ಜಗತ್ತಿಗೆ 'ಬೋಟ್ಸ್‌ವಾನಾ' ಕೊರೊನಾ ರೂಪಾಂತರಿ ಆತಂಕ; ಯಾವುದೇ ಲಸಿಕೆ, ಮಾತ್ರೆಗೆ ಮಣಿಯುತ್ತಿಲ್ಲ ವೈರಾಣು

ವಿಶ್ವದೆಲ್ಲೆಡೆ ಕೋವಿಡ್‌-19 ವೈರಾಣುವಿನ ರೂಪಾಂತರಿಯು ತೀವ್ರವಾಗಿ ವ್ಯಾಪಿಸುವ ಆತಂಕ ನಿರ್ಮಾಣವಾಗಿದ್ದು, ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ 'ಬಿ.1.1.529' ರೂಪಾಂತರಿಯು ಈಗ ಇಸ್ರೇಲ್‌ ಮತ್ತು ಹಾಂಕಾಂಗ್‌ಗೂ ವ್ಯಾಪಿಸಿರುವುದು ದೃಢಪಟ್ಟಿದೆ.

ಜಗತ್ತಿಗೆ 'ಬೋಟ್ಸ್‌ವಾನಾ' ಕೊರೊನಾ ರೂಪಾಂತರಿ ಆತಂಕ; ಯಾವುದೇ ಲಸಿಕೆ, ಮಾತ್ರೆಗೆ ಮಣಿಯುತ್ತಿಲ್ಲ ವೈರಾಣು
Linkup
ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕದ ಮೂರನೇ ಅಲೆಯು ಹೆಚ್ಚು ಅಪಾಯಕಾರಿ ಆಗಿರುವುದಿಲ್ಲ ಎಂದು ತಜ್ಞ ವೈದ್ಯರು ಮತ್ತು ವಿಜ್ಞಾನಿಗಳು ನಿಟ್ಟುಸಿರುಬಿಡುತ್ತಿದ್ದ ಸಂದರ್ಭದಲ್ಲಿಯೇ ಕೋವಿಡ್‌-19 ವೈರಾಣುವಿನ ರೂಪಾಂತರಿಯು ತೀವ್ರವಾಗಿ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ 'ಬಿ.1.1.529' ರೂಪಾಂತರಿಯು ಈಗ ಇಸ್ರೇಲ್‌ ಮತ್ತು ಹಾಂಕಾಂಗ್‌ಗೂ ವ್ಯಾಪಿಸಿರುವುದು ದೃಢಪಟ್ಟಿದೆ. ಅತ್ಯಂತ ತ್ವರಿತವಾಗಿ ಮಾರ್ಪಾಟು ಹೊಂದುವ ರೂಪಾಂತರಿಯು ಕೊರೊನಾ ನಿರೋಧಕ ಲಸಿಕೆ ಹಾಗೂ ಇತರ ಸೋಂಕು ನಿವಾರಕ ಔಷಧಗಳಿಗೆ ಬಗ್ಗುತ್ತಿಲ್ಲ. ತನ್ನ ಪ್ರಸರಣವನ್ನು ವೇಗವಾಗಿಸಿಕೊಳ್ಳುತ್ತಲೇ ಶೀಘ್ರವೇ ಭಾರತ ಸೇರಿದಂತೆ ವಿಶ್ವಾದ್ಯಂತ ವ್ಯಾಪಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಆತಂಕ ಹೊರಹಾಕಿದ್ದಾರೆ. 'ಬೊಟ್ಸ್‌ವಾನಾ' ಪ್ರಸರಣ ಭಯದಿಂದಾಗಿ ಬ್ರಿಟನ್‌ ಸರಕಾರ, ಐರೋಪ್ಯ ಒಕ್ಕೂಟದ ದೇಶಗಳು ದಕ್ಷಿಣ ಆಫ್ರಿಕಾಗೆ ವಿಮಾನಯಾನವನ್ನು ಪೂರ್ಣವಾಗಿ ನಿರ್ಬಂಧಿಸಿದೆ. ಸರಕುಗಳ ರಫ್ತು- ಆಮದು ಕೂಡ ಮಾಡುವಂತಿಲ್ಲ. ದಕ್ಷಿಣ ಆಫ್ರಿಕಾದಲ್ಲಿ 'ಬೋಟ್ಸ್‌ವಾನಾ' ಸೋಂಕು ಇಡೀ ದೇಶವನ್ನು ವ್ಯಾಪಿಸಿದೆ. ಕೆಲ ತಿಂಗಳ ಮುನ್ನ ವಿಶ್ವಾದ್ಯಂತ ವ್ಯಾಪಿಸಿದ್ದ 'ಡೆಲ್ಟಾ' ರೂಪಾಂತರಿಯು ಆತಂಕ ಮೂಡಿಸಿತ್ತು. ಆದರೆ ಭಾರತದಲ್ಲಿ ಇದರ ಪ್ರಸರಣ ಕಡಿಮೆಯಾಗಿ, ಮೂರನೇ ಅಲೆಯ ಭೀತಿಯು ದೂರವಾಗಿತ್ತು. "ಮುಂದಿನ ಕೆಲವೇ ವಾರಗಳಲ್ಲಿವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚುತ್ತಾ ಹೋಗಲಿದೆ. ಜ್ವರ, ಶೀತ, ಉಸಿರಾಟ ಸಮಸ್ಯೆಗಳಿಂದ ಹಲವು ಜನರು ಆಸ್ಪತ್ರೆಗಳಿಗೆ ದಾಖಲಾಗುವುದು ಹೆಚ್ಚಲಿದೆ. ಲಸಿಕೆಯ ಅಂಕುಶಕ್ಕೆ ಸಿಗದ ರೀತಿಯಲ್ಲಿ ಒಟ್ಟು 32 ಬಾರಿ ತನ್ನಲ್ಲಿನ ಪ್ರೊಟೀನ್‌ ಅಂಶವನ್ನು ಬೊಟ್ಸ್‌ವಾನಾ ವೈರಾಣುವು ಮಾರ್ಪಡಿಸಿಕೊಂಡಿದೆ. ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಹೊಸ ರೂಪಾಂತರಿ ಪತ್ತೆ ಸಾಧ್ಯವಾಗುತ್ತಿರುವುದು ಮಾತ್ರವೇ ಸಮಾಧಾನಕರ ಸಂಗತಿ," ಎಂದು ದಕ್ಷಿಣ ಆಫ್ರಿಕಾದ ಜಿನೋಮ್‌ ನಿಗಾ ಜಾಲದ ಸದಸ್ಯ ಹಾಗೂ ಹಿರಿಯ ವಿಜ್ಞಾನಿ ತುಲಿಯೊ ದೀ ಒಲಿವಿರಾ ಹೇಳಿದ್ದಾರೆ. ಆಲ್ಫಾ, ಬಿಟಾ, ಡೆಲ್ಟಾಗಿಂತ ಬಲಶಾಲಿ2020ರಲ್ಲಿ ಕೊರೊನಾ ಆರ್ಭಟ ವಿಶ್ವಾದ್ಯಂತ ಆರಂಭವಾದಾಗಿನಿಂದಲೂ ವಿವಿಧ ರಾಷ್ಟ್ರಗಳಲ್ಲಿ ಪ್ರಮುಖ ಅಲೆಗಳಿಗೆ ಕಾರಣವಾಗಿ ಸಾವಿರಾರು ಜನರನ್ನು ಬಲಿಪಡೆದಿರುವ ರೂಪಾಂತರಿಗಳಾದ ಆಲ್ಪಾ, ಬಿಟಾ, ಎಂಯು ಮತ್ತು ಡೆಲ್ಟಾಗಿಂತಲೂ 'ಬೋಟ್ಸ್‌ವಾನಾ' ಶಕ್ತಿಶಾಲಿಯಂತೆ ಕಂಡುಬರುತ್ತಿದೆ. ಕೆಲವೇ ವಾರಗಳಲ್ಲಿ ಮೂರು ರಾಷ್ಟ್ರಗಳಿಗೆ ಈ ರೂಪಾಂತರಿ ಹಬ್ಬಿದೆ. ಅನೇಕರು ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೂ, ಸೋಂಕಿನಿಂದ ತೀವ್ರ ಅಸ್ವಸ್ಥರಾಗುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಿತ್ಯ 2500 ಜನರಿಗೆ ಹೊಸದಾಗಿ ಬೋಟ್ಸ್‌ವಾನಾ ಕೊರೊನಾ ಸೋಂಕು ತಗುಲುತ್ತಿದ್ದು, ಪ್ರಮುಖವಾಗಿ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಅತಿಹೆಚ್ಚಿನ ಸಂಖ್ಯೆಯನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತಜ್ಞರು ಏನಂತಾರೆ? ಪ್ರೊಟೀನ್‌ ಅಂಶಗಳನ್ನು ಅತ್ಯಂತ ಹೆಚ್ಚು ಬಾರಿ ಮಾರ್ಪಡಿಸಿಕೊಂಡಿರುವ ಪರಿಣಾಮ ಹೊಸ ರೂಪಾಂತರಿ ಕೊರೊನಾ ವೈರಾಣುವು ರೋಗ ನಿರೋಧಕತೆಗೆ ಸುಲಭವಾಗಿ ಮೋಸಗೊಳಿಸಲಿದೆ. ದೇಹವು ಪರಿಣಾಮಕಾರಿಯಾಗಿ ಹೋರಾಟ ನಡೆಸುವ ಶಕ್ತಿ ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಅತಿವೇಗವಾಗಿ ಪ್ರಸರಣ ಕಂಡು, ಕಡಿಮೆ ಸಮಯದಲ್ಲಿ ಹೆಚ್ಚು ಜನರು ಸೋಂಕಿನಿಂದ ಅಸ್ವಸ್ಥರಾಗಲಿದ್ದಾರೆ. ಆಫ್ರಿಕಾದಲ್ಲಿ ಇದೇ ಆಗುತ್ತಿದೆ ಎನ್ನುತ್ತಾರೆ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಕ್ಲಿನಿಕಲ್‌ ಮೈಕ್ರೊಬಯಾಲಜಿ ಪ್ರಾಧ್ಯಾಪಕ ರವೀಂದ್ರ ಗುಪ್ತಾ. ವೀಸಾ ನಿರ್ಬಂಧ ಸಡಿಲಿಸಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮುಕ್ತಗೊಳಿಸಲು ಮುಂದಾಗಿರುವ ವೇಳೆಯಲ್ಲೇ ಹೊಸ ರೂಪಾಂತರಿ ಬಗ್ಗೆ ಎಚ್ಚರಿಕೆ ಸಿಕ್ಕಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 'ಬೊಟ್ಸ್‌ವಾನಾ' ನಿಯಂತ್ರಣ ಬಗ್ಗೆ ಗಂಭೀರ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಿದ್ದೇವೆ. ಭಾರತದಲ್ಲಿ ಈ ರೂಪಾಂತರಿ ಪತ್ತೆ ಆಗಿಲ್ಲ. ಆದರೂ, ರಾಜ್ಯಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮಾಹಿತಿ ನೀಡಿದ್ದಾರೆ. ತಪಾಸಣೆಯಲ್ಲಿ ಗುರುತು ಹಿಡಿಯಲಾಗದ ಅಥವಾ ಇನ್ನೂ ಕೂಡ ಗಂಭೀರ ಸ್ಥಿತಿಗೆ ತಲುಪದ, ಮಾರಣಾಂತಿಕ ಕಾಯಿಲೆಯು ಇರುವವರಿಗೆ ಹೊಸ ರೂಪಾಂತರಿಯು ಮಾರಣಾಂತಿಕವಾಗಲಿದೆ. ಉದಾಹರಣೆಗೆ ಏಡ್ಸ್‌ ಸೋಂಕು ತಗುಲಿರುವುದು ಗಮನಕ್ಕೆ ಬರದವರಿಗೆ ಬೊಟ್ಸ್‌ವಾನಾ ಸೋಂಕು ತಗುಲಿದಲ್ಲಿ ಅನಾರೋಗ್ಯ ಮಿತಿಮೀರಲಿದೆ. ಡೆಲ್ಟಾ ರೂಪಾಂತರಿಯನ್ನು ಇದು ಹಿಮ್ಮೆಟ್ಟಿಸಲಿದೆ ಎಂದು ಲಂಡನ್‌ ವಿಶ್ವವಿದ್ಯಾಲಯದ ಜೀನ್ಸ್‌ ಅಧ್ಯಯನ ವಿಜ್ಞಾನಿ ಪ್ರೊ. ಫ್ರಾಂಕೊಯಿಸ್‌ ಬಲ್ಲೌಕ್ಸ್‌ ತಿಳಿಸಿದ್ದಾರೆ. ತುರ್ತು ಸಭೆ ಕರೆದ ಡಬ್ಲೂಎಚ್‌ಒ ಹೊಸ ಕೊರೊನಾ ರೂಪಾಂತರಿಯು ಆರ್ಭಟ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಮುಖ್ಯಸ್ಥ ಟೆಡ್ರೊಸ್‌ ಅಧಾನೊಮ್‌ ಅವರು ತುರ್ತು ಸಭೆಯನ್ನು ಆಯೋಜಿಸಿದ್ದಾರೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್‌, ಇಸ್ರೇಲ್‌ನಿಂದ ಹಿರಿಯ ವಿಜ್ಞಾನಿಗಳು ಹಾಗೂ ತಜ್ಞವೈದ್ಯರಿಂದ ಬೊಟ್ಸ್‌ವಾನಾ ಪ್ರಸರಣದ ಬಗ್ಗೆ ವರದಿಯನ್ನು ಕೂಡ ಡಬ್ಲೂಎಚ್‌ಒ ಸಂಗ್ರಹಿಸಿದೆ. ಇದನ್ನು ಆಧರಿಸಿ, ನಿಯಂತ್ರಣಕ್ಕೆ ಅಗತ್ಯ ರೂಪರೇಷೆ ರಚಿಸಲು ಸಂಸ್ಥೆಯ ವಿಜ್ಞಾನಿಗಳೊಂದಿಗೆ ಟೆಡ್ರೊಸ್‌ ಮಹತ್ವದ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಯನ್ನು ವಿಶ್ವಸಂಸ್ಥೆಯು ಎಲ್ಲರಾಷ್ಟ್ರಗಳಿಗೆ ರವಾನಿಸಲಿದೆ.