
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಅಧಿನಾಯಕಿ , ವಿಪಕ್ಷ ಕೂಟದ ನಾಯಕತ್ವವಹಿಸಿಕೊಳ್ಳುವ ಬಗ್ಗೆ ಮಾತ್ರ ಸ್ಪಷ್ಟ ಚಿಂತನೆಯನ್ನು ಹೊಂದಿಲ್ಲ.
ಹೊಸದಿಲ್ಲಿಯಲ್ಲಿ ಇಂದು(ಜುಲೈ 28-ಬುಧವಾರ) ಕಾಂಗ್ರೆಸ್ ಅಧ್ಯಕ್ಷೆ ಅವರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ, ವಿಪಕ್ಷಗಳ ಒಗ್ಗಟ್ಟಿನ ಕುರಿತು ಚರ್ಚೆ ನಡೆಸಿದರು. 2024ರಲ್ಲಿ ಪ್ರಧಾನಿ ಮೋದಿ ಎಂಬ ಸುನಾಮಿಯನ್ನು ಎದುರಿಸಲು ವಿಪಕ್ಷಗಳು ಹೆಣೆಯಬೇಕಾದ ತಂತ್ರಗಳ ಕುರಿತು ಇಬ್ಬರೂ ನಾಯಕಿಯರು ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಮಾತನಾಡಿದ ಮಮತಾ ಬ್ಯಾನರ್ಜಿ, ವಿರೋಧಿ ಮೈತ್ರಿಕೂಟದ ನಾಯಕತ್ವವಹಿಸಿಕೊಳ್ಳುವ ಕುರಿತು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ವಿಪಕ್ಷಗಳ ಮೈತ್ರಿಕೂಟದ ನಾಯಕತ್ವ ಯಾರ ಹೆಗಲಿಗೆ ಬೀಳಲಿದೆ ಎಂಬುದನ್ನು ಈಗಲೇ ಹೇಳಲು ನಾನು ರಾಜಕೀಯ ಜ್ಯೋತಿಷಿ ಅಲ್ಲ ಎಂದ ಮಮತಾ, ಸಮಯ ಹಾಗೂ ಸಂದರ್ಭವನ್ನು ಪರಿಗಣಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ವಿರೋಧಿ ಮೈತ್ರಿಕೂಟದ ನಾಯಕತ್ವವನ್ನು ನೀವು ವಹಿಸಿಕೊಳ್ಳುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಮಮತಾ, ನಾನು ಕೇವಲ ಓರ್ವ ಕಾರ್ಯಕರ್ತೆಯಾಗಿದ್ದು ಕಾರ್ಯಕರ್ತೆಯಾಗಿಯೇ ಮುಂದುವರೆಯಬೇಕು ಎಂಬ ಮನಸ್ಸಿದೆ ಎಂದು ಹೇಳಿದರು. ಟಿಎಂಸಿ ಎಲ್ಲಾ ಪ್ರಮುಖ ವಿಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಮೊದಲು ವಿಪಕ್ಷಗಳ ಗಟ್ಟಿ ಮೈತ್ರಿಕೂಟ ರಚನೆ ಮಾಡುವುದು ನಮ್ಮ ಗುರಿ ಎಂದು ಮಮತಾ ಹೇಳಿದರು.
ಇದಾದ ಬಳಿಕ ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪುತ್ರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪ್ರಬಲ ಮೈತ್ರಿಕೂಟದ ರಚನೆಯ ಅವಶ್ಯಕತೆಯನ್ನು ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರಿಗೆ ಮನದಟ್ಟು ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹುಮ್ಮಸ್ಸಿನಲ್ಲಿರುವ ಮಮತಾ ಬ್ಯಾನರ್ಜಿ, 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ-ಶಾ ನೇತೃತ್ವದ ಬಿಜೆಪಿಯನ್ನುಯ ಎದುರು ಹಾಕಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಆದರೆ ಇದಕ್ಕಾಗಿ ಪ್ರಬಲ ವಿಪಕ್ಷಗಳ ಮೈತ್ರಿಕೂಟದ ಅವಶ್ಯಕತೆಯನ್ನು ಅರಿತಿರುವ ಮಮತಾ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.