
ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾದ ಹಿನ್ನೆಲೆಯಲ್ಲಿ ಮತ್ತಷ್ಟು ನಿಯಮಗಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. ತಮಿಳುನಾಡಿನಲ್ಲಿ ಕೂಡ ಕೆಲವು ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಲಾಗಿದೆ.
ಬಾರ್‌ಗಳು, ಸಾರ್ವಜನಿಕ ಉದ್ಯಾನಗಳು, ಮನರಂಜನಾ ಪಾರ್ಕ್‌ಗಳು, ಗಾಲ್ಫ್ ಕ್ಲಬ್‌ಗಳನ್ನು ಸೋಮವಾರದಿಂದ ತೆರೆಯಲು ಸರಕಾರ ಅವಕಾಶ ಕಲ್ಪಿಸಿದೆ. ರೆಸ್ಟೋರೆಂಟ್‌ಗಳಲ್ಲಿ ಆಲ್ಕೋಹಾಲ್ ಸೇವೆಗೆ ಕೂಡ ಅವಕಾಶ ನೀಡಲಾಗಿದ್ದು, ಹೊರಾಂಗಣ ಯೋಗ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಬಾರ್‌ಗಳಿಗೆ ಶೇ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಮಧ್ಯಾಹ್ನದಿಂದ ರಾತ್ರಿ 10ರವರೆಗೆ ತೆರೆಯಲು ಅನುಮತಿ ಕೊಡಲಾಗಿದೆ. ಭಾರತ ಸರಕಾರ ಹಾಗೂ ದಿಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ನೋಡಿಕೊಳ್ಳುವ ಜವಾಬ್ದಾರಿ ರೆಸ್ಟೋರೆಂಟ್ ಹಾಗೂ ಬಾರ್ ಮಾಲೀಕರದ್ದಾಗಿರುತ್ತದೆ ಎಂದು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಎಲ್ಲ ಅಂಗಡಿಗಳು, ಮಾರುಕಟ್ಟೆ ಮತ್ತು ಮಾಲ್‌ಗಳನ್ನು ಯಾವುದೇ ನಿರ್ಬಂಧವಿಲ್ಲದೆ ತೆರೆಯಲು ಕಳೆದ ವಾರ ಅನುಮತಿ ನೀಡಲಾಗಿತ್ತು. ಆದರೆ ಶೇ 50ರಷ್ಟು ಆಸನ ಸಾಮರ್ಥ್ಯದ ಮಿತಿಯನ್ನು ಮುಂದುವರಿಸಲಾಗಿದೆ. ಸ್ಟುಡಿಯೋಗಳು, ಶೈಕ್ಷಣಿಕ ಸಂಸ್ಥೆಗಳು, ಜಿಮ್, ಸ್ಪಾ, ಚಿತ್ರಮಂದಿರಗಳು, ಯೋಗ ಸಂಸ್ಥೆಗಳು ಹಾಗೂ ಇತರೆ ಸಾಮಾಜಿಕ, ರಾಜಕೀಯ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ.
ತಮಿಳುನಾಡಿನಲ್ಲಿ ಬಸ್ ಸಂಚಾರತಮಿಳುನಾಡಿನಲ್ಲಿ ಜೂನ್ 28ರವರೆಗೂ ವಿಸ್ತರಿಸಲಾಗಿದ್ದು, ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಚೆನ್ನೈ ಸುತ್ತಲಿನ ಪ್ರದೇಶ ಹಾಗೂ ನಾಲ್ಕು ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿದೆ. ಮೆಟ್ರೋ ರೈಲು ಸೇವೆಗಳಿಗೆ ಕೂಡ ಶೇ 50ರಷ್ಟು ಭರ್ತಿಗೆ ಅನುಮತಿ ಕೊಡಲಾಗಿದೆ. ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಗಳನ್ನು ಗರಿಷ್ಠ 100 ಜನರೊಂದಿಗೆ ನಡೆಸಬಹುದಾಗಿದೆ.
ಖಾಸಗಿ ಕಚೇರಿಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ತೆರೆಯಬಹುದಾಗಿದೆ. ಈಗಾಗಲೇ ಅನುಮತಿ ಪಡೆದಿರುವ ಕೈಗಾರಿಕೆಗಳು ಶೇ 100ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಇತರೆ ಕೈಗಾರಿಕೆಗಳು ಶೇ 33ರಷ್ಟು ಉದ್ಯೋಗಿಗಳೊಂದಿಗೆ ತೆರೆಬಹುದಾಗಿದೆ.
ಪಾತ್ರೆಗಳು, ಕನ್ನಡಕದ ಅಂಗಡಿಗಳು, ಜೆರಾಕ್ಸ್, ಫೊಟೊ ಸ್ಟುಡಿಯೋಗಳು, ಪ್ರತ್ಯೇಕವಿರುವ ದಿನಸಿ, ತರಕಾರಿ ಮತ್ತು ಹಣ್ಣಿನ ಅಂಗಡಿಗಳನ್ನು ತೆರೆಯಬಹುದು ಎಂದು ಹೊಸ ಆದೇಶ ತಿಳಿಸಿದೆ.