![](https://vijaykarnataka.com/photo/85167195/photo-85167195.jpg)
ಹೊಸದಿಲ್ಲಿ: ಕೊರೊನಾ ನಿರೋಧಕ ಲಸಿಕೆ ಪಡೆದವರು ಸರಕಾರದಿಂದ ನೀಡಲಾಗುವ ಪ್ರಮಾಣಪತ್ರವನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಪಡೆಯಬಹುದಾಗಿದೆ. ಇಂಥ ಹೊಸ ಸೌಲಭ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯ ಆರಂಭಿಸಿದೆ.
ಕೊರೊನಾ ಸಹಾಯವಾಣಿ '90131 51515' ಸಂಖ್ಯೆಯನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡು, ಮೂಲಕ ಈ ಸಹಾಯವಾಣಿಗೆ 'ಕೋವಿಡ್ ಸರ್ಟಿಫಿಕೇಟ್' ಎಂದು ಸಂದೇಶ ಕಳುಹಿಸಬೇಕು. ಆಗ ಮೊಬೈಲ್‌ಗೆ ಸ್ವೀಕಾರವಾಗುವ 'ಒಟಿಪಿ' ಸಂಖ್ಯೆಯನ್ನು ನಮೂದಿಸಿದಲ್ಲಿ, ಕೇವಲ 30 ಸೆಕೆಂಡ್‌ಗಳಲ್ಲಿಯೇ ಪ್ರಮಾಣಪತ್ರ ಸಿಗಲಿದೆ ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಸಹ ಟ್ವೀಟ್ ಮಾಡಿದ್ದಾರೆ.
ಕೊವ್ಯಾಕ್ಸಿನ್, ಕೊವಿಶೀಲ್ಡ್ ಮಿಶ್ರಣ ಉತ್ತಮ:ಸದ್ಯ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿರುವ ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್‌ನ ಕೊವ್ಯಾಕ್ಸಿನ್ ಲಸಿಕೆಗಳನ್ನು ಮಿಶ್ರಣ ಮಾಡಿ ಬಳಸುವುದು ಹೆಚ್ಚು ಪರಿಣಾಮಕಾರಿ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. 18 ಜನರ ಮೇಲೆ ನಡೆಸಲಾದ ಈ ಮಿಶ್ರಿತ ಲಸಿಕೆಯ ಅಧ್ಯಯನ ಯಶಸ್ವಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ದೇಹದಲ್ಲಿ ಕೊರೊನ ರೂಪಾಂತರಿಗಳ ವಿರುದ್ಧ ಲಸಿಕೆಗಳ ಮಿಶ್ರಣ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಕೆಲವರ ದೇಹದಲ್ಲಿ ಪ್ರತಿಕಾಯಗಳು ದೀರ್ಘಾವಧಿವರೆಗೆ ಉಳಿದಿವೆ ಎಂದು ಹಿರಿಯ ವೈರಾಣು ವಿಜ್ಞಾನಿ ಡಾ. ಸಿ. ಲಹಾರಿಯಾ ಹೇಳಿದ್ದಾರೆ.
ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ: ದೀರ್ಘಕಾಲದಿಂದ ಶಾಲೆಗೆ ಹೋಗದೇ ಇರುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಮಾನಸಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಸಂಸದೀಯ ಸಮಿತಿಯೊಂದು ಅಭಿಪ್ರಾಯಪಟ್ಟಿದೆ. ಒಂದೂವರೆ ವರ್ಷದಿಂದ ಶಾಲೆಗೆ ಹೋಗದ ಕಾರಣ ಮಕ್ಕಳಲ್ಲಿ ಗಣಿತ, ವಿಜ್ಞಾನ ಮತ್ತು ಭಾಷಾ ಕಲಿಕೆ ಸಾಮರ್ಥ್ಯ ಕುಂದಿದೆ. ದಿನವಿಡೀ ಮನೆಯಲ್ಲಿಯೇ ಇರುವುದರಿಂದ ಮಕ್ಕಳು ಮತ್ತು ಪಾಲಕರ ನಡುವೆ ಸಂಘರ್ಷಗಳೂ ನಡೆಯುತ್ತಿವೆ. ಮಕ್ಕಳು ಪಾಲಕರ ಮಾತು ಕೇಳುತ್ತಿಲ್ಲ. ಇದು ಕಡೆಗಣಿಸುವ ಸಂಗತಿ ಅಲ್ಲ ಎಂದು ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡೆ ಕುರಿತ ಸಂಸದೀಯ ಸಮಿತಿ ತಿಳಿಸಿದೆ.