ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ 'ಫಿಲ್ಮ್‌ಫೇರ್ ಅವಾರ್ಡ್ಸ್- ಸೌಥ್' ಸಮಾರಂಭ

ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್ಸ್- ಸೌಥ್ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ ಕಾರ್ಯಕ್ರಮದ ಆಯೋಜನೆಯ ಹೊಣೆಯನ್ನು ಕಮರ್ ಫಿಲ್ಮ್ ಫ್ಯಾಕ್ಟರಿ ವಹಿಸಿಕೊಂಡಿದ್ದು, ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಪ್ಲ್ಯಾನ್ ಹಾಕಿಕೊಂಡಿದೆ.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ 'ಫಿಲ್ಮ್‌ಫೇರ್ ಅವಾರ್ಡ್ಸ್- ಸೌಥ್' ಸಮಾರಂಭ
Linkup
ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಶ್ರೇಷ್ಠರನ್ನು ಗೌರವಿಸುವ ಅವಾರ್ಡ್ಸ್ ಸೌಥ್ ತನ್ನ 2019-2021ರ ಆವೃತ್ತಿಯೊಂದಿಗೆ ಮತ್ತೆ ಬಂದಿದೆ. ಈ ವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎರಡು ಸಂಜೆಗಳಿಗೆ ವಿಸ್ತರಿಸಿದ್ದು ದುಪ್ಪಟ್ಟು ಉತ್ಸಾಹದ ಭರವಸೆ ತಂದಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಒಂದು ದಿನ 2019 ಮತ್ತು 2020ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ಇರಲಿದೆ. ಮತ್ತೊಂದು ದಿನ 2021ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಫಿಲ್ಮ್‌ಫೇರ್ ಅವಾರ್ಡ್ಸ್ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಕಮರ್ ಫಿಲ್ಮ್ ಫ್ಯಾಕ್ಟರಿ ಸಹಯೋಗದೊಂದಿಗೆ ಈ ಬಾರಿ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲಿದೆ. ದಕ್ಷಿಣ ಭಾರತದ ನಾಲ್ಕೂ ಭಾಷೆಯ ಕಲಾವಿದರು ಬೆಂಗಳೂರಿನಲ್ಲಿ ಈ ಬಾರಿ ಸೇರಿಕೊಳ್ಳಲಿದ್ದಾರೆ. ಆ ಹಿನ್ನೆಲೆಯಲ್ಲಿ ಫಿಲ್ಮ್‌ಫೇರ್‌ ಮತ್ತು ಕಮರ್ ಫಿಲ್ಮ್ ಫ್ಯಾಕ್ಟರಿ ಕಡೆಯಿಂದ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಬಹುಭಾಷಾ ತಾರೆ ಆಗಮಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಪೂಜಾ ಹೆಗ್ಡೆ, 'ಮನರಂಜನೆಯ ಉದ್ಯಮದಲ್ಲಿ ಪ್ರತಿಯೊಬ್ಬರಿಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಗೆಲ್ಲಬೇಕೆಂಬ ಬಯಕೆ ಇರುತ್ತದೆ. ಉತ್ತಮ ಕೆಲಸ ಮಾಡಲು ಇದು ಅಪಾರ ಸ್ಫೂರ್ತಿ ನೀಡುತ್ತದೆ. ಫಿಲ್ಮ್‌ಫೇರ್‌ ಅವಾರ್ಡ್ಸ್ ಸೌಥ್ ನಮಗೆಲ್ಲರಿಗೂ ನಮ್ಮ ಕೆಲಸದಿಂದ ಬಿಡುವು ನೀಡಿ, ಪ್ರೇಕ್ಷಕರಿಗೆ ಅದ್ಭುತ ಪ್ರದರ್ಶನ ನೀಡಲು ಅವಕಾಶ ನೀಡಿರುವುದಕ್ಕೆ ನಾನು ಆಭಾರಿಯಾಗಿರುತ್ತೇನೆ. ನನ್ನ ಕುಟುಂಬ ಶೈಕ್ಷಣಿಕವಾಗಿದೆ. ಆದರೆ, ನಾನು ಮಾತ್ರ ನಟಿಯಾದೆ. ನನಗೆ ನಟಿ ಮಾಧುರಿ ದೀಕ್ಷಿತ್‌ ತುಂಬ ಸ್ಪೂರ್ತಿ ನೀಡಿದ್ದಾರೆ' ಎಂದರು. ಫಿಲ್ಮ್‌ಫೇರ್‌ನ ಸಂಪಾದಕ ಜಿತೇಶ್ ಪಿಳ್ಳೈ ಮಾತನಾಡಿ, 'ಫಿಲ್ಮ್‌ಫೇರ್‌ ಅವಾರ್ಡ್ಸ್ ಸೌಥ್ ಸಂಜೆಯು ವಿಶೇಷವಾಗಿದೆ. ಏಕೆಂದರೆ ಅತ್ಯುತ್ತಮವಾದ ಆಯ್ಕೆಗಳನ್ನು ಗೌರವಿಸಲಾಗುತ್ತದೆ ಹಾಗೂ ಕಾರ್ಯಕ್ರಮದಂದು ಹಲವಾರು ಆಕರ್ಷಕ ಗೀತೆಗಳಿಗೆ ನೃತ್ಯ ಪ್ರದರ್ಶನ ಹೊಂದಿರುತ್ತದೆ. ಇದು ವರ್ಣರಂಜಿತ, ಮನಸೆಳೆಯುವ ಸಂಗೀತ ಮತ್ತು ಅಭಿಮಾನಿಗಳ ಹರ್ಷೋದ್ಗಾರದೊಂದಿಗೆ ನಡೆಯಲಿದೆ. ಅಭಿಮಾನಿಗಳ ಅಚ್ಚುಮೆಚ್ಚಿನ ತಾರೆಯರು ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ವೀಕ್ಷಿಸಬಹುದಾಗಿದೆ' ಎಂದರು. ಕಮರ್ ಫಿಲ್ಮ್ ಫ್ಯಾಕ್ಟರಿಯ ಸಂಸ್ಥಾಪಕ ಕಮರ್ ಮಾತನಾಡಿ, 'ಫಿಲ್ಮ್‌ಫೇರ್‌ ಅವಾರ್ಡ್ಸ್ ಸೌಥ್ ದಕ್ಷಿಣ ಭಾರತದ ಮನರಂಜನೆಯ ವಲಯದಲ್ಲಿ ಅತ್ಯಂತ ಬಹುನಿರೀಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಳೆದ ವರ್ಷ ಇದನ್ನು ನಾವು ತಪ್ಪಿಸಿಕೊಂಡೆವು, ಆದರೆ ಈ ವರ್ಷ ಎರಡು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು 2019ರಿಂದ 2021ರವರೆಗಿನ ಬಿಡುಗಡೆಯಾದ ಪ್ರತಿ ಸಿನಿಮಾಗಳಿಗೂ ಈ ಬಾರಿ ಗೆಲ್ಲುವ ಅವಕಾಶ ನೀಡುತ್ತಿದ್ದೇವೆ. ನಾನು ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದ ಕಾಯುತ್ತಿದ್ದೇನೆ. ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಈ ಕಾರ್ಯಕ್ರಮವನ್ನು ತಂದಿದ್ದೇವೆ. ಹಿಂದೆಂದೂ ಕಾಣದಂತಹ ಅದ್ದೂರಿತನವನ್ನು ಈ ಬಾರಿ ನೀಡಲಿದ್ದೇವೆ. ಮಾರ್ಚ್‌ ಮೊದಲ ವಾರ ಕಾರ್ಯಕ್ರಮ ನಡೆಯಲಿದೆ' ಎಂದು ತಿಳಿಸಿದರು.