![](https://vijaykarnataka.com/photo/88185639/photo-88185639.jpg)
ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚಿ, ಆನಂತರ 'ಇರುವುದೆಲ್ಲವ ಬಿಟ್ಟು' ಚಿತ್ರದ ಮೂಲಕ ಹೀರೋ ಆಗಿ ಇದೀಗ 'ಹೊಂದಿಸಿ ಬರೆಯಿರಿ', 'ಬೆಂಗಳೂರು ಬಾಯ್ಸ್', 'ಗಜಾನನ & ಗ್ಯಾಂಗ್' ಮುಂತಾದ ಸಿನಿಮಾಗಳಲ್ಲಿ ನಟಿಸುತ್ತ ಬ್ಯುಸಿ ಆಗಿದ್ದಾರೆ . ಇಷ್ಟೊಂದು ಬ್ಯುಸಿ ಆಗಿರುವ ಈ ನಟ ಈಗ ಸದ್ದಿಲ್ಲದೇ ಸದ್ದಿಲ್ಲದೇ '' ಕಾಲೇಜು ಸೇರಿಕೊಂಡಿದ್ದಾರೆ. 'ಅರೇ, ಶ್ರೀಮಹದೇವ್ ಕಾಲೇಜಿಗೆ ಸೇರಿಕೊಂಡರೇ' ಅಂತ ಅಚ್ಚರಿಪಡಬೇಡಿ. ಅವರೇನೂ ಕಾಲೇಜ್‌ಗೆ ಸೇರಿಕೊಂಡಿಲ್ಲ. ಬದಲಿಗೆ, 'ಪದವಿ ಪೂರ್ವ' ಸಿನಿಮಾದಲ್ಲಿ ಒಂದು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಯೋಗರಾಜ್ ಭಟ್ ಅವರ ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ 'ಪದವಿಪೂರ್ವ' ಚಿತ್ರ ನಿರ್ಮಾಣ ಹಂತದಲ್ಲೇ ಭರ್ಜರಿ ಸುದ್ದಿ ಮಾಡುತ್ತಿದೆ. ಕನ್ನಡ ಚಿತ್ರರಂಗದ ಯುವ ನಟ-ನಟಿಯರು ಒಬ್ಬೊಬ್ಬರಾಗಿಯೇ ಪದವಿಪೂರ್ವ ಚಿತ್ರತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಇದೀಗ ಶ್ರೀಮಹದೇವ್ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. 'ಪದವಿಪೂರ್ವ' ಚಿತ್ರದ ಮೂಲಕ ಯೋಗರಾಜ್ ಭಟ್ ಅವರ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಶ್ರೀಮಹದೇವ್ ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಅವರದ್ದು ಅತಿಥಿ ಪಾತ್ರವಾಗಿದ್ದು, ಅದು ಯಾವ ರೀತಿಯದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
'ನಮ್ಮ ಚಿತ್ರದ ಐದನೇ ಹಂತದ ಚಿತ್ರೀಕರಣ ಈಚೆಗೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಈಗಾಗಲೇ ಎರಡು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಡಿಸೆಂಬರ್ 13ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ' ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ದಿವ್ಯಾ ಉರುಡುಗ ಈ ಸಿನಿಮಾತಂಡಕ್ಕೆ ಸೇರ್ಪಡೆಗೊಂಡಿದ್ದರು. ಬಿಗ್ ಬಾಸ್ ಮನೆಗೆ ಹೋಗಿ ಭಾರಿ ಜನಪ್ರಿಯತೆಯನ್ನು ಗಳಿಸಿರುವ ದಿವ್ಯಾ, ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ.
ಹಾಗೆಯೇ, 'ಡಬಲ್ ಇಂಜಿನ್', 'ರಿಲ್ಯಾಕ್ಸ್ ಸತ್ಯ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಭು ಮುಂಡ್ಕೂರ್ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ 'ಮೈಸೂರು ಡೈರೀಸ್', 'ರಾಂಚಿ', 'ಮರ್ಫಿ' ಸಿನಿಮಾಗಳಿವೆ. ಇದರ ಜೊತೆಗೆ ಅವರು 'ಪದವಿ ಪೂರ್ವ' ತಂಡವನ್ನು ಸೇರಿಕೊಂಡಿದ್ದಾರೆ. ಈಗಿನ ಸರದಿ ಶ್ರಿಮಹದೇವ್ ಅವರದ್ದು. ಇನ್ನು ಈ ಸಿನಿಮಾದಲ್ಲಿ ಹೀರೋ ಆಗಿ ಯುವ ಪ್ರತಿಭೆ ಪೃಥ್ವಿ ಶಾಮನೂರು ಇದ್ದಾರೆ. ಅವರಿಗೆ ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. 'ಪದವಿ ಪೂರ್ವ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದರೆ, ಮಧು ತುಂಬಕೆರೆಯ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ.