
ಸಾಕ್ಷ್ಯನಾಶಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ರಾಯ್ ಜೆ.ವಯಲಂಟಿನ್ ಸೇರಿ ಆರು ಜನರನ್ನು ಬಂಧಿಸಲಾಗಿತ್ತು. ಆದರೆ ಬಲವಾದ ಪುರಾವೆಗಳು ಲಭಿಸದ ಕಾರಣ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಡ್ರಗ್ಸ್ ಮತ್ತು ಬ್ಲ್ಯಾಕ್‌ಮೇಲ್ ಈ ಘಟನೆಯ ಹಿಂದೆ ದೊಡ್ಡ ಪಾತ್ರ ನಿರ್ವಹಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.