'ಸೂಪರ್ ಸ್ಟಾರ್' ಕೃಷ್ಣ ಜನ್ಮದಿನದಂದು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ ಪುತ್ರ ಮಹೇಶ್ ಬಾಬು

ನಟ 'ಪ್ರಿನ್ಸ್‌' ಮಹೇಶ್ ಬಾಬು ಅವರು ಸಿನಿಮಾಗಳ ಹೊರತಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಅದಕ್ಕೆ ಸಾಕ್ಷಿ ಅವರು ದತ್ತು ಪಡೆದಿರುವ ಎರಡು ಗ್ರಾಮಗಳು. ಇದೀಗ ಅವರು ತಮ್ಮ ತಂದೆ 'ಸೂಪರ್ ಸ್ಟಾರ್' ಕೃಷ್ಣ ಅವರ ಜನ್ಮದಿನಕ್ಕೆ ಒಂದು ಮಹಾತ್ಕಾರ್ಯ ಮಾಡಿದ್ದಾರೆ. ಅದಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ.

'ಸೂಪರ್ ಸ್ಟಾರ್' ಕೃಷ್ಣ ಜನ್ಮದಿನದಂದು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ ಪುತ್ರ ಮಹೇಶ್ ಬಾಬು
Linkup
ತೆಲುಗು ಚಿತ್ರರಂಗದ ಸಾರ್ವಕಾಲಿಕ 'ಸೂಪರ್ ಸ್ಟಾರ್' ಕೃಷ್ಣ ಅವರಿಗೆ ಇಂದು (ಮೇ 31) ಜನ್ಮದಿನ. ಟಾಲಿವುಡ್‌ನ ಹಿರಿ-ಕಿರಿ ಕಲಾವಿದರು, ಅಭಿಮಾನಿಗಳು ಕೃಷ್ಣ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಮಧ್ಯೆ ಕೃಷ್ಣ ಅವರ ಪುತ್ರ, ನಟ 'ಪ್ರಿನ್ಸ್' ಅವರು ತಂದೆಯ ಜನ್ಮದಿನಕ್ಕೆ ಮಹತ್ವದ ಉಡುಗೊರೆ ನೀಡಿದ್ದಾರೆ. ಹೌದು, ಕೃಷ್ಣ ಅವರ ಹುಟ್ಟೂರು ಗುಂಟೂರು ಜಿಲ್ಲೆಯ ಬುರ್ರಿಪಾಲೆಂನ ಗ್ರಾಮಸ್ತರಿಗೆ ಮಹೇಶ್ ಉಚಿತವಾಗಿ ವ್ಯಾಕ್ಸಿನ್ ಕೊಡಿಸಿದ್ದಾರೆ. ತಮ್ಮ ತಂದೆ ಹುಟ್ಟೂರು ಎಂಬ ಕಾರಣಕ್ಕೆ ಹಲವು ವರ್ಷಗಳ ಹಿಂದೆಯೇ ಈ ಗ್ರಾಮವನ್ನು ಮಹೇಶ್ ದತ್ತು ಪಡೆದುಕೊಂಡು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಅದರ ಜೊತೆಗೆ ಸಿದ್ದಪುರಂ ಎಂಬ ಗ್ರಾಮವನ್ನೂ ಸಹ ಅವರು ದತ್ತು ಪಡೆದುಕೊಂಡಿದ್ದರು. ಸದ್ಯ ಬುರ್ರಿಪಾಲೆಂನ ಗ್ರಾಮಸ್ತರಿಗೆ ತಂದೆಯ ಹುಟ್ಟುಹಬ್ಬದಂದು ವ್ಯಾಕ್ಸಿನ್ ಕೊಡಿಸಿದ್ದಾರೆ. ಮಹೇಶ್ ಮಾಡಿರುವ ಈ ಮಹಾತ್ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಹೇಶ್ ಬಾಬು, 'ನಾವು ಮೊದಲಿನಂತೆ ಜೀವನ ನಡೆಸಲು ಈಗ ಇರುವ ಏಕೈಕ ನಂಬಿಕೆ ಎಂದರೆ, ಅದು ವ್ಯಾಕ್ಸಿನ್ ಮಾತ್ರ. ಬುರ್ರಿಪಾಲೆಂನ ಜನರು ವ್ಯಾಕ್ಸಿನ್‌ ಪಡೆಯಲು ಮತ್ತು ಸುರಕ್ಷಿತವಾಗಿರಲು ನನ್ನ ಕೈಲಾದ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಲಸಿಕೆ ಹಾಕುವುದಕ್ಕೆ ಸಹಕಾರ ನೀಡಿದ ಆಂಧ್ರ ಹಾಸ್ಪಿಟಲ್ಸ್‌ಗೆ ಧನ್ಯವಾದಗಳು. ಹಾಗೇ ಟೀಮ್ ಮಹೇಶ್ ಬಾಬು ಬಳಗವು ಫ್ರಂಟ್‌ಲೈನ್ ವರ್ಕರ್ಸ್ ರೀತಿ ಕೆಲಸ ಮಾಡಿದೆ. ಅವರಿಗೂ ಧನ್ಯವಾದಗಳು. ಲಸಿಕೆಯ ಮಹತ್ವವನ್ನು ಅರಿತು, ಎಲ್ಲರೂ ಮುಂದೆ ಬಂದು ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಬುರ್ರಿಪಾಲೆಂ ಗ್ರಾಮಸ್ತರಿಗೆ ಅಭಿನಂದನೆಗಳು. ಎಲ್ಲರೂ ವ್ಯಾಕ್ಸಿನ್ ಪಡೆಯಿರಿ. ಸುರಕ್ಷಿತವಾಗಿರಿ' ಎಂದು ಟ್ವೀಟ್ ಮಾಡಿದ್ದಾರೆ. ಮಹೇಶ್‌ ಅವರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಸದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಅವರ 'ಸರ್ಕಾರು ವಾರಿ ಪಾಟ' ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆ. ಕಾರಣ, ಚಿತ್ರೀಕರಣ ತಂಡದಲ್ಲಿದ್ದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಮಹೇಶ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಗೀತಾ ಗೋವಿಂದಂ' ಖ್ಯಾತಿಯ ಪರಶುರಾಮ್‌ ಇದರ ನಿರ್ದೇಶಕರು.