ಮುಂಬಯಿನಲ್ಲಿ ಕೊರೊನಾ ಸ್ಫೋಟ, ಒಂದೇ ದಿನ 10,860 ಹೊಸ ಕೇಸ್‌ ಪತ್ತೆ; ಮಹಾರಾಷ್ಟ್ರದಲ್ಲಿ 18,466!

ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಮಂಗಳವಾರ 10,860 ಹೊಸ ಕೊರೊನಾ ಕೇಸ್‌ಗಳು ದೃಢಪಟ್ಟಿದ್ದು, ಏಕಾಏಕಿ ಏರಿಕೆ ಕಂಡಿದೆ. ಸೋಮವಾರಕ್ಕೆ ಹೋಲಿಸಿದರೆ ಹೊಸ ಕೇಸ್‌ಗಳ ಸಂಖ್ಯೆ ಶೇ. 34ರಷ್ಟು ಏರಿಕೆಯಾಗಿದೆ.

ಮುಂಬಯಿನಲ್ಲಿ ಕೊರೊನಾ ಸ್ಫೋಟ, ಒಂದೇ ದಿನ 10,860 ಹೊಸ ಕೇಸ್‌ ಪತ್ತೆ; ಮಹಾರಾಷ್ಟ್ರದಲ್ಲಿ 18,466!
Linkup
ಮುಂಬಯಿ: ಕೊರೊನಾದ ಮೊದಲೆರಡು ಅಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿನ ಪ್ರಕರಣಗಳೊಂದಿಗೆ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ದೇಶದ ವಾಣಿಜ್ಯ ನಗರಿ ಮೂರನೇ ಅಲೆಯಲ್ಲೂ ಕೇಂದ್ರ ಸ್ಥಾನವಾಗುತ್ತಿರುವಂತೆ ಭಾಸವಾಗುತ್ತಿದೆ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಮಂಗಳವಾರ 10,860 ಹೊಸ ಕೇಸ್‌ಗಳು ದೃಢಪಟ್ಟಿದ್ದು ಒಂದೇ ಸಮನೆ ಏರಿಕೆ ಕಂಡಿದೆ. ಸೋಮವಾರ (8,082)ಕ್ಕೆ ಹೋಲಿಸಿದರೆ ಹೊಸ ಕೇಸ್‌ಗಳ ಸಂಖ್ಯೆ ಶೇ. 34ರಷ್ಟು ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ ಶೇ. 89ರಷ್ಟು ಅಂದರೆ 9,665 ರೋಗಿಗಳಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇನ್ನು ವರದಿಯಾದ ಒಟ್ಟು ಪ್ರಕರಣಗಳಲ್ಲಿ 834 ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡುವುದು ಅಗತ್ಯವಾಗಿದ್ದು, ಇವರಲ್ಲಿ 52 ಸೋಂಕಿತರಿಗೆ ಕೃತಕ ಆಕ್ಸಿಜನ್‌ ನೀಡುವ ಅಗತ್ಯ ಇದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಬಿಡುಗಡೆ ಮಾಡಿರುವ ದೈನಂದಿನ ಬುಲೆಟಿನ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ. ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್‌ ಮುಂಬಯಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈಗಿನ ಕೋವಿಡ್‌ - 19 ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂಕಿ-ಅಂಶಗಳೂ ಇದನ್ನೇ ಪುಷ್ಠಿಕರಿಸುತ್ತಿವೆ. ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ದೇಶದಲ್ಲಿ 1,900ಕ್ಕೂ ಹೆಚ್ಚು ಓಮಿಕ್ರಾನ್‌ ಕೇಸ್‌ಗಳು ಪತ್ತೆಯಾಗಿದ್ದು, ಇವುಗಳಲ್ಲಿ 500ಕ್ಕೂ ಹೆಚ್ಚು ರಾಜ್ಯವೊಂದರಲ್ಲೇ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ 18,466 ಕೇಸ್‌ ಇನ್ನು ಮಹಾರಾಷ್ಟ್ರದಲ್ಲಿ ಮಂಗಳವಾರ 18,466 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಮವಾರಕ್ಕಿಂತ ಶೇ. 51ರಷ್ಟು ಏರಿಕೆಯಾಗಿವೆ. ಸೋಮವಾರ ರಾಜ್ಯದಲ್ಲಿ 12,160 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಇದೇ ವೇಳೆ 20 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿಯೂ ಕೊರೊನಾ ಕೇಸ್‌ ಏರಿಕೆ ರಾಜ್ಯದಲ್ಲಿ ಕೊರೊನಾ ವೈರಸ್‌ನ 3ನೇ ಅಲೆಗೆ ಮುನ್ನುಡಿ ಎಂಬಂತೆ ಮಂಗಳವಾರ ಒಂದೇ ದಿನ ಬರೋಬ್ಬರಿ 2,479 ಹೊಸ ಕೋವಿಡ್‌ -19 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಮಂಗಳವಾರ 2,053 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇನ್ನು ರಾಜ್ಯದಲ್ಲಿ ಈವರೆಗೆ 77 ಓಮಿಕ್ರಾನ್ ಪ್ರಕರಣಗಳು ಬೆಳಕಿಗೆ ಬಂದಿವೆ.