ಬೆಂಗಳೂರು: ದೇವರಚಿಕ್ಕನಹಳ್ಳಿಯಲ್ಲಿಬೆಂಕಿ ಅನಾಹುತ ನಡೆದ ಆಶ್ರಿತ್ ಆಸ್ಪೈರ್ ಅಪಾರ್ಟ್‌ಮೆಂಟ್‌ಗೆ ಬೆಸ್ಕಾಂ ಪುನಃ ವಿದ್ಯುತ್ ಸಂಪರ್ಕ ಕೊಟ್ಟಿದ್ದು, ಕೆಲ ನಿವಾಸಿಗಳು ಫ್ಲ್ಯಾಟ್‌ಗೆ ಮರಳಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿಬೆಂಕಿ ಅನಾಹುತದ ಬಳಿಕ ಸುರಕ್ಷತೆ ದೃಷ್ಟಿಯಲ್ಲಿ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರವಾಗುವಂತೆ ನಿವಾಸಿಗಳಿಗೆ ಸೂಚಿಸಲಾಗಿತ್ತು.
ಮುಂಜಾಗರೂಕತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ಬಳಿಕ, ಬುಧವಾರ ರಾತ್ರಿ ವಿದ್ಯುತ್ ಸಂಪರ್ಕ ಪುನಃ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ನಿವಾಸಿಗಳು ವಾಪಸು ಪ್ಲ್ಯಾಟ್‌ಗೆ ಬಂದಿದ್ದಾರೆ. ಇನ್ನು ಕೆಲವರು ಕೆಲ ದಿನ ಬಿಟ್ಟು ವಾಸಕ್ಕೆ ಬರಲು ನಿರ್ಧರಿಸಿದ್ದಾರೆ.
ತನಿಖೆ ಮುಂದುವರಿಕೆ :
ಅಗ್ನಿಶಾಮಕ ದಳದ ತಂಡ ಗುರುವಾರ ಅನಾಹುತ ನಡೆದ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ. ಎಫ್‌ಎಸ್‌ಎಲ್ ತಂಡ ಕೂಡ ನಾನಾ ವಸ್ತುಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಘಟನೆಗೆ ಮೂಲ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಿಂಗಳಾನುಗಟ್ಟಲೆ ಉಪಯೋಗಿಸದ ಫ್ರಿಡ್ಜ್ ಆಥವಾ ದೇವರಿಗೆ ಹಚ್ಚಿದ ದೀಪ ಬೆಂಕಿಯ ಮೂಲವಾಗಿರಬಹುದು ಎಂದು ಶಂಕಿಸಲಾಗಿದೆ. ಮಂಗಳವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾಗ್ಯರೇಖಾ ಹಾಗೂ ಅವರ ತಾಯಿ ಲಕ್ಷ್ಮೇದೇವಿ ಎಂಬವರು ಸಜೀವ ದಹನವಾಗಿದ್ದರು.
ಘಟನೆ ವಿವರ!ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ದೇವರ ಚಿಕ್ಕನಹಳ್ಳಿಯ ಆಶ್ರಿತ್ ಸಮುಚ್ಚಯದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ, ಫ್ಲ್ಯಾಟ್‌ನ ಬಾಲ್ಕನಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ನಿಂದ ಹೊರ ಬರಲಾರದೇ ತಾಯಿ – ಮಗಳು ಸಜೀವವಾಗಿ ದಹನವಾಗಿರುವ ಹೃದಯವಿದ್ರಾವಕ ಘಟನೆ ನಡೆದಿತ್ತು. ಲಕ್ಷ್ಮಿದೇವಿ (82) ಹಾಗೂ ಅವರ ಮಗಳು ಭಾಗ್ಯರೇಖಾ (59) ಮೃತರು. ಮೊನ್ನೆಯಷ್ಟೇ ಈ ಕುಟುಂಬದವರು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದರು. ಈ ಕುಟುಂಬವು ಫ್ಲ್ಯಾಟ್ ನಂಬರ್ 210ರಲ್ಲಿ ವಾಸವಿತ್ತು. ಬಾಲ್ಕನಿಯಲ್ಲಿ ರಕ್ಷಣೆಗಾಗಿ ಕಬ್ಬಿಣದ ಗ್ರಿಲ್ ಅಳವಡಿಸಲಾಗಿತ್ತು. ಸಂಭವಿಸಿದಾಗ, ಗ್ರಿಲ್‌ನಿಂದಾಗಿ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಅವರಿಬ್ಬರು ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾರೆ.
ಅಪಾರ್ಟ್‌ಮೆಂಟ್ ಸಮುಚ್ಚಯದ ಮಹಡಿಯಲ್ಲಿರುವ ಫ್ಲ್ಯಾಟ್‌ನ ಅಡುಗೆ ಮನೆಯಲ್ಲಿ ಸಂಜೆ 4.30ರ ಸುಮಾರಿಗೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ನಿಮಿಷಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಫ್ಲ್ಯಾಟ್ ಆವರಿಸಿ ಧಗ ಧಗ ಉರಿಯಲಾರಂಭಿಸಿತ್ತು. ಅಕ್ಕ–ಪಕ್ಕದ ಫ್ಲ್ಯಾಟ್‌ನವರಿಗೆ ಜೋರಾದ ಸದ್ದು ಕೇಳಿಸಿತ್ತು. ಅವರೆಲ್ಲ ಫ್ಲ್ಯಾಟ್‌ನಿಂದ ಹೊರಗೆ ಬಂದು ನೋಡಿದಾಗ, ಹೊಗೆ ಹೆಚ್ಚಾಗಿತ್ತು. ಗಾಬರಿಗೊಂಡ ಎಲ್ಲರೂ ಹೊರಗೆ ಓಡಿ ಬಂದು ರಸ್ತೆಯಲ್ಲಿ ನಿಂತುಕೊಂಡಿದ್ದರು. ಇನ್ನು ಘಟನೆಗೆ ಏನು ಕಾರಣ ಎಂದು ಇನ್ನು ತಿಳಿದುಬಂದಿಲ್ಲ. ಆರಂಭದಲ್ಲಿ ಸಿಲಿಂಡರ್ ಬ್ಲಾಸ್ಟ್ ಕಾರಣವಿರಬಹುದು ಎನನ್ಲಾಗಿತ್ತು. ಆದರೆ ಸಿಲಿಂಡರ್ ಸ್ಪೋಟಗೊಂಡಿರುವ ಕುರುಹು ಪತ್ತೆಯಾಗಿಲ್ಲ.
ಬೆಂಕಿಗೆ ದೀಪ ಕಾರಣ?
ಅಗ್ನಿ ಅನಾಹುತಕ್ಕೆ ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಬೆಂಕಿ ಹೊತ್ತಿಕೊಂಡು ಮನೆಯ ಒಳಾಂಗಣ ಅಲಂಕಾರಕ್ಕೆ ಬಳಸಿದ್ದ ಪ್ಲೈವುಡ್ ಶೀಟ್‌ಗಳಿಗೆ ತಗುಲಿ ಬಹುಬೇಗನೆ ವ್ಯಾಪಿಸಿದ್ದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯೊಳಗೆ ಬಂದವರೇ ದೇವರಿಗೆ ದೀಪ ಹಚ್ಚಿಟ್ಟು ನಿದ್ದೆ ಮಾಡಿರಬಹುದು. ದೇವರ ದೀಪ ಉರುಳಿದ್ದರಿಂದ ಅಥವಾ ಇತರೆ ವಸ್ತುಗಳಿಗೆ ತಗಲಿ ಪ್ಲೈವುಡ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು. ಬೆಂಕಿ ಆವರಿಸಿಕೊಂಡ ನಂತರ ಎಚ್ಚರವಾಗಿರಬಹುದು. ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ಕೈಮೀರಿರುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಲ್‌ನಲ್ಲಿ ದೇವರ ದೀಪಗಳು ಕಂಡು ಬಂದಿವೆ.