ಗೆಳತಿಯನ್ನು ನೋಡಲು ಹೋಗಿ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದ ಟೆಕ್ಕಿ 4 ವರ್ಷದ ಬಳಿಕ ಹೈದರಾಬಾದ್‌ಗೆ ವಾಪಸ್

ಸ್ವಿಟ್ಜರ್ಲೆಂಡ್‌ನಲ್ಲಿದ್ದ ಗೆಳತಿಯನ್ನು ಭೇಟಿ ಮಾಡಲು ಪಾಕಿಸ್ತಾನದ ಮೂಲಕ ನಡೆದುಕೊಂಡು ಹೋಗುವ ಸಾಹಸಕ್ಕೆ ಕೈಹಾಕಿ ಪಾಕ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ವಿಶಾಖಪಟ್ಟಣಂ ಮೂಲದ ಟೆಕ್ಕಿಯನ್ನು ನಾಲ್ಕು ವರ್ಷದ ಬಳಿಮ ಬಿಡುಗಡೆ ಮಾಡಲಾಗಿದೆ.

ಗೆಳತಿಯನ್ನು ನೋಡಲು ಹೋಗಿ ಪಾಕಿಸ್ತಾನದಲ್ಲಿ ಬಂಧಿತನಾಗಿದ್ದ ಟೆಕ್ಕಿ 4 ವರ್ಷದ ಬಳಿಕ ಹೈದರಾಬಾದ್‌ಗೆ ವಾಪಸ್
Linkup
ವಿಶಾಖಪಟ್ಟಣಂ: ಸ್ವಿಟ್ಜರ್ಲೆಂಡ್‌ಗೆ ಕಾಲ್ನಡಿಗೆಯಲ್ಲಿ ತೆರಳುವ ಸಾಹಸದಲ್ಲಿ ಅಕ್ರಮವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ ನಾಲ್ಕು ವರ್ಷ ಬಂಧನದಲ್ಲಿದ್ದ ಹೈದರಾಬಾದ್ ಮೂಲಕ ವೈದಂ ಪ್ರಶಾಂತ್ ಅವರು ಮಂಗಳವಾರ ತಮ್ಮ ತವರಿಗೆ ಮರಳಿದ್ದಾರೆ. ವಿಶಾಖಪಟ್ಟಣಂ ಮೂಲದವರಾದ ಪ್ರಶಾಂತ್, 2017ರಲ್ಲಿ ಬಂಧನಕ್ಕೆ ಒಳಗಾದ ಬಳಿಕ ಪಾಕಿಸ್ತಾನದ ಜೈಲಿನಲ್ಲಿ ನಾಲ್ಕು ವರ್ಷಗಳನ್ನು ಕಳೆದಿದ್ದರು. ಅವರನ್ನು ಭಾರತೀಯ ಬೇಹುಗಾರ ಎಂಬ ಗುಮಾನಿಯೊಂದಿಗೆ ಬಂಧಿಸಲಾಗಿತ್ತು. ನಾಲ್ಕು ವರ್ಷದ ಸೆರೆವಾಸ ಅನುಭವಿಸಿದ ಬಳಿಕ 32 ವರ್ಷದ ಪ್ರಶಾಂತ್ ಅವರನ್ನು ಅಟ್ಟಾರಿ ಗಡಿಯಲ್ಲಿ ರೇಂಜರ್‌ಗಳು ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಸೋಮವಾರ ಒಪ್ಪಿಸಿದರು. ಮಂಗಳವಾರ ಹೈದರಾಬಾದ್‌ಗೆ ಬಂದಿಳಿದ ಅವರು, ವಿಶಾಖಪಟ್ಟಣಂಗೆ ತೆರಳಲಿದ್ದಾರೆ. ಯಾವುದೇ ವೀಸಾ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಕಡೆಗೆ ನಡೆದೇ ಹೊರಟಿದ್ದ ಪ್ರಶಾಂತ ಅವರನ್ನು 2017ರ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ಪುರದಲ್ಲಿ ಬಂಧಿಸಲಾಗಿತ್ತು. ಸ್ವಿಟ್ಜರ್ಲೆಂಡ್‌ನಲ್ಲಿದ್ದ ಸ್ವಪ್ನಿಕಾ ಪಾಂಡೆ ಎಂಬ ಹೆಸರಿನ ಮಹಿಳೆಯನ್ನು ಭೇಟಿ ಮಾಡುವ ಸಲುವಾಗಿ ಅವರು ಈ ದುಸ್ಸಾಹಸಕ್ಕೆ ಕೈಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸ್ವಪ್ನಿಕಾ ಅವರ ಪರಿಚಯವಾಗಿತ್ತು. ಆಕೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಪ್ರಶಾಂತ್ ಅವರನ್ನು ಪಾಕಿಸ್ತಾನದ ಪಡೆಗಳು ಭಾರತೀಯ ಬೇಹುಗಾರ ಎಂದೆನಿಸಿ ಬಂಧಿಸಿದ್ದವು. ಹೈದರಾಬಾದ್‌ನಿಂದ ಹೊರಡುವ ಮುನ್ನ ಪ್ರಶಾಂತ್, ಮಧ್ಯಪ್ರದೇಶದಲ್ಲಿದ್ದ ಸ್ವಪ್ನಿಕಾರ ಪೋಷಕರನ್ನು ಭೇಟಿಯಾಗಿ ಆಕೆಯನ್ನು ಮದುವೆಯಾಗುವ ಪ್ರಸ್ತಾಪವನ್ನು ಇರಿಸಿದ್ದರು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ಹೀಗಾಗಿ ಸ್ವಿಟರ್ಲೆಂಡ್‌ಗೆ ನೇರವಾಗಿ ತೆರಳಲು ಅವರು ನಿರ್ಧರಿಸಿದ್ದರು. 'ನನ್ನ ತಾಯಿಯ ಸಲಹೆಯನ್ನು ಕೇಳದೆ ಮನೆಬಿಟ್ಟು ಹೋಗಿದ್ದೆ. ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ ನನಗೆ ಪಾಕಿಸ್ತಾನದ ಮೂಲಕ ಸ್ವಿಟ್ಜರ್ಲೆಂಡ್‌ಗೆ 61 ದಿನಗಳಲ್ಲಿ ನಡೆದುಕೊಂಡು ಹೋಗಬಹುದು ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ ಅದನ್ನು ಮಾಡಲು ಪ್ರಯತ್ನಿಸಿದೆ' ಎಂದು ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾಧಪುರದ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್, 2017ರ ಏಪ್ರಿಲ್ 11ರಂದು ಮನೆಯಿಂದ ಹೊರಹೋಗಿದ್ದರು. ಮಗ ಕಾಣೆಯಾಗಿದ್ದಾನೆ ಎಂದು ಏಪ್ರಿಲ್ 29ರಂದು ಅವರ ತಂದೆ ದೂರು ನೀಡಿದ್ದರು. 2019ರಲ್ಲಿ ಪಾಕಿಸ್ತಾನದ ಜೈಲಿನಿಂದ ಆತನ ಪೋಷಕರಿಗೆ ಬಂದಿದ್ದ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.