ಮುಂಬಯಿನ 15 ವರ್ಷದ ಬಾಲಕಿ ಮೇಲೆ 30 ರಕ್ಕಸರಿಂದ ಸಾಮೂಹಿಕ ಅತ್ಯಾಚಾರ: 24 ಮಂದಿ ಬಂಧನ

ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕಿ ಮೇಲೆ 30ಕ್ಕೂ ಹೆಚ್ಚಿನ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರವೆಸಗಿರುವ ಕ್ರೂರ ಘಟನೆ ನಡೆದಿದೆ. ಈ ಪೈಕಿ 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 9 ತಿಂಗಳಿನಿಂದ ಬಾಲಕಿಯನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಅತ್ಯಾಚಾರವೆಸಗಲಾಗಿದೆ.

ಮುಂಬಯಿನ 15 ವರ್ಷದ ಬಾಲಕಿ ಮೇಲೆ 30 ರಕ್ಕಸರಿಂದ ಸಾಮೂಹಿಕ ಅತ್ಯಾಚಾರ: 24 ಮಂದಿ ಬಂಧನ
Linkup
ಮುಂಬಯಿ: ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕಿ ಮೇಲೆ 30ಕ್ಕೂ ಹೆಚ್ಚಿನ ದುಷ್ಕರ್ಮಿಗಳಿಂದ ಸಾಮೂಹಿಕ ನಡೆದಿದ್ದು, ಭಾರಿ ಆಘಾತ ಉಂಟು ಮಾಡಿದೆ. ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಬಾಲಕಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿ 24 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳೆದ ಜನವರಿಯಿಂದ ಬಾಲಕಿಯ ದುರಂತ ಯಾತ್ರೆ ಶುರುವಾಯಿತು. ಮೊದಲು ತನ್ನ ಸ್ನೇಹಿತನಿಂದಲೇ ಅತ್ಯಾಚಾರಕ್ಕೀಡಾದ ಬಾಲಕಿ ನೊಂದು ಹೋದಳು. ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಪಾತಕಿ, ಆ ಪುರಾವೆ ಇಟ್ಟುಕೊಂಡೇ ಬಾಲಕಿಯನ್ನು ಬ್ಲ್ಯಾಕ್‌ಮೇಲ್‌ ಮಾಡತೊಡಗಿದ. ಬೇರೆಯವರ ಮುಂದೆ ಬಾಯಿ ಬಿಡದಂತೆ ಬೆದರಿಕೆ ಹಾಕಿ, ಪದೇ ಪದೆ ಅತ್ಯಾಚಾರ ಎಸಗಿದ್ದ. ನಂತರ ಅತ್ಯಾಚಾರದ ವಿಡಿಯೋವನ್ನು ತನ್ನ ಇತರೆ ಸ್ನೇಹಿತರ ಜತೆ ಹಂಚಿಕೊಂಡಿದ್ದ. ಆ ವಿಡಿಯೋ ಇಟ್ಟುಕೊಂಡು ಉಳಿದ ಕಿಡಿಗೇಡಿಗಳು ಬಾಲಕಿಯನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬಯಿನ ವಿವಿಧ ಸ್ಥಳಗಳಲ್ಲಿ ಕನಿಷ್ಠ ಆರು ಬಾರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬುಧವಾರ ರಾತ್ರಿ ಅಂಥದ್ದೊಂದು ಶೋಷಣೆಗೆ ಒಳಪಟ್ಟ ಬಾಲಕಿ ದೈಹಿಕವಾಗಿ ಜರ್ಜರಿತಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಕೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, 24 ದುಷ್ಕರ್ಮಿಗಳನ್ನು ಸೆರೆ ಹಿಡಿದರು. 'ಆ ಎಲ್ಲಾ ಆರೋಪಿಗಳು ಬಾಲಕಿಗೆ ಪರಿಚಯ ಇರುವವರೇ ಆಗಿದ್ದಾರೆ,'' ಎಂದು ಪೊಲೀಸರು ತಿಳಿಸಿದ್ದಾರೆ. ಈ ಐಪಿಸಿ ಅಡಿ ಕೇಸ್‌ ಪೊಲೀಸರು ಕಳೆದ ರಾತ್ರಿ ಈ ಬಗ್ಗೆ ದೂರನ್ನು ದಾಖಲು ಮಾಡಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376 (ಅತ್ಯಾಚಾರ), 376 (ಎನ್‌), 376 (3), 376 (ಡಿ) (ಎ) ಹಾಗೂ ಸೆಕ್ಷನ್‌, 4, 6 ಹಾಗೂ 10 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ದಾಖಲು ಮಾಡಲಾಗಿದೆ. ಇನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕಾರ್ಯಕರ್ತರು ಮಾನ್ಸಡೆ ಪೊಲೀಸ್‌ ಠಾಣೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದು, ಆರೋಪಿಗಳ ವಿರುದ್ದ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯ ಹೊರಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಪ್ರಾಪ್ತ ಬಾಲಕಿಗೆ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫಡ್ನವೀಸ್‌ ಟ್ವೀಟ್‌ ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌, "ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ. "ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಕೂಡಾ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮುಂಬಯಿನಲ್ಲಿ ಭೀಕರ ಅತ್ಯಾಚಾರ ನಡೆದಿತ್ತು. ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ಟೆಂಪೋದಲ್ಲಿ ಮಹಿಳೆಯೊಬ್ಬರನ್ನು ಅತ್ಯಾಚಾರಗೈಯಲಾಗಿತ್ತು. ಬಳಿಕ ಕಾಮುಕ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್‌ ಹಾಕಿ ರಾಕ್ಷಸಿ ಪ್ರವೃತ್ತಿ ಮೆರೆದಿದ್ದ, ತೀವ್ರಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಈ ಘಟನೆ ಬಳಿಕ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಮಾಯನಗರಿ ಜನರನ್ನು ಬೆಚ್ಚಿಬೀಳಿಸಿದೆ.