‘ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ - ಲಸಿಕೆ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರೀಂ ಕ್ಲಾಸ್‌

ಲಸಿಕೆಗಳನ್ನು ಖರೀದಿಸಲು ಕೇಂದ್ರ ಬಜೆಟ್‌ನಲ್ಲಿ ಮೀಸಲಿಟ್ಟಿರುವ 35,000 ಕೋಟಿ ರೂ. ಬಗ್ಗೆಯೂ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದ್ದು, 18-44 ವರ್ಷ ವಯಸ್ಸಿನ ವ್ಯಕ್ತಿಗಳ ಲಸಿಕೆಗೆ ಈ ಹಣವನ್ನು ಬಳಸಲು ಏಕೆ ಸಾಧ್ಯವಿಲ್ಲ ಎಂದೂ ಕೇಳಿದೆ.

‘ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ - ಲಸಿಕೆ ವಿಚಾರದಲ್ಲಿ ಕೇಂದ್ರಕ್ಕೆ ಸುಪ್ರೀಂ ಕ್ಲಾಸ್‌
Linkup
ಹೊಸದಿಲ್ಲಿ: 18 ರಿಂದ 44 ವರ್ಷದೊಳಗಿನವರಿಗೆ ಹಣ ಪಾವತಿಸಿ ಲಸಿಕೆ ನೀಡುವ ಕೇಂದ್ರದ ನಿರ್ಧಾರ 'ಅನಿಯಂತ್ರಿತ ಮತ್ತು ವಿಚಾರಹೀನ ನಿರ್ಧಾರ' ಎಂದು ಕಟು ಮಾತುಗಳಲ್ಲಿ ಹೇಳಿದೆ. ಜತೆಗೆ ಕೇಂದ್ರದ ಲಸಿಕೆ ಅಭಿಯಾನದ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಮುಖ ಐದು ಅಂಶಗಳು ಇಲ್ಲಿವೆ,
  1. ನ್ಯಾಯಾಲಯವು ಕಾರ್ಯಾಂಗದ ನಿರ್ಧಾರಗಳಿಂದ ದೂರವಿರಬೇಕು ಎಂದು ಕೇಂದ್ರ ಹೇಳುತ್ತಿದೆ. ಕಾರ್ಯಾಂಗದ ನೀತಿಯಿಂದಾಗಿ ನಾಗರಿಕರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘಿಸಿದಾಗ ನ್ಯಾಯಾಲಯಗಳು ಮೂಕ ಪ್ರೇಕ್ಷಕರಾಗಿರುವುದನ್ನು ಸಂವಿಧಾನವು ಸಹಿಸುವುದಿಲ್ಲ.
  2. ಲಸಿಕೆಗಳನ್ನು ಖರೀದಿಸಲು ಕೇಂದ್ರ ಬಜೆಟ್‌ನಲ್ಲಿ ಮೀಸಲಿಟ್ಟಿರುವ 35,000 ಕೋಟಿ ರೂಪಾಯಿಯನ್ನು ಇಲ್ಲಿಯವರೆಗೆ ಹೇಗೆ ಖರ್ಚು ಮಾಡಲಾಗಿದೆ ಮತ್ತು 18-44 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಸಿಕೆ ಹಾಕಲು ಅವುಗಳನ್ನು ಏಕೆ ಬಳಸಲಾಗುವುದಿಲ್ಲ ಎಂಬುದನ್ನು ಸರಕಾರವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಬೇಕು.
  3. ಕೋವ್ಯಾಕ್ಸಿನ್‌, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಸೇರಿದಂತೆ ಇಲ್ಲಿಯವರೆಗಿನ ಎಲ್ಲಾ ಲಸಿಕೆಗಳ ಖರೀದಿಯ ಸಂಪೂರ್ಣ ಮಾಹಿತಿಗಳಿರುವ ಅಫಿಡವಿಟ್‌ನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಎಲ್ಲಾ ಖರೀದಿ ಆದೇಶಗಳ ದಿನಾಂಕ, ಆರ್ಡರ್‌ಗಳ ಸಂಖ್ಯೆ, ಪೂರೈಕೆಯ ದಿನಾಂಕವನ್ನು ಸುಪ್ರೀಂ ಕೋರ್ಟ್‌ ಸರಕಾರದಿಂದ ಕೇಳಿದೆ.
  4. ಭಾರತದಲ್ಲಿ ಲಭ್ಯವಿರುವ ಲಸಿಕೆಗಳ ಬೆಲೆಗಳನ್ನು ಸರಕಾರವು ಅಂತರರಾಷ್ಟ್ರೀಯ ಬೆಲೆಗಳೊಂದಿಗೆ ಹೋಲಿಕೆ ಮಾಡಿ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
  5. ಡಿಸೆಂಬರ್ 31 ರವರೆಗೆ ಲಸಿಕೆಗಳ ಲಭ್ಯತೆಯ ನೀಲನಕ್ಷೆಯನ್ನು ನೀಡುವಂತೆಯೂ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿದೆ. “ಉದಾರೀಕೃತ ವ್ಯಾಕ್ಸಿನೇಷನ್ ನೀತಿ”ಯಿಂದ ಸ್ಪರ್ಧಾತ್ಮಕ ಬೆಲೆಗೆ ಹಾಗೂ ಹೆಚ್ಚಿನ ಲಸಿಕೆಗಳನ್ನು ಪಡೆಯಲು ಸಾಧ್ಯವಾಗದೇ ಇರಬಹುದು ಎಂದೂ ನ್ಯಾಯಾಲಯ ಎಚ್ಚರಿಸಿದೆ.