ಕುಗ್ಗಬೇಡಿ.. ಭರವಸೆ ಇರಲಿ..! ಸೋಂಕಿತರಿಗೆ ಸಾಂತ್ವನ ಹೇಳ್ತಿದ್ದಾರೆ ಕೊರೊನಾ ನೋವುಂಡ ಸೀಮಾ..

ಸೋಂಕಿತರಾದವರು ತಮ್ಮ ಪ್ರೀತಿಪಾತ್ರರ ಜೊತೆ ವಿಡಿಯೋ ಕಾಲ್, ಮೆಸೇಜ್ ಮಾಡುತ್ತಾ ಐಸೋಲೇಷನ್‌ನಲ್ಲಿ ನೆಮ್ಮದಿಯಿಂದ ಇದ್ದರೆ, ಕುಟುಂಬದಿಂದ ಭಾವನಾತ್ಮಕ ನೆರವು ಪಡೆದರೆ ಎಲ್ಲವೂ ಸುಗಮವಾಗುತ್ತದೆ.

ಕುಗ್ಗಬೇಡಿ.. ಭರವಸೆ ಇರಲಿ..! ಸೋಂಕಿತರಿಗೆ ಸಾಂತ್ವನ ಹೇಳ್ತಿದ್ದಾರೆ ಕೊರೊನಾ ನೋವುಂಡ ಸೀಮಾ..
Linkup
: ಇದೊಂದು ಸ್ಫೂರ್ತಿದಾಯಕ ಕಥೆ..! ಭರವಸೆಗಳೇ ಕರಗಿ ಹೋಗುತ್ತಿರುವ ಅಟ್ಟಹಾಸದ ಕಾಲದಲ್ಲಿ ಹೇಳುವ ಸ್ಟೋರಿ ಇದು..! ಸೀಮಾ ವಿಕಾಸ್ ಗಡಿಯಾ.. ಇವರು ತಮ್ಮ ಸ್ಫೂರ್ತಿದಾಯಕ ಮಾತುಗಳಿಂದಲೇ ಜನಪ್ರಿಯ.. ಮಾನಸಿಕವಾಗಿ ಕುಗ್ಗಿರುವ ಜನರಿಗೆ ತಮ್ಮ ಉತ್ತೇಜನಕಾರಿ ಮಾತುಗಳಿಂದಲೇ ಭರವಸೆ ತುಂಬುವ ಸೀಮಾ, ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. 11 ದಿನಗಳ ಕಾಲ ಜ್ವರ, ಮೈ-ಕೈ ನೋವು ಸೇರಿದಂತೆ ಹಲವು ರೋಗ ಲಕ್ಷಣಗಳನ್ನು ಎದುರಿಸಿದ್ದರು. ಏಪ್ರಿಲ್ 18ಕ್ಕೆ ಕೊರೊನಾ ಮುಕ್ತರಾದ ಸೀಮಾ, ಇದೀಗ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ. ಬೆಂಗಳೂರಿನ ಬಸವನಗುಡಿ ನಿವಾಸಿಯಾಗಿರುವ 39 ವರ್ಷ ವಯಸ್ಸಿನ ಸೀಮಾ, ಕೊರೊನಾ ಸೋಂಕಿತರಾಗಿದ್ದ ವೇಳೆ ತಾವು ಎದುರಿಸಿದ ಸಂಕಷ್ಟ, ಕ್ವಾರಂಟೈನ್ ಅನುಭವವನ್ನು ವಿವರಿಸುವ ಜೊತೆಯಲ್ಲೇ, ಸೋಂಕಿತರಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ರೋಗಿಗಳಿಗೆ ಸ್ಫೂರ್ತಿ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೊರೊನಾ ಸೋಂಕಿತರಾದಾಗ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋದು ಎಷ್ಟು ಮುಖ್ಯ ಎಂಬ ಅರಿವು ಸೀಮಾ ಅವರಿಗೆ ಆಗಿದೆ. ಹೀಗಾಗಿ, ಅವರು ಸುಳ್ಳು ವದಂತಿಗಳನ್ನು ನಂಬದಂತೆ, ಸುಳ್ಳು ಸುದ್ದಿಗಳನ್ನು ನಂಬಿ ಗಾಬರಿಯಾಗದಂತೆ ಜನರಿಗೆ ಮನವಿ ಮಾಡಿಕೊಳ್ತಿದ್ದಾರೆ. ಕೊರೊನಾ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲೂ ಸೀಮಾ ಅವರು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ಕೊರೊನಾ ಮೊದಲ ಅಲೆ ಇದ್ದ ವೇಳೆ ಲಾಕ್‌ಡೌನ್ ಜಾರಿಯಾಗಿತ್ತು. ಈ ವೇಳೆ ಜನರು ಮನೆಯಲ್ಲೇ ಕುಳಿತು ದಾಲ್ಗೊನಾ ಕಾಫಿ ಮಾಡುತ್ತಾ ಕಾಲ ಕಳೆದರು. ಆದ್ರೆ, ಎರಡನೇ ಅಲೆ ತನ್ನ ಗಂಭೀರ ಹಾಗೂ ಭೀಕರ ಸ್ವರೂಪ ತೋರಿಸಿದೆ ಎನ್ನುವ ಸೀಮಾ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ಕಳೆದ ವರ್ಷ ಕೂಡಾ ಸೀಮಾ ಅವರು ‘ಲಾಕ್‌ಡೌನ್ ರಿಕವರಿ’ ಎಂಬ ಸೆಷನ್ ನಡೆಸಿದ್ದರು. ಸೋಂಕಿತರಾದಾಗ ತಾವು ಎದುರಿಸಿದ ಸಂಕಷ್ಟಗಳು, ಐಸೋಲೇಷನ್‌ನಲ್ಲಿ ಇರುವಾಗ ಎದುರಾದ ಸವಾಲುಗಳು, ಇದೀಗ ಕೋವಿಡ್ ಸೋಂಕಿತರು ಬೆಡ್‌ಗಾಗಿ ನಡೆಸುತ್ತಿರುವ ಪರದಾಟ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ವಿಡಿಯೋ ಕೂಡಾ ಮಾಡಿದ್ದಾರೆ. ಸುಳ್ಳು ಮಾಹಿತಿ, ವದಂತಿಗಳನ್ನು ನಂಬಿ ಗಾಬರಿಯಾಗಬೇಡಿ, ಆತಂಕಕ್ಕೆ ಒಳಗಾಗಬೇಡಿ ಎಂದು ಜನರಿಗೆ ಕಿವಿಮಾತು ಹೇಳುತ್ತಿದ್ದಾರೆ. ಧನಾತ್ಮಕ ಮನಸ್ಥಿತಿಯೊಂದಿಗೆ, ಆತ್ಮಸ್ಥೈರ್ಯದಿಂದ ಕೋವಿಡ್ ವಿರುದ್ಧ ಹೋರಾಟ ನಡೆಸಲು ಜನರಲ್ಲಿ ಸ್ಫೂರ್ತಿ ತುಂಬುದ್ದಾರೆ, ಸೀಮಾ. ಇದೇ ವೇಳೆ ಪ್ಲಾಸ್ಮಾ ದಾನ ಮಾಡುವಂತೆಯೂ ಜನರಲ್ಲಿ ಸೀಮಾ ಅವರು ಮನವಿ ಮಾಡುತ್ತಿದ್ಧಾರೆ. ಈ ಕುರಿತಾಗಿ ಇರುವ ಅಪನಂಬಿಕೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸೀಮಾ ಶ್ರಮಿಸುತ್ತಿದ್ದಾರೆ. ಈ ಕುರಿತಾಗಿ ಸೀಮಾ ಅವರು ವಿಡಿಯೋ ಮಾಡಿ ಹರಿಬಿಟ್ಟ ಬಳಿಕ ಪ್ಲಾಸ್ಮಾ ದಾನಕ್ಕೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸುತ್ತಿದ್ದಾರೆ. ಮುಂಬೈ ಮೂಲದ ಪ್ಲಾಸ್ಮಾ ವಾರಿಯರ್ಸ್ ಜೊತೆಗೂ ಈ ಸಂಬಂಧ ಕಾರ್ಯ ನಿರ್ವಹಿಸುತ್ತಿರೋದಾಗಿ ಸೀಮಾ ತಿಳಿಸಿದ್ದಾರೆ. ತಾವು ಕೊರೊನಾ ಸೋಂಕಿತರಾದ ಕುರಿತಾಗಿ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಹಲವು ಸ್ನೇಹಿತರು ಸೀಮಾ ಅವರಿಗೆ ಸಲಹೆ ನೀಡಿದ್ದರಂತೆ. ಆದ್ರೆ, ಇದನ್ನು ತಮ್ಮ ಕರ್ತವ್ಯ ಎಂದು ಭಾವಿಸಿದ ಸೀಮಾ, ತಾವು ಸೋಂಕಿತರಾದಾಗ ಎದುರಿಸಿದ ಸಂಕಷ್ಟಗಳನ್ನು ಜನರ ಮುಂದಿಟ್ಟಿದ್ದಾರೆ. ಶೇ. 80ರಷ್ಟು ಕೋವಿಡ್ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕೇವಲ ಶೇ. 20ರಷ್ಟು ಜನರಿಗೆ ಆಸ್ಪತ್ರೆ ಬೆಡ್ ಬೇಕಾಗಬಹುದು. ಆದ್ರೆ, ನಾವು ಹೇಗೆ ಈ ಸಮಯವನ್ನು ನಿಭಾಯಿಸುತ್ತೇವೆ ಅನ್ನೋದ್ರ ಮೇಲೆ ಎಲ್ಲವೂ ನಿರ್ಧರಿತವಾಗಿದೆ ಎನ್ನುತ್ತಾರೆ, ಸೀಮಾ. ಒತ್ತಡಕ್ಕೆ ಒಳಗಾದಾಗ ನಮ್ಮ ರೋಗ ನಿರೋಧಕ ವ್ಯವಸ್ಥೆ ಕೂಡಾ ಕುಗ್ಗುತ್ತದೆ. ಸೋಂಕಿತರಾದವರು ತಮ್ಮ ಪ್ರೀತಿಪಾತ್ರರ ಜೊತೆ ವಿಡಿಯೋ ಕಾಲ್, ಮೆಸೇಜ್ ಮಾಡುತ್ತಾ ಐಸೋಲೇಷನ್‌ನಲ್ಲಿ ನೆಮ್ಮದಿಯಿಂದ ಇದ್ದರೆ, ಕುಟುಂಬದಿಂದ ಭಾವನಾತ್ಮಕ ನೆರವು ಪಡೆದರೆ ಎಲ್ಲವೂ ಸುಗಮವಾಗುತ್ತದೆ ಎನ್ನುತ್ತಾರೆ, ಸೀಮಾ. ಹಾಗೆಂದ ಮಾತ್ರಕ್ಕೆ ಕೋವಿಡ್ ವಿಚಾರದಲ್ಲಿ ಹಿತಕರ ಅನುಭವಗಳನ್ನೇ ಸೀಮಾ ಅವರು ಕಂಡಿಲ್ಲ. ಮಾನಸಿಕವಾಗಿ ಹಿಂಸೆಯಾಗುವ ಅನುಭವಗಳೂ ಎದುರಾಗಿವೆ. 25 ವರ್ಷದ ಸೋಂಕಿತ ಯುವತಿಯೊಬ್ಬಳಿಗೆ ಪ್ಲಾಸ್ಮಾ ಕೊಡಿಸಲು ಸೀಮಾ ಪ್ರಯತ್ನಿಸುತ್ತಿದ್ದ ವೇಳೆಯಲ್ಲೇ ಆಕೆ ಮೃತಪಟ್ಟಳು. ಇದು ಸೀಮಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತು. ಆದ್ರೆ, ಉತ್ತಮ ನಾಳೆಗಳ ನಂಬಿಕೆಯೊಂದಿಗೆ ನಾವು ಮುನ್ನಡೆಯಬೇಕು, ಯಾವುದೇ ಕಾರಣಕ್ಕೂ ಕುಗ್ಗಬಾರದು ಎನ್ನುತ್ತಾರೆ ಸೀಮಾ.