ದೆಹಲಿಯ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಇಂಜಿನ್‌ ಬಂದ್‌ ಅಭಿಯಾನಕ್ಕೆ ಅ.18ರಂದು ಚಾಲನೆ!

ದಿಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ 'ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್‌ ಆಫ್‌ ಮಾಡಿ' ಅಭಿಯಾನಕ್ಕೆ ಅ.18ರಂದು ಚಾಲನೆ ನೀಡಲಿದೆ.

ದೆಹಲಿಯ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಇಂಜಿನ್‌ ಬಂದ್‌ ಅಭಿಯಾನಕ್ಕೆ ಅ.18ರಂದು ಚಾಲನೆ!
Linkup
ಹೊಸದಿಲ್ಲಿ: ಪ್ರತಿವರ್ಷ ಚಳಿಗಾಲದಲ್ಲಿ ಮಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ದಿಲ್ಲಿಯ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಸಾಕಷ್ಟು ಮುಂಚಿತವಾಗಿಯೇ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ 'ಕೆಂಪು ದೀಪ ಹತ್ತಿದ ತಕ್ಷಣ ಎಂಜಿನ್‌ ಆಫ್‌ ಮಾಡಿ' (ರೆಡ್‌ ಲೈಟ್‌ ಆನ್‌ ವೆಹಿಕಲ್‌ ಆಫ್‌) ಅಭಿಯಾನಕ್ಕೆ ಅ.18ರಂದು ಚಾಲನೆ ನೀಡಲಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ''ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕೆಂಪು ದೀಪ ಕಂಡ ಕೂಡಲೇ ವಾಹನಗಳ ಎಂಜಿನ್‌ ಆಫ್‌ ಮಾಡುವ ಮೂಲಕ ಅನಗತ್ಯವಾಗಿ ವಾಹನದ ಹೊಗೆ ವಾತಾವರಣಕ್ಕೆ ಸೇರುವುದನ್ನು ತಡೆಯಬಹುದು. ದಿಲ್ಲಿ ನಗರದಲ್ಲಿ ವಾಹನಗಳು ಉಗುಳುವ ಹೊಗೆ ಕೂಡ ಹೆಚ್ಚಳಕ್ಕೆ ಕಾರಣವಾಗಿದೆ. ದಿಲ್ಲಿಯ ನಾಗರಿಕರು ಜವಾಬ್ದಾರಿ ಪ್ರದರ್ಶಿಸಿ, ಮಾಲಿನ್ಯ ತಗ್ಗಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ. ತಜ್ಞರ ಪ್ರಕಾರ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕೆಂಪು ದೀಪ ಉರಿಯುತ್ತಿದ್ದಾಗ ವಾಹನಗಳ ಎಂಜಿನ್‌ ಆಫ್‌ ಮಾಡಿದರೆ ಒಟ್ಟಾರೆಯಾಗಿ 250 ಕೋಟಿ ರೂ. ಇಂಧನ ದೇಶದಲ್ಲಿ ಉಳಿಕೆ ಆಗುತ್ತದೆ. ಜತೆಗೆ ವಾಯುಮಾಲಿನ್ಯ ಪ್ರಮಾಣ ಕೂಡ 13-20% ತಗ್ಗುತ್ತದೆ,'' ಎಂದು ವಿವರಿಸಿದ್ದಾರೆ. ''ದಿಲ್ಲಿ ವಾಸಿಗಳು ವಾರಕ್ಕೊಮ್ಮೆ ಮಾತ್ರವೇ ವಾಹನ ಬಳಸಬೇಕು. ಸಾರ್ವಜನಿಕ ಸಾರಿಗೆ ಜತೆಗೆ ಕಾರು ಪೂಲಿಂಗ್‌ ವ್ಯವಸ್ಥೆಗಳನ್ನು ಹೆಚ್ಚಾಗಿ ಬಳಸಬೇಕು. ಕನಿಷ್ಠ 3-4 ತಿಂಗಳು ದಿಲ್ಲಿ ನಿವಾಸಿಗರು ಸಹಕರಿಸಿದರೆ, ವಿಷಕಾರಿ ಗಾಳಿ ಸೇವನೆ ಆಪತ್ತಿನಿಂದ ರಾಷ್ಟ್ರ ರಾಜಧಾನಿ ಪಾರಾಗಲಿದೆ,'' ಎಂದು ಅವರು ಮನವಿ ಮಾಡಿದ್ದಾರೆ. ಪಂಜಾಬ್‌ ಹಾಗೂ ಉತ್ತರ ಪ್ರದೇಶಗಳಲ್ಲಿ ಭತ್ತದ ಕುಳೆ ಸುಡುವ ಮೂಲಕ ಗಾಳಿಗೆ ವಿಷಕಾರಿ ಪಿಎಂ 2.5 ಕಣಗಳು ಹೆಚ್ಚಾಗಿ ಸೇರ್ಪಡೆಗೊಳ್ಳುತ್ತವೆ. ಇದು ಕೂಡ ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚು ಚಳಿಗಾಲ ಆರಂಭವಾಯಿತೆಂದರೆ ದಿಲ್ಲಿ ಹಾಗೂ ಸುತ್ತಲಿನ ನಗರಗಳಲ್ಲಿ ವಾಯುಮಾಲಿನ್ಯ ಸಮಸ್ಯೆ ಎದುರಾಗುತ್ತದೆ. ದಿಲ್ಲಿ ಸೇರಿದಂತೆ ದೇಶದ ಉತ್ತರ ಭಾಗದಲ್ಲಿನ ಅತ್ಯಂತ ಕೆಟ್ಟ ಗಾಳಿ ಸೇವನೆಯಿಂದ ಸಮಸ್ಯೆಗೆ ಗುರಿಯಾದವರು ಅಧಿಕ ಎಂದು ವರದಿ ಹೇಳಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್‌, ಬಿಹಾರ ಹಾಗೂ ಪಶ್ಚಿಮ ಬಂಗಾಳವನ್ನು ಗಂಗಾ ನದಿ ಯ ಕಿನಾರೆ ರಾಜ್ಯಗಳು ಎಂದು ಗುರಿತಿಸಲಾಗುತ್ತಿದ್ದು, ಈ ಎಲ್ಲ ರಾಜ್ಯಗಳಲ್ಲಿ ಜನರ ಜೀವಿತಾವಧಿ ವಾಯುಮಾಲಿನ್ಯದಿಂದಾಗಿ ನಶಿಸುತ್ತಿದೆ ಎಂದು ವಿಶ್ಲೇಶಿಸಲಾಗಿದೆ. ದಿಲ್ಲಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. 28 ವರ್ಷದ ಯುವಕ, ಧೂಮಪಾನವೇ ಮಾಡದ ವ್ಯಕ್ತಿಗೆ ಸ್ಟೇಜ್‌-4 ಶ್ವಾಸಕೋಶದ ಕ್ಯಾನ್ಸರ್‌ ಇರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಇತ್ತೀಚಿನ ದಿನದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವ ಶೇ.50 ಮಂದಿ ಧೂಮಪಾನಿಗಳಲ್ಲ ಎಂದು ವರದಿಗಳು ತಿಳಿಸಿವೆ.