ಕಸದ ರಾಶಿಯ ನಡುವೆ ಕನ್ನಡ ನಟಿ ಬಿ ಜಯಾ ಮೃತದೇಹ ವಿಚಾರಕ್ಕೆ ಸ್ಪಷ್ಟನೆ ನೀಡಿದ ಕುಟುಂಬಸ್ಥರು!

ಖ್ಯಾತ ನಟಿ ಬಿ ಜಯಾ ಅವರು ನಿಧನರಾಗಿದ್ದು, ಅವರ ಮೃತದೇಹವನ್ನು ಕಸದ ರಾಶಿ ಬಳಿ ಇಡಲಾಗಿದೆ ಎಂದು ಆರೋಪ ಮಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಜಯಾ ಅವರ ತಮ್ಮನ ಮಗಳು ಸ್ಪಷ್ಟನೆ ನೀಡಿದ್ದಾರೆ.

ಕಸದ ರಾಶಿಯ ನಡುವೆ ಕನ್ನಡ ನಟಿ ಬಿ ಜಯಾ ಮೃತದೇಹ ವಿಚಾರಕ್ಕೆ ಸ್ಪಷ್ಟನೆ ನೀಡಿದ ಕುಟುಂಬಸ್ಥರು!
Linkup
ಬೆಂಗಳೂರು: 350 ಸಿನಿಮಾಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗ, ರಂಗಭೂಮಿ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದ್ದ ನಟಿ ಸಾವನ್ನಪ್ಪಿದ ವಿಷಯ ಬೇಸರ ಮೂಡಿಸಿತ್ತು. ಹೀಗಿರುವಾಗ ಅವರ ಮೃತದೇಹ ಕಸದ ರಾಶಿ ಬಳಿ ಅನಾಥವಾಗಿ ಬಿದ್ದರೆ ಏನು ಅನಿಸುವುದು? ಇದೇ ವಿಷಯಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಿ ಜಯಾ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. ಹೌದು. ಚಾಮರಾಜಪೇಟೆ ಟಿಆರ್‌ಮಿಲ್ ಸಮೀಪ ರಸ್ತೆ ಬದಿಯ ಕಸದ ರಾಶಿ ಪಕ್ಕದಲ್ಲಿ ಬಿ ಜಯಾ ಅವರ ಮೃತದೇಹವಿದೆ. ಅದರ ಪಕ್ಕದಲ್ಲಿ ನಿಂತ ನಾಲ್ಕಾರು ಮಂದಿ "ಸಿನಿಮಾದವರು ಏನು ಮಾಡ್ತಿದ್ದೀರಿ. ಈ ತಾಯಿಯನ್ನು ಗೌರವದಿಂದ ಅಂತ್ಯಸಂಸ್ಕಾರ ಮಾಡಿ. ನೀವು ಯಾರೂ ಒಂದು ಪೈಸೆ ಹಣ ಕೊಡಬೇಡಿ. ನಾವೇ ಖರ್ಚು ಹಾಕಿ ಅಂತ್ಯಸಂಸ್ಕಾರ ಮಾಡ್ತೀವಿ. ನಮ್ಮ ಹಿಂದೆ ನೀವು ನಿಲ್ಲಿ. ಚುನಾವಣೆ ಸಮಯದಲ್ಲಿ ಓಡೋಡಿ ಬರುವ ರಾಜಕಾರಣಿಗಳೇ ಇತ್ತ ನೋಡಿ. ಹಿರಿಯ ಕಲಾವಿದರಿಗೆ ನೀಡುವ ಗೌರವ ಇದೆನಾ? ಕಸದ ರಾಶಿಯಲ್ಲಿ ಮೃತದೇಹ ಇಟ್ಟಿದ್ದೀರಿ. ಫುಟ್‌ಬಾತ್‌ನಲ್ಲಿ ಮಲಗಿಸಿದ್ದೀರಿ" ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದರು. ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿ ಜಯಾ ಅವರ ತಮ್ಮನ ಮಗಳು "ಕರುಣಾಶಯದಿಂದ ಬಿ ಜಯಾ ಪಾರ್ಥಿವ ಶರೀರ ತಂದೆವು. ಸಂಬಂಧಿಕರು, ಚಿತ್ರರಂಗದವರಿಗೂ ಕೂಡ ಯಾರೂ ಬರಬೇಡಿ ಅಂತ ಹೇಳಿದ್ದರು. 11.30-12.00 ಗಂಟೆವರೆಗೂ ನಮಗೆ ಅಂತ್ಯಸಂಸ್ಕಾರ ಮಾಡಲು ಸಮಯ ಕೊಟ್ಟಿದ್ದರು. ಅಲ್ಲಿ ಜನ ಹೆಚ್ಚು ಇರಲಿಲ್ಲ. 11 ಗಂಟೆಗೆ ನಾವು ಅಂತ್ಯ ಸಂಸ್ಕಾರ ಜಾಗಕ್ಕೆ ಹೋದೆವು. ನಾವು ಹೊರಗಡೆ ಪೂಜೆ ಮಾಡಿದೆವು. ರೋಡ್ ಬದಿಯಲ್ಲಿ ಪೂಜೆ ಮಾಡಬೇಕು. ಆಮೇಲೆ ಒಳಗಡೆ ಕರೆದುಕೊಂಡು ಹೋದಾಗ ಸುಡಲು ಅವಕಾಶ ಮಾಡಿಕೊಡಲಾಗುತ್ತದೆ. ಹೋಗುವವರು ಬರುವವರು ವಿಡಿಯೋ ತೆಗೆದುಕೊಂಡು ಹೋಗುತ್ತಿದ್ದರು. ಆ ವೇಳೆ ಕೆಲವರು ವಿಡಿಯೋ ತೆಗೆದು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ, ಕಸದ ರಾಶಿಯಲ್ಲಿ ಹಾಕಿದ್ದಾರೆ, ಪುಟ್‌ಬಾತ್‌ನಲ್ಲಿ ಹಾಕಿದ್ದಾರೆ ಅಂತ ಆರೋಪ ಮಾಡಿದ್ದಾರೆ" ಎಂದು ಬೇಸರ ಹೊರಹಾಕಿದ್ದಾರೆ. "ಬಿ ಜಯಾ ಅವರಿಗೆ ಪಾರ್ಶವಾಯು ಆದಾಗಿನಿಂದ ಅವರ ಚಿಕಿತ್ಸೆಗೆ ಬೇಕಾದಷ್ಟು ದುಡ್ಡು ಖರ್ಚು ಮಾಡಿದ್ದೇವೆ. ಈ ರೀತಿ ಸುದ್ದಿ ಹಬ್ಬಿಸುತ್ತಿರೋದು ಬೇಜಾರಾಯ್ತು. ಅಲ್ಲಿ ಒಂದು ಸಮಾರಂಭ ಕೂಡ ನಡೆಯುತ್ತಿತ್ತು. ಜಯಮ್ಮ ಅವರ ದೇಹ ಇದೆ ಅಂತಾಗ ಸಮಾರಂಭದಲ್ಲಿ ಇರೋರು ಕೂಡ ಬಂದು ದೇಹವನ್ನು ಎತ್ತಿಕೊಂಡು ಹೋಗಿದ್ದಾರೆ. ನಮ್ಮ ಸಂಪ್ರದಾಯದ ಹಾಗೆ ಅಂತ್ಯ ಸಂಸ್ಕಾರ ಮಾಡಿದ್ದೇವೆ. ರೋಡ್‌ನಲ್ಲಿ ಮಲಗಿಸಿದ್ದೇವೆ ಎನ್ನುವ ಕಾರಣಕ್ಕೆ ಈ ರೀತಿ ಆರೋಪ ಮಾಡೋದು ಸರಿಯಲ್ಲ" ಎಂದು ಎಂದು ಬಿ ಜಯಾ ಅವರ ತಮ್ಮನ ಮಗಳು ಬೇಸರ ಹೊರಹಾಕಿದ್ದಾರೆ. "ಜಯಮಾಲಾ, ಉಪೇಂದ್ರ, ಸುನೀಲ್ ಪುರಾಣಿಕ್ ಮುಂತಾದವರು ಸಹಾಯ ಮಾಡಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯವರು, ಕೆಟ್ಟವರು ಇದ್ದಾರೆ. ಚಿತ್ರರಂಗ ಸಹಾಯಕ್ಕೆ ಬಂದಿಲ್ಲ ಅಂತ ಹೇಳಬೇಡಿ" ಎಂದು ನಿರ್ದೇಶಕ, ಹಾಸ್ಯನಟ ಮಲ್ಲೇಶ್ ಹೇಳಿದ್ದಾರೆ.