ಬೇಡಿಕೆ ಈಡೇರದ ಹೊರತು ಪ್ರತಿಭಟನೆ ನಿಲ್ಲಿಸಲ್ಲ -ಕೇಂದ್ರಕ್ಕೆ ರೈತರಿಂದ ಸ್ಪಷ್ಟ ಎಚ್ಚರಿಕೆ

ಕಳೆದ ವರ್ಷ ದಿಲ್ಲಿ ಗಡಿಗಳಲ್ಲಿ ಆರಂಭವಾದ ರೈತರ ಪ್ರತಿಭಟನೆಯು ಶುಕ್ರವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಸೇರಿದ ಸಾವಿರಾರು ರೈತರು, ಕೇಂದ್ರ ಸರಕಾರ ಕೃಷಿ ಕಾಯಿದೆ ರದ್ದುಗೊಳಿಸುವ ಜತೆಗೆ ಬೇರೆ ಬೇಡಿಕೆಗಳನ್ನೂ ಈಡೇರಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರದ ಹೊರತು ಪ್ರತಿಭಟನೆ ನಿಲ್ಲಿಸಲ್ಲ -ಕೇಂದ್ರಕ್ಕೆ ರೈತರಿಂದ ಸ್ಪಷ್ಟ ಎಚ್ಚರಿಕೆ
Linkup
ಹೊಸದಿಲ್ಲಿ: ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ವರ್ಷ ದಿಲ್ಲಿ ಗಡಿಗಳಲ್ಲಿ ಆರಂಭವಾದ ಪ್ರತಿಭಟನೆಯು ಶುಕ್ರವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಸಾವಿರಾರು ಸೇರಿದ್ದು, "ಕೇಂದ್ರ ಸರಕಾರ ರದ್ದುಗೊಳಿಸುವ ಜತೆಗೆ ಬೇರೆ ಬೇಡಿಕೆಗಳನ್ನೂ ಈಡೇರಿಸಬೇಕು. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ," ಎಂದು ಘೋಷಿಸಿದ್ದಾರೆ. ದಿಲ್ಲಿಯ ಸಿಂಘು, ಟಿಕ್ರಿ, ಘಾಜಿಪುರ, ಘಾಜಿಯಾಬಾದ್‌ ಗಡಿಗಳಲ್ಲಿ ರೈತರು ಜಮಾಯಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗ್ಗೆಯಿಂದಲೇ ಗಡಿಗಳಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದರು. "ಪ್ರತಿಭಟನೆಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ)ದಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ನ.29ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕೇಂದ್ರ ಸರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕಾನೂನುಬದ್ಧ ಎಂಬುದಾಗಿ ಘೋಷಿಸಬೇಕು," ಎಂದು ಅಖಿಲ ಭಾರತ ಕಿಸಾನ್‌ ಸಭಾ ಅಧ್ಯಕ್ಷ ಅಶೋಕ್‌ ಧಾವಳೆ ಆಗ್ರಹಿಸಿದರು. "ಲಖೀಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್‌ ಮಿಶ್ರಾ ಕೂಡಲೇ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಕೊಲೆ ಹಾಗೂ ಪಿತೂರಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಸರಕಾರ ಪರಿಹಾರ ಘೋಷಿಸಬೇಕು. ಸಂವಿಧಾನವು ನಮಗೆ ಪ್ರತಿಭಟನೆ ಹಕ್ಕು ನೀಡಿದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಯುವುದು ಶತಸಿದ್ಧ," ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಬಹದ್ದೂರ್‌ಗಢದಲ್ಲಿ ಸಹ ಪ್ರತಿಭಟನೆ ಆರಂಭಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ'ಕಿಸಾನ್‌ ಮಹಾಪಂಚಾಯತ್‌' ನಡೆಸಲಾಯಿತು. ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಾಯಿದೆ ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಸಂಸತ್ತಿನಲ್ಲಿ ಇದರ ಕುರಿತು ವಿಧೇಯಕ ಸಹ ಮಂಡಿಸಲಾಗುತ್ತದೆ. ರೈತರ ಹೋರಾಟಕ್ಕೆ ಕೇಜ್ರಿವಾಲ್‌ ಮೆಚ್ಚುಗೆ ಒಂದು ವರ್ಷದಿಂದ ರೈತರು ದೇಶಾದ್ಯಂತ ನಡೆಸಿದ ಪ್ರತಿಭಟನೆ ಕುರಿತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ರೈತ ಚಳವಳಿಗೆ ಒಂದು ವರ್ಷ ತುಂಬಿರುವುದು ಐತಿಹಾಸಿಕವಾಗಿದೆ. ತಾಳ್ಮೆಯಿಂದ ಹಕ್ಕುಗಳಿಗೆ ಹೋರಾಟ ಮಾಡಿದರೆ ಏನಾಗುತ್ತದೆ ಎಂಬ ಪಾಠವನ್ನು ರೈತರು ನಮಗೆಲ್ಲ ಕಲಿಸಿದ್ದಾರೆ. ಅವರ ಧೈರ್ಯ, ಸ್ಫೂರ್ತಿ ಹಾಗೂ ತ್ಯಾಗಕ್ಕೆ ನನ್ನ ನಮನಗಳು," ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.