'ಪುನೀತ್ ಸರ್‌, ಮನೆಗೆ ಬಾ ಅಂತಿದ್ರು, ಬಂದಿದ್ದೇನೆ. ಆದ್ರೆ ಈಗ ಅವರೇ ಇಲ್ಲ..'- ನಟ ಶಿವಕಾರ್ತಿಕೇಯನ್

ಕರುನಾಡಿನ ಮನೆ ಮಗ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ 4 ದಿನಗಳೇ ಕಳೆದಿವೆ. ಆದರೂ ಅಪ್ಪು ಅವರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆ ದುಃಖದಲ್ಲೇ ಅಭಿಮಾನಿಗಳು, ಕುಟುಂಬಸ್ಥರು ಇದ್ದಾರೆ.

'ಪುನೀತ್ ಸರ್‌, ಮನೆಗೆ ಬಾ ಅಂತಿದ್ರು, ಬಂದಿದ್ದೇನೆ. ಆದ್ರೆ ಈಗ ಅವರೇ ಇಲ್ಲ..'- ನಟ ಶಿವಕಾರ್ತಿಕೇಯನ್
Linkup
'ಪವರ್ ಸ್ಟಾರ್' ಅವರಿಗೆ ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಲ್ಲೂ ಉತ್ತಮ ಸ್ನೇಹಿತರಿದ್ದರು. ಅವರನ್ನು ಕಂಡರೆ ಅನೇಕರಿಗೆ ಇಷ್ಟ. ಚಿರಂಜೀವಿ, ವಿಕ್ಟರಿ ವೆಂಕಟೇಶ್, ಬಾಲಯ್ಯ, ಜೂ. ಎನ್‌ಟಿಆರ್ ಮುಂತಾದವರು ಅಂತಿಮ ದರ್ಶನಕ್ಕೆ ಬಂದಿದ್ದೇ ಅದಕ್ಕೆ ಸಾಕ್ಷಿ. ಈಗ ತಮಿಳು ನಟ ಕೂಡ ಬೆಂಗಳೂರಿಗೆ ಬಂದಿದ್ದಾರೆ. ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ. ನಂತರ ಅವರು ಪುನೀತ್ ಮನೆಗೆ ಭೇಟಿ ನೀಡಿ, ಬಳಿಕ ಅಪ್ಪು ಸಮಾಧಿ ಬಳಿಗೂ ಹೋಗಲಿದ್ದಾರೆ. ಈ ಮಧ್ಯೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವಕಾರ್ತಿಕೇಯನ್, 'ಬೆಂಗಳೂರಿಗೆ ಬಂದಾಗ ಅಪ್ಪು ಅಣ್ಣ ಮನೆಗೆ ಬಾ ಅಂತಿದ್ರು. ಬಂದಿದ್ದೇನೆ, ಆದ್ರೆ ಈಗ ಅವರೇ ಇಲ್ಲ..' ಎಂದು ಭಾವುಕರಾಗಿದ್ದಾರೆ. 'ಪುನೀತ್ ರಾಜ್‌ಕುಮಾರ್ ಅವರ ನಿಧನ ದೊಡ್ಡ ನಷ್ಟ. ನಾನಿನ್ನೂ ಆ ಶಾಕ್‌ನಲ್ಲೇ ಇದ್ದೇನೆ. ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈಗತಾನೇ ಶಿವಣ್ಣ ಅವರನ್ನು ಭೇಟಿ ಮಾಡಿದ್ದೇನೆ. ಒಂದು ತಿಂಗಳ ಹಿಂದಷ್ಟೇ ಪುನೀತ್ ರಾಜ್‌ಕುಮಾರ್ ಅವರು ನನಗೆ ಕಾಲ್ ಮಾಡಿದ್ರು. ನನ್ನ ಸಿನಿಮಾಗೆ ಅವರು ವಿಶ್‌ ಮಾಡಿದ್ರು. ಅವರೊಬ್ಬ ಉತ್ತಮ ವ್ಯಕ್ತಿ. ಇಡೀ ಭಾರತೀಯ ಚಿತ್ರರಂಗಕ್ಕೆ ಅವರ ನಿಧನದಿಂದ ದೊಡ್ಡ ನಷ್ಟ ಉಂಟಾಗಿದೆ. ಅವರು ಒಳ್ಳೆಯತನ, ಉತ್ತಮ ಕೆಲಸಗಳು ಯಾವಾಗಲೂ ಶಾಶ್ವತವಾಗಿ ನೆನಪಿನಲ್ಲಿ ಇರುತ್ತವೆ' ಎಂದು ಶಿವಕಾರ್ತಿಕೇಯನ್ ತಿಳಿಸಿದ್ದಾರೆ. 'ಪುನೀತ್ ಅವರು ನಮಗೆಲ್ಲ ಸ್ಫೂರ್ತಿ. ಮುಂದೆ ಬರುವ ಎಲ್ಲ ಕಲಾವಿದರಿಗೂ ಅವರು ದೊಡ್ಡ ಸ್ಫೂರ್ತಿ. ಬರೀ ತೆರೆಮೇಲೆ ಹೇಗೆ ರಂಜಿಸಬೇಕು ಎಂಬ ವಿಚಾರದಲ್ಲಿ ಮಾತ್ರವಲ್ಲ, ತೆರೆ ಹಿಂದೆಯೂ ಹೇಗಿರಬೇಕು ಎಂಬುದನ್ನು ಅವರಿಂದ ಕಲಿಯಬೇಕಿದೆ. ಒಂದು ಅವಾರ್ಡ್ ಫಂಕ್ಷನ್‌ನಲ್ಲಿ ನಾನು ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ಅವರನ್ನು ಭೇಟಿಯಾಗಿದ್ದೆ. ಆಗಲೂ ನನಗೆ ಅವರು ಶುಭ ಹಾರೈಸಿದ್ರು. 'ಸರ್‌.. ಹೇಗಿದ್ದೀರಿ..' ಎಂದು ನಾನು ಕೇಳಿದಾಗ, ಅವರು ಹೇಳಿದ್ದು ಒಂದೇ ಮಾತು. ಬೆಂಗಳೂರಿಗೆ ಬಂದಾಗೆಲ್ಲ ಮನೆಗೆ ಬಂದುಹೋಗಿ..'.. ಇವತ್ತು ನಾನು ಬೆಂಗಳೂರಿಗೆ ಬಂದಿದ್ದೇನೆ. ಆದರೆ ಭೇಟಿಯಾಗಲು ಅವರೇ ಇಲ್ಲ. ನಾನು ಅವರನ್ನು ತುಂಬ ತುಂಬ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಶಿವ ಹೇಳಿದ್ದಾರೆ. 'ಪುನೀತ್ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ, ಫ್ಯಾನ್ಸ್‌ಗೆ ಎಷ್ಟು ಕಷ್ಟ ಆಗುತ್ತಿದೆ ಎಂದು ನನಗೆ ಅರ್ಥ ಆಗತ್ತೆ. ಇನ್ನೂ ಆ ಶಾಕ್‌ನಿಂದ ಆಚೆ ಬರಲು ನನಗೆ ಸಾಧ್ಯವಾಗುತ್ತಿಲ್ಲ. ಯಾಕೆ ಇದು ನಡೆಯಿತು? ಏನಕ್ಕೆ ಇದು ನಡೆಯಿತು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಜೀವನ ಅಂದ್ರೆ ಏನೂ ಅನ್ನೋದೇ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಆಗಿದೆ. ಅವರೀಗ ದೇವರ ಜೊತೆಗೆ ಇದ್ದಾರೆ ಎಂದು ನಂಬಿದ್ದೇನೆ. ಅವರು ಅಲ್ಲಿಂದಲೇ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ..' ಎಂದು ಶಿವಕಾರ್ತಿಕೇಯನ್ ಹೇಳಿದ್ದಾರೆ.