ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮೊದಲ ದಿನ ಸಕ್ಸಸ್‌; ರೋಡ್‌ ಸುತ್ತಿದವರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮೊದಲ ದಿನ ಬಹುತೇಕ ಸ್ತಬ್ಧಗೊಂಡಿದೆ. ಕರ್ಫ್ಯೂ ಉಲ್ಲಂಘಿಸಿ ಹೊರಗೆ ಬಂದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ಕೇಸ್‌ ದಾಖಲಿಸಿದರು. ಅನಗತ್ಯ ಹೊರಗೆ ಬಂದ ವಾಹನ ಸವಾರರನ್ನು ಪೊಲೀಸರು ರಸ್ತೆಯಲ್ಲೇ ಬಸ್ಕಿ ಹೊಡೆಸಿ ಬುದ್ಧಿ ಹೇಳಿ ಕಳುಹಿಸಿದರು.

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಮೊದಲ ದಿನ ಸಕ್ಸಸ್‌; ರೋಡ್‌ ಸುತ್ತಿದವರಿಗೆ ಬಸ್ಕಿ ಹೊಡೆಸಿದ ಪೊಲೀಸರು!
Linkup
ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕೆ 14 ದಿನಗಳ ಲಾಕ್‌ಡೌನ್‌ನ ಮೊದಲ ದಿನವಾದ ಬುಧವಾರ ನಗರದಲ್ಲಿ ವಾಣಿಜ್ಯ ವಹಿವಾಟು, ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಬೆಳಗ್ಗೆ ನಾಲ್ಕು ತಾಸು ಸಡಿಲಿಕೆ ವೇಳೆ ಅಗತ್ಯ ವಸ್ತುಗಳನ್ನು ಖರೀದಿಸಿದ ನಾಗರಿಕರು ನಂತರ ಮನೆ ಸೇರಿದರು. ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ನಗರದ ಎಲ್ಲ ಫ್ಲೈಓವರ್‌ಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದರು. ಮುಖ್ಯರಸ್ತೆಗಳಲ್ಲಿ ಒಂದು ಬದಿ ಮಾತ್ರ ವಾಹನ ಸಂಚಾರಕ್ಕೆ ಬಿಡಲಾಗಿತ್ತು. ಕೆಲವು ರಸ್ತೆಗಳಲ್ಲಿ ಎರಡೂ ಕಡೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಹನ ಸವಾರರು, ಚಾಲಕರಿಂದ ಹೊರಗೆ ಬರಲು ಕಾರಣ ಕೇಳಿದರು. ಅಗತ್ಯ ಸೇವೆಗಳಲ್ಲಿರುವವರು ಮತ್ತು ವಿನಾಯಿತಿ ಇರುವವರಿಗೆ ಮಾತ್ರ ಬಿಡಲಾಯಿತು. ರಸ್ತೆಯಲ್ಲೇ ಬಸ್ಕಿ ಕರ್ಫ್ಯೂ ಉಲ್ಲಂಘಿಸಿ ಹೊರಗೆ ಬಂದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ಕೇಸ್‌ ದಾಖಲಿಸಿದರು. ಅನಗತ್ಯ ಹೊರಗೆ ಬಂದ ವಾಹನ ಸವಾರರನ್ನು ಪೊಲೀಸರು ರಸ್ತೆಯಲ್ಲೇ ಬಸ್ಕಿ ಹೊಡೆಸಿ ಬುದ್ಧಿ ಹೇಳಿ ಕಳುಹಿಸಿದರು. ಮುನ್ನಾ ದಿನವಾದ ಮಂಗಳವಾರ ಬಸ್‌ ಮತ್ತು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಂಪೇಗೌಡ ಬಸ್‌ ನಿಲ್ದಾಣ ಖಾಲಿ ಹೊಡೆಯುತ್ತಿತ್ತು. ರೈಲುಗಳು ಸಂಚರಿಸುತ್ತಿರುವ ಕಾರಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಎಂದಿನಂತೆ ಇದ್ದರು. ಹೊರ ರಾಜ್ಯ, ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಯೇ ಇತ್ತು. 14 ದಿನಗಳ ಲಾಕ್‌ಡೌನ್‌ ಕಾರಣ ಕೂಲಿ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದರು. 14 ದಿನಗಳ ಬಳಿಕ ಸಹಜ ಸ್ಥಿತಿಗೆ ಬರುವುದು ಖಚಿತವಿಲ್ಲದ ಕಾರಣ ಕಾರ್ಮಿಕರು ಊರು ತೊರೆಯುತ್ತಿರುವ ದೃಶ್ಯ ಕಂಡು ಬಂತು.