ಸೋಮವಾರ ಲಸಿಕೆ ಪ್ರಮಾಣ ದಾಖಲೆ ನಿರ್ಮಿಸಿದ್ದು ಹೇಗೆ? ರಹಸ್ಯ ತೆರೆದಿಟ್ಟ ಪಿ ಚಿದಂಬರಂ

ಲಸಿಕೆ ಅಭಿಯಾನದ ಆರಂಭವಾದ ಸೋಮವಾರ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಡೋಸ್‌ಗಳನ್ನು ನೀಡಲಾಗಿತ್ತು. ಇದರ ಹಿಂದೆ ಇದ್ದ ರಹಸ್ಯವನ್ನು ಕಾಂಗ್ರೆಸ್ ನಾಯಕ ಪಿ ಚಿದಂಬರಂ ತೆರೆದಿಟ್ಟಿದ್ದಾರೆ.

ಸೋಮವಾರ ಲಸಿಕೆ ಪ್ರಮಾಣ ದಾಖಲೆ ನಿರ್ಮಿಸಿದ್ದು ಹೇಗೆ? ರಹಸ್ಯ ತೆರೆದಿಟ್ಟ ಪಿ ಚಿದಂಬರಂ
Linkup
ಹೊಸದಿಲ್ಲಿ: ಕೇಂದ್ರದ ಹೊಸ ಅಭಿಯಾನದ ಮೊದಲ ದಿನವಾದ ಸೋಮವಾರದ ದಾಖಲೆಯ ಸಾಧನೆ ಹಾಗೂ ಮಂಗಳವಾರದ ಇಳಿಕೆಯ ಕುರಿತಂತೆ ರಹಸ್ಯವೊಂದು ಇದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಆರಂಭವಾದ ಸೋಮವಾರ 88 ಲಕ್ಷ ಡೋಸ್ ಲಸಿಕೆಗಳನ್ನು ನೀಡಿದ್ದರೆ, ಮಂಗಳವಾರ ಅದರ ಸಂಖ್ಯೆ 54.22 ಲಕ್ಷ ಡೋಸ್‌ಗೆ ಇಳಿದಿದೆ. ಸೋಮವಾರ ದಾಖಲೆ ಸೃಷ್ಟಿಸಲು ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಚಿದಂಬರಂ ವಿವರಿಸಿದ್ದಾರೆ. ಅದಕ್ಕೆ ಅವರು ಎಲ್ಲ ರಾಜ್ಯಗಳಲ್ಲಿಯೂ ಭಾನುವಾರ ನಡೆದ ಲಸಿಕೆ ಚಟುವಟಿಕೆಯ ಸಂಖ್ಯೆಯನ್ನು ಗಮನಿಸುವಂತೆ ತಿಳಿಸಿದ್ದಾರೆ. 'ಭಾನುವಾರ ಸಂಗ್ರಹಿಸಿಟ್ಟಿದ್ದು, ಸೋಮವಾರ ಲಸಿಕೆ ನೀಡಿದ್ದು, ಮತ್ತು ಮಂಗಳವಾರ ಮತ್ತೆ ಕುಂಠಿತಗೊಂಡಿದ್ದು. ಒಂದೇ ದಿನದಲ್ಲಿ 'ವಿಶ್ವ ದಾಖಲೆಯ' ಲಸಿಕೆ ನೀಡುವಿಕೆ ಹಿಂದಿನ ರಹಸ್ಯ ಇದು' ಎಂದು ಹೇಳಿದ್ದಾರೆ. "ಈ 'ಸಾಧನೆ'ಯು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಖಂಡಿತಾ ಸ್ಥಾನ ಪಡೆದುಕೊಳ್ಳಲಿದೆ" ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಚಿದಂಬರಂ, ''ಯಾರಿಗೆ ಗೊತ್ತು, ಬಹುಶಃ ವೈದ್ಯಕೀಯ ಕ್ಷೇತ್ರ ನೊಬೆಲ್ ಬಹುಮಾನವನ್ನು ಮೋದಿ ಸರಕಾರಕ್ಕೆ ನೀಡಬಹುದು. 'ಮೋದಿ ಹೈ, ಮುಮ್ಕಿನ್ ಹೈ' ಎಂಬ ಘೋಷಣೆಯನ್ನು ಈಗ 'ಮೋದಿ ಹೈ, ಮಿರಾಕಲ್ ಹೈ' ಎಂದು ಓದಬಹುದು" ಎಂಬುದಾಗಿ ಅವರು ಲೇವಡಿ ಮಾಡಿದ್ದಾರೆ. ಜತೆಗೆ ಅವರು ಸೋಮವಾರ ಅತಿ ಹೆಚ್ಚು ಲಸಿಕೆಗಳನ್ನು ನೀಡಿ, ಮಂಗಳವಾರ ಕುಸಿತ ಕಂಡ ರಾಜ್ಯಗಳ ಪಟ್ಟಿಗಳ ಕುರಿತಾದ ಪತ್ರಿಕಾ ವರದಿಯ ತುಣುಕನ್ನು ಹಂಚಿಕೊಂಡಿದ್ದಾರೆ. 'ಭಾನುವಾರದಿಂದ ಮಂಗಳವಾರದವರೆಗಿನ ಮಧ್ಯಪ್ರದೇಶ, ಕರ್ನಾಟಕ ಮತ್ತು ಹರ್ಯಾಣ ರಾಜ್ಯಗಳ ಸಂಖ್ಯೆಗಳನ್ನು ನೋಡಿ. ಬಿಜೆಪಿ ಸರಕಾರಗಳು ಅಭೂತಪೂರ್ವ ಸಾಧನೆಯನ್ನು ಮಾಡಿವೆ! ಒಂದು ದಿನದಲ್ಲಿ ನಿಜವಾದ ಪವಾಡ! ಮುಂದಿನ ಕೆಲವು ದಿನಗಳವರೆಗೆ ಉತ್ತರ ಪ್ರದೇಶ ಮತ್ತು ಗುಜರಾತ್ ಸಂಖ್ಯೆಗಳನ್ನು ನೋಡಿ' ಎಂದು ಚಿದಂಬರಂ ಹೇಳಿದ್ದಾರೆ. ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಅಭಿಯಾನವನ್ನು ಸೋಮವಾರದಿಂದ ಆರಂಭಿಸಲಾಗಿದೆ. ಮೊದಲ ದಿನ ದಾಖಲೆಯ ಲಸಿಕೆಗಳನ್ನು ನೀಡಿದ್ದು, ಎರಡನೆಯ ದಿನ ಸುಮಾರು 34 ಲಕ್ಷ ಡೋಸ್‌ನಷ್ಟು ಕಡಿಮೆ ಲಸಿಕೆ ನೀಡಲಾಗಿದೆ. ಸೋಮವಾರ ದಾಖಲೆ ನಿರ್ಮಿಸುವುದಕ್ಕಾಗಿ ಭಾನುವಾರ ತೀರಾ ಕಡಿಮೆ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲಾಗಿತ್ತು ಎಂಬ ಗುಟ್ಟನ್ನು ಚಿದಂಬರಂ ತೆರೆದಿಟ್ಟಿದ್ದಾರೆ.