ಬಿಬಿಎಂಪಿಯ ಹೊಸ ಗುತ್ತಿಗೆ ನಿಯಮಕ್ಕೆ ಕನ್ನಡ ಸಂಘ-ಸಂಸ್ಥೆಗಳಿಂದ ವಿರೋಧ; ಶುಲ್ಕ ವಿಧಿಸುವುದಕ್ಕೆ ಆಕ್ಷೇಪ!

ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿರುವ ಹಾಗೂ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘ-ಸಂಸ್ಥೆಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ನಗರದಲ್ಲಿ ಸುಮಾರು 250ಕ್ಕೂ ಅಧಿಕ ಕನ್ನಡ ಸಂಘ-ಸಂಸ್ಥೆಗಳು, ಶಾಲೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಗಳಿಗೆ ಬಿಬಿಎಂಪಿಯು ನಿವೇಶನಗಳನ್ನು ಗುತ್ತಿಗೆಗೆ ನೀಡಿದೆ.

ಬಿಬಿಎಂಪಿಯ ಹೊಸ ಗುತ್ತಿಗೆ ನಿಯಮಕ್ಕೆ ಕನ್ನಡ ಸಂಘ-ಸಂಸ್ಥೆಗಳಿಂದ ವಿರೋಧ; ಶುಲ್ಕ ವಿಧಿಸುವುದಕ್ಕೆ ಆಕ್ಷೇಪ!
Linkup
ಬೆಂಗಳೂರು: ಕನ್ನಡ ನಾಡು, ನುಡಿ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳು, ಶಾಲೆಗಳಿಗೆ ಗುತ್ತಿಗೆಗೆ ನೀಡಿರುವ ನಿವೇಶನ, ಕಟ್ಟಡಗಳ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನಾಧರಿಸಿ ವಾರ್ಷಿಕ ಗುತ್ತಿಗೆ ಶುಲ್ಕವನ್ನು ನಿಗದಿಪಡಿಸಲು ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನಿಗದಿಗಿಂತ ಶೇ 10ರಷ್ಟು ಹೆಚ್ಚಿಸಿ, ಗುತ್ತಿಗೆ ನವೀಕರಣ ಮಾಡಿಕೊಡಬೇಕೆಂದು ಕನ್ನಡ ಸಂಘ-ಸಂಸ್ಥೆಗಳು ಪಟ್ಟು ಹಿಡಿದಿವೆ. ಬಿಬಿಎಂಪಿ, ಬಿಡಿಎ ಹಾಗೂ ಸರಕಾರದ ನಾನಾ ಇಲಾಖೆಗಳು ಬಿಎಂಶ್ರೀ ಪ್ರತಿಷ್ಠಾನ, ಉದಯಭಾನು ಕಲಾ ಸಂಘ, ಕಟ್ಟೆ ಬಳಗ ಸೇರಿದಂತೆ ಹಲವು ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಕನ್ನಡ ಶಾಲೆಗಳಿಗೆ ನಿವೇಶನಗಳನ್ನು 5, 10, 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದ ನಿವೇಶನಗಳ ನವೀಕರಣ ಸಂದರ್ಭದಲ್ಲಿ ಯಾವುದೇ ಷರತ್ತು ವಿಧಿಸದೆ ಪ್ರಸಕ್ತ ಮಾರುಕಟ್ಟೆ ಬೆಲೆಯ ಶೇ 2ರಷ್ಟು ಗುತ್ತಿಗೆ ಶುಲ್ಕ ನಿಗದಿಪಡಿಸಿ, ಅ. 21ರಂದು ಪಾಲಿಕೆಯು ನಿರ್ಣಯ ಕೈಗೊಂಡಿದೆ. ಇದಕ್ಕೆ ಅನುಮೋದನೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಇದು ಕನ್ನಡದ ಕಾಯಕದಲ್ಲಿ ತೊಡಗಿಸಿಕೊಂಡಿರುವ ಹಾಗೂ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘ-ಸಂಸ್ಥೆಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ನಗರದಲ್ಲಿ ಸುಮಾರು 250ಕ್ಕೂ ಅಧಿಕ ಕನ್ನಡ ಸಂಘ-ಸಂಸ್ಥೆಗಳು, ಶಾಲೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಗಳಿಗೆ ಬಿಬಿಎಂಪಿಯು ನಿವೇಶನಗಳನ್ನು ಗುತ್ತಿಗೆಗೆ ನೀಡಿದೆ. ಈ ಯಾವುದೇ ಸಂಸ್ಥೆಗಳು ಲಾಭದ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಆದಾಗ್ಯೂ, ಸ್ವತ್ತಿನ ಮಾರುಕಟ್ಟೆ ಮೌಲ್ಯದ ಶೇ 2ರಷ್ಟು ಗುತ್ತಿಗೆ ಮೊತ್ತವನ್ನು ನಿಗದಿಪಡಿಸಲು ಮುಂದಾಗಿರುವ ಪಾಲಿಕೆಯ ನಡೆಯು ಅಚ್ಚರಿ ಮೂಡಿಸಿದೆ. ಕನ್ನಡ ಸಂಘ-ಸಂಸ್ಥೆಗಳು, ಕನ್ನಡ ಶಾಲೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಗಳಿಗೆ ನೀಡಿರುವ ನಿವೇಶನಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡು, ನವೀಕರಣಕ್ಕೆ ಬಂದಾಗ ಯಾವುದೇ ಪರಭಾರೆ ಮಾಡದಂತೆ ಷರತ್ತು ವಿಧಿಸಿ, ಅದೇ ಸಂಸ್ಥೆಗಳಿಗೆ ಮಾರ್ಗಸೂಚಿ ದರದ ವಾರ್ಷಿಕ ಶೇ 10ರಷ್ಟು ಶುಲ್ಕ ವಿಧಿಸಿ ನವೀಕರಣ ಮಾಡಿಕೊಡಲು ಬಿಬಿಎಂಪಿ ಕೌನ್ಸಿಲ್‌ ಸಭೆಯು 2020ರ ಆ. 18ರಂದು ನಿರ್ಣಯ ಕೈಗೊಂಡಿತು. ಇದಕ್ಕೆ ಮಾಜಿ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಸೇರಿದಂತೆ ಹಲವು ಕನ್ನಡ ಪರ ಸಂಘ-ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕನ್ನಡ ಸಂಘ-ಸಂಸ್ಥೆಗಳು, ಶಾಲೆಗಳಿಗೆ ಗುತ್ತಿಗೆಗೆ ನೀಡಿರುವ ನಿವೇಶನಗಳಿಗೆ ಪ್ರಸಕ್ತ ಗುತ್ತಿಗೆ ದರಕ್ಕಿಂತ ಶೇ 10ರಷ್ಟು ಹೆಚ್ಚಿಸಿ, ನವೀಕರಿಸಬೇಕೆಂದು ಮಾಜಿ ಮೇಯರ್‌ಗಳಾದ ಬಿ.ಎಸ್‌.ಸತ್ಯನಾರಾಯಣ, ಎಸ್‌.ಕೆ.ನಟರಾಜ್‌, ಉಪಮೇಯರ್‌ ಎಸ್‌.ಹರೀಶ್‌ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಗುತ್ತಿಗೆ ದರವನ್ನು ಶೇ 10ರಷ್ಟು ಹೆಚ್ಚಿಸಿ ನವೀಕರಿಸುವ ನಿರ್ಣಯಕ್ಕೆ ಅನುಮೋದನೆ ನೀಡುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನ. 23ರಂದು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು, ಗುತ್ತಿಗೆ ನಿವೇಶನಗಳ ಶುಲ್ಕವನ್ನು ಶೇ 10ರಷ್ಟು ಹೆಚ್ಚಳ ಮಾಡಿ ನವೀಕರಿಸಿಕೊಡುವುದಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು ಪ್ರಸ್ತಾವನೆ ಸಲ್ಲಿಸುವಂತೆ ನ. 30ರಂದು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ. ಸರಕಾರದ ಆದೇಶದಂತೆಯೇ ಶುಲ್ಕ ನಿಗದಿಪಡಿಸಿ, ಪಾಲಿಕೆಯು ಪ್ರಸ್ತಾವನೆ ಸಲ್ಲಿಸಬೇಕೆಂದು ಕನ್ನಡ ಸಂಸ್ಥೆಗಳು ಪಟ್ಟು ಹಿಡಿದಿವೆ. ''ಕನ್ನಡ ಸಂಘ-ಸಂಸ್ಥೆಗಳು, ಶಾಲೆಗಳು ಲಾಭದ ಉದ್ದೇಶವನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿಲ್ಲ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಗಳು ಬಿಬಿಎಂಪಿ ಕೈಗೊಂಡಿರುವ ನಿರ್ಣಯದಂತೆ ವಾರ್ಷಿಕ ಲಕ್ಷಾಂತರ ರೂ. ಗುತ್ತಿಗೆ ಶುಲ್ಕ ಪಾವತಿಸಲು ಸಾಧ್ಯವೇ ಇಲ್ಲ. ಸ್ವತ್ತುಗಳ ಮಾರುಕಟ್ಟೆ ಮೌಲ್ಯದ ಶೇ 2ರಷ್ಟು ವಾರ್ಷಿಕ ಗುತ್ತಿಗೆ ಶುಲ್ಕ ನಿಗದಿಪಡಿಸಿರುವುದು ಸರಿಯಲ್ಲ. ಪ್ರಸಕ್ತ ಗುತ್ತಿಗೆ ದರಕ್ಕಿಂತ ಶೇ 10ರಷ್ಟು ಹೆಚ್ಚಳ ಮಾಡಿ ಗುತ್ತಿಗೆ ನವೀಕರಣ ಮಾಡಬೇಕು,''. ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌