![](https://vijaykarnataka.com/photo/85829289/photo-85829289.jpg)
ಹರೀಶ್ ಬಸವರಾಜ್
ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ 'ಚಾರ್ಲಿ 777' ಸಿನಿಮಾದ ಟೀಸರ್ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿತ್ತು. ಇದರಲ್ಲಿದ್ದ ಚಾರ್ಲಿ ಎಂಬ ಮುದ್ದು ನಾಯಿ ಹಲವರ ಫೇವರಿಟ್ ಕೂಡ ಆಯಿತು. ಈಗ ಅದರ ಮುಂದುವರೆದ ಭಾಗವೆಂಬಂತೆ ಚಿತ್ರತಂಡವು ಸೆಪ್ಟೆಂಬರ್ 9ಕ್ಕೆ ಇದರ ವಿಡಿಯೋ ಹಾಡನ್ನು ಬಿಡುಗಡೆ ಮಾಡುತ್ತಿದ್ದು, ಅದಕ್ಕೆ 'ಟಾರ್ಚರ್ ಹಾಡು' ಎಂಬ ಟೈಟಲ್ ಕೊಟ್ಟಿದೆ.
ರಕ್ಷಿತ್ ಶೆಟ್ಟಿ ಅವರು 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ನಂತರ ನಟಿಸುತ್ತಿರುವ 'ಚಾರ್ಲಿ 777' ಸಿನಿಮಾದಲ್ಲಿಅವರಷ್ಟೇ ಪ್ರಮುಖ ಪಾತ್ರ ನಾಯಿಯದ್ದು. ಆ ನಾಯಿ ನಾಯಕನ ಮನೆಯೊಳಗೆ ಸೇರಿಕೊಂಡಾಗ ಆಗುವ ತಾಪತ್ರಯಗಳು ಈಗ ಹಾಡಿನ ಮೂಲಕ ಹೊರ ಬರುತ್ತಿವೆ. 'ಟೀಸರ್‌ನಲ್ಲಿರುವಂತೆ ಚಾರ್ಲಿ ಎಲ್ಲಿಂದಲೋ ತಪ್ಪಿಸಿಕೊಂಡು ಬಂದು ನಾಯಕ ಧರ್ಮನ ಕೈಗೆ ಸಿಗುತ್ತದೆ. ಮನೆಯೊಳಗೆ ಬಂದ ಮೇಲೆ ಅದು ಹೇಗೆ ಧರ್ಮನಿಗೆ ಟಾರ್ಚರ್ ಕೊಟ್ಟು ಇಡೀ ಮನೆಯಲ್ಲಿ ತನ್ನದೇ ಆದ ಆಟವಾಡುತ್ತದೆ ಎಂಬುದೇ ಈ ಹಾಡು. ಇದು ಒಂದು ರೀತಿಯಲ್ಲಿ ಟೀಸರ್‌ನ ಮುಂದುವರೆದ ಭಾಗ ಎನ್ನಬಹುದು. ಇದೊಂದು ಮಾಂಟೇಜ್ ಹಾಡಾಗಿದ್ದರೂ ಸಂಗೀತಕ್ಕೆ ತಕ್ಕಂತೆ ಕೊರಿಯೋಗ್ರಾಫ್ ಮಾಡಿಯೇ ಮಾಂಟೇಜ್‌ಗಳನ್ನು ತೆಗೆದಿದ್ದೇವೆ' ಎಂದು ಹೇಳಿದ್ದಾರೆ ನಿರ್ದೇಶಕ ಕಿರಣ್ ರಾಜ್.
'ಆರು ನಿಮಿಷದ ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಮನರಂಜನೆ ಇದೆ. ಇದರಲ್ಲಿ ನಮ್ಮ ಸಿನಿಮಾದ ಹಲವು ಪಾತ್ರಗಳು ರಿವೀಲ್ ಆಗುತ್ತವೆ. ರಾಜ್ ಬಿ ಶೆಟ್ಟಿ, ಕಾಲೋನಿಯ ಜನರ ಪಾತ್ರಗಳು ಗೊತ್ತಾಗುತ್ತದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಲಿದೆ' ಎಂದು ನಿರ್ದೇಶಕರು ವಿವರಿಸಿದ್ದಾರೆ. ಈ ಸಿನಿಮಾದಲ್ಲಿರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. 'ಈ ಹಾಡು ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತದೆ. ನಾಯಿ ಸಾಕಿದವರಂತೂ ಇದನ್ನು ತಮಗೆಯೇ ಕನೆಕ್ಟ್ ಮಾಡಿಕೊಳ್ಳುತ್ತಾರೆ. ತಮಾಷೆ ಮತ್ತು ಉತ್ತಮ ವಿಶುವಲ್ ಟ್ರೀಟ್‌ಮೆಂಟ್ ಈ ಹಾಡಿನಲ್ಲಿರುತ್ತವೆ' ಎಂದು ಕಿರಣ್ ರಾಜ್ ಹೇಳುತ್ತಾರೆ.
ಇನ್ನು, ಮೂಲಕ ತಮಿಳಿನ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಬ್ಬಿ ಸಿಂಹ ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅವರು ಫಾರ್ಮ್‌ಹೌಸ್‌ವೊಂದರ ಮಾಲೀಕರಾಗಿ ಕಾಣಿಸಿಕೊಂಡಿದ್ದಾರಂತೆ. ಅವರು ಕಾಣಿಸಿಕೊಂಡಿರುವ ದೃಶ್ಯಗಳನ್ನು ಕೊಡೈಕೆನಾಲ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ರಾಜ್ ಬಿ. ಶೆಟ್ಟಿ, ದಾನೀಶ್ ಸೇಠ್ ಮುಂತಾದವರು ಚಿತ್ರದಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರವು ತೆರೆಗೆ ಬರಲಿದ್ದು, ನೊಬಿನ್ ಪೌಲ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ 777 ಚಾರ್ಲಿ ಸಿನಿಮಾಕ್ಕಿದೆ. ಇದರ ಜೊತೆಗೆ 'ಸಪ್ತ ಸಾಗರದಾಚೆ ಎಲ್ಲೋ', 'ರಿಚರ್ಡ್ ಆಂಟನಿ' ಸಿನಿಮಾಗಳಲ್ಲೂ ರಕ್ಷಿತ್ ತೊಡಗಿಸಿಕೊಂಡಿದ್ದಾರೆ.