ಭಾರತವೇ ಡ್ರಗ್ಸ್‌ ಜಾಲದ ವಿತರಣೆ ಕೇಂದ್ರ..? 2021ರಲ್ಲಿ 3 ಸಾವಿರ ಕೆ. ಜಿ.ಗಳಷ್ಟು ಹೆರಾಯಿನ್‌ ವಶ..!

​​ಭಾರಿ ಪ್ರಮಾಣದಲ್ಲಿ ಹೆರಾಯಿನ್‌ ಸಾಗಣೆಯಾಗುತ್ತಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಜತೆಗೆ, ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲವು ಭಾರತವನ್ನು ಸಾಗಣೆ ಕೇಂದ್ರವಾಗಿ ರೂಪಿಸಿರುವ ಆತಂಕವೂ ವ್ಯಕ್ತವಾಗಿದೆ.

ಭಾರತವೇ ಡ್ರಗ್ಸ್‌ ಜಾಲದ ವಿತರಣೆ ಕೇಂದ್ರ..? 2021ರಲ್ಲಿ 3 ಸಾವಿರ ಕೆ. ಜಿ.ಗಳಷ್ಟು ಹೆರಾಯಿನ್‌ ವಶ..!
Linkup
: ವಿವಿಧ ತನಿಖಾ ಸಂಸ್ಥೆಗಳು 2018ರಲ್ಲಿ ದೇಶದಲ್ಲಿ ವಶಪಡಿಸಿಕೊಂಡಿದ್ದು, 8 ಕೆ. ಜಿ. ಹೆರಾಯಿನ್‌. ಆದರೆ ಕೇವಲ ನಾಲ್ಕು ವರ್ಷಗಳಲ್ಲಿ, ಅಂದರೆ 2021 ರಲ್ಲಿ 3 ಸಾವಿರ ಕೆ. ಜಿ. ಗಳಷ್ಟು ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ..! ಭಾರಿ ಪ್ರಮಾಣದಲ್ಲಿ ಹೆರಾಯಿನ್‌ ಸಾಗಣೆಯಾಗುತ್ತಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಜತೆಗೆ, ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲವು ಭಾರತವನ್ನು ಕೇಂದ್ರವಾಗಿ ರೂಪಿಸಿರುವ ಆತಂಕವೂ ವ್ಯಕ್ತವಾಗಿದೆ. ವಿಶೇಷವಾಗಿ ಮುಂಬಯಿ ಹಾಗೂ ಗುಜರಾತ್‌ನ ವಿವಿಧ ನಗರಗಳ ಬಂದರುಗಳ ಮೂಲಕ ಹೆರಾಯಿನ್‌ ಭಾರಿ ಪ್ರಮಾಣದಲ್ಲಿ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಗಳಾದ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಮತ್ತು ಡೈರೆಕ್ಟೊರೇಟ್‌ ಆಫ್‌ ರೆವೆನ್ಯೂ ಇಂಟೆಲಿಜೆನ್ಸ್‌ (ಡಿಆರ್‌ಐ) ಅಧಿಕಾರಿಗಳು ಈ ಜಾಲವನ್ನು ಪತ್ತೆ ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಲಾಕ್‌ ಡೌನ್‌ ಹಾಗೂ ಇತರ ಸಂಚಾರ ನಿರ್ಬಂಧಗಳ ಹೊರತಾಗಿಯೂ ರಾಜ್ಯವಾರು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿರುವ ಹೆರಾಯಿನ್‌ ಸೇರಿದಂತೆ ಮಾದಕ ವಸ್ತುಗಳ ಪ್ರಮಾಣ ಗಣನೀಯವಾಗಿದೆ. ಲಾಕ್‌ ಡೌನ್‌ ಸಂದರ್ಭದಲ್ಲಿ ದೇಶಾದ್ಯಂತ ಸಿಕ್ಕಿದ್ದು, ಬರೋಬ್ಬರಿ 202 ಕೆ.ಜಿ. ಹೆರಾಯಿನ್‌..! ಇನ್ನು 2022ರ ವಿಷಯಕ್ಕೆ ಬಂದರೆ, ಕಳೆದ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3000 ಕೆ. ಜಿ. ಹೆರಾಯಿನ್‌ ವಶಕ್ಕೆ ಪಡೆಯಲಾಗಿತ್ತು. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯವು 21 ಸಾವಿರ ಕೋಟಿ ರೂ. ಗೂ ಅಧಿಕ ಎಂದು ಗೊತ್ತಾದ ಕೂಡಲೇ ಅಧಿಕಾರಿಗಳೇ ಗಾಬರಿ ಬಿದ್ದಿದ್ದರು. ಈ ವರ್ಷ 2022ರ ಸೆಪ್ಟೆಂಬರ್‌ ಅಂತ್ಯದವರೆ 9,000 ಕೆ. ಜಿ. ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ. ಇರಾನ್‌, ಇರಾಕ್‌ ಬದಲು ಇಂಡಿಯಾ: 'ಕೆಲ ವರ್ಷಗಳ ಮುನ್ನ ಪಾಶಿಮಾತ್ಯ ರಾಷ್ಟ್ರಗಳಿಗೆ ಅಫ್ಘಾನಿಸ್ತಾನದಿಂದ ಡ್ರಗ್ಸ್‌ ಪೂರೈಕೆಯಾಗುತ್ತಿತ್ತು. ತಾಲಿಬಾನಿಗಳಿಗೆ ಈಗಲೂ ಮಾದಕ ಪದಾರ್ಥ ರಫ್ತು ಆದಾಯದ ಮುಖ್ಯ ಮೂಲವಾಗಿದೆ. ಇರಾನ್‌, ಇರಾಕ್‌ ಸಾಗಣೆ ಕೇಂದ್ರಗಳಾಗಿದ್ದವು. ಆದರೆ ಅಲ್ಲಿನ ಸರಕಾರಿ ಅಧಿಕಾರಿಗಳು, ಬಂಡುಕೋರರು ಡ್ರಗ್ಸ್‌ ಪ್ರಮಾಣದಲ್ಲಿ ತಮಗೆ ಬೇಕಾದಷ್ಟು ಲೂಟಿ ಮಾಡಿಕೊಳ್ಳುತ್ತಿದ್ದರು. ಇನ್ನು ನೆರೆಯ ಪಾಕಿಸ್ತಾನ ಸಹ ಭಾರತಕ್ಕೆ ಡ್ರಗ್ಸ್‌ ಸಾಗಣೆ ಮಾಡುತ್ತಿದೆ. ಆ ದೇಶಕ್ಕೆ ಉಗ್ರರನ್ನು ಪೊರೆಯಲು ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆಯಲು ಡ್ರಗ್ಸ್‌ ಬಹು ದೊಡ್ಡ ಮಾಧ್ಯಮವಾಗಿದೆ. ಹಾಗಾಗಿ ಭಾರಿ ಮೊತ್ತದ ಮಾದಕ ವಸ್ತುಗಳ ಸಂಗ್ರಹ ಹಾಗೂ ಸಾಗಣೆಗೆ ಭಾರತವೇ ಸೂಕ್ತ ಎಂದು ಅಂತಾರಾಷ್ಟ್ರೀಯ ಜಾಲ ತೀರ್ಮಾನಿಸಿದಂತಿದೆ ಎಂದು ಪಂಜಾಬ್‌ ಮಾಜಿ ಪೊಲೀಸ್‌ ಮಹಾ ನಿರ್ದೇಶಕ ಶಶಿಕಾಂತ್‌ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 'ಎನ್‌ಸಿಬಿ ಮತ್ತು ಡಿಆರ್‌ಐಗಳು ಬಂದರುಗಳ ಮೂಲಕ ಸಾಗಣೆಯಾಗುವ ಪ್ರತಿ ಸರಕನ್ನೂ ಪರಿಶೀಲಿಸುವುದು ಸಾಧ್ಯವಿಲ್ಲ. ಖಚಿತ ಮಾಹಿತಿ ಸಿಕ್ಕರೆ ಅಥವಾ ಅನುಮಾನವಿದ್ದಲ್ಲಿ ಮಾತ್ರ ದಾಳಿ ನಡೆಸಬಹುದು. ಅಂತಾರಾಷ್ಟ್ರೀಯ ಜಾಲಕ್ಕೆ ಇದೇ ವರದಾನವಾಗಿದೆ. ಹೀಗಾಗಿ ಈ ಜಾಲವನ್ನು ಮಟ್ಟ ಹಾಕುವುದು ಬಹು ದೊಡ್ಡ ಸವಾಲು' ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.