ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿದ್ದಾಗ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ!

ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಆಗಿದ್ದಾಗ ತಾವು ಮಾಡಿದ ದೊಡ್ಡ ತಪ್ಪಿನ ಬಗ್ಗೆ ಈಗ ರಮ್ಯಾ ಬಾಯ್ಬಿಟ್ಟಿದ್ದಾರೆ.

ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿದ್ದಾಗ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ!
Linkup
ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಕ್ವೀನ್ ಆಗಿ ಮೆರೆದ ರಾಜಕೀಯಕ್ಕೆ ಧುಮುಕಿ ಮಂಡ್ಯದ ಸಂಸದೆಯಾದರು. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡ ರಮ್ಯಾ ಬಳಿಕ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಪಟ್ಟಕ್ಕೇರಿದರು. ಇದೀಗ ಚಿತ್ರರಂಗದಿಂದಲೂ ಹಾಗೂ ರಾಜಕಾರಣದಿಂದಲೂ ರಮ್ಯಾ ದೂರ ಸರಿದಿದ್ದಾರೆ. ಅಸಲಿಗೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನದಿಂದ ರಮ್ಯಾ ಹೊರಬಂದಿದ್ದು ಯಾಕೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಆಗಿದ್ದಾಗ ತಾವು ಮಾಡಿದ ದೊಡ್ಡ ತಪ್ಪಿನ ಬಗ್ಗೆ ಈಗ ರಮ್ಯಾ ಬಾಯ್ಬಿಟ್ಟಿದ್ದಾರೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿದ್ದಾಗ ತಾವು ಮಾಡಿದ ಎಡವಟ್ಟು, ತಮ್ಮ ತಪ್ಪಿನಿಂದ ಬೇಸರಗೊಂಡು ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಬಳಿಕ ನೀಡಿದ ಪ್ರತಿಕ್ರಿಯೆ.. ಇದೆಲ್ಲದರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಬರೆದಿರುವುದೇನು? ''ನಾನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆಯಾಗಿದ್ದಾಗ ನನ್ನಿಂದ ಘೋರ ತಪ್ಪಾಗಿತ್ತು. ಈ ಘಟನೆ ಬಗ್ಗೆ ಹಲವರಿಗೆ ನೆನಪಿರಬಹುದು. ಆದರೆ, ಘಟನೆಯ ಹಿಂದಿನ ಸತ್ಯ ಮಾತ್ರ ಅನೇಕರಿಗೆ ಗೊತ್ತಿಲ್ಲ. ಇದೀಗ ಬಹಿರಂಗ ಪಡಿಸುತ್ತಿದ್ದೇನೆ...'' ''ಕೆಲವು ವರ್ಷಗಳ ಹಿಂದೆ ನಾನು ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿದ್ದಾಗ... ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಲ ಸಂಸದರು ಜರ್ಮನಿಗೆ ಪ್ರವಾಸ ಕೈಗೊಂಡರು. ಆ ಪ್ರವಾಸಗಳು ಗಡಿಬಿಡಿಯಿಂದ ಕೂಡಿರುತ್ತಿದ್ದವು, ಬಿಡುವು ಸಿಗುತ್ತಿರಲಿಲ್ಲ. ಆದರೂ ನನ್ನ ಕೆಲಸವನ್ನು ನಾನು ಪ್ರೀತಿಯಿಂದ ಮಾಡುತ್ತಿದ್ದೆ'' ''ಒಂದು ದಿನ ಬರ್ಲಿನ್‌ನ ಮ್ಯೂಸಿಯಂಗೆ ಭೇಟಿ ನೀಡಿದ್ವಿ. ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಜರ್ಮನ್ ಸಂಸದರು ತಿಳಿಸಿಕೊಡುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಕೆಲ ಫೋಟೋಗಳನ್ನು ನಾನು ಕ್ಲಿಕ್ ಮಾಡಿ, ಅವುಗಳನ್ನು ಭಾರತದಲ್ಲಿದ್ದ ತಂಡಕ್ಕೆ ರವಾನಿಸಿದೆ'' ''ರಾಹುಲ್ ಗಾಂಧಿ ಅವರ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಯ್ತು. ಬೇಡದ ಕಾರಣಕ್ಕೆ ಟ್ರೋಲ್ ಆಯ್ತು. ರಾಹುಲ್ ಗಾಂಧಿ ಬಗ್ಗೆ ಅಪಹಾಸ್ಯ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ರಾಹುಲ್ ಗಾಂಧಿ ಅವರನ್ನು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ'' ''ತಪ್ಪಿಗೆ ಕ್ಷಮಾಪಣೆ ಕೇಳಲು ಹಾಗೂ ಹುದ್ದೆಗೆ ರಾಜೀನಾಮೆ ನೀಡಲು ನಾನು ರಾಹುಲ್ ಗಾಂಧಿ ಬಳಿ ತೆರಳಿದೆ. ಆದರೆ, ಅವರು ನನ್ನ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ. ಬದಲಾಗಿ, ''ಪರ್ವಾಗಿಲ್ಲ. ಇನ್ಮೇಲೆ ಪೋಸ್ಟ್‌ಗಳನ್ನು ಹಾಕುವಾಗ ಹುಷಾರಾಗಿರಿ'' ಎಂದು ನಗುಮೊಗದಿಂದಲೇ ಹೇಳಿದರು. ಆ ಸಮಯದಲ್ಲಿ ನಾನು ಕಣ್ಣೀರಿಟ್ಟೆ. ನಾನು ಮಾಡಿದ ತಪ್ಪಿಗೆ, ನನ್ನನ್ನ ಹುದ್ದೆಯಿಂದ ಹೊರದಬ್ಬಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ'' ಎಂದು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಬರೆದುಕೊಂಡಿದ್ದಾರೆ. ''ರಾಹುಲ್ ಗಾಂಧಿ ಅವರ ಉದಾರ ಮನೋಭಾವ, ಕ್ಷಮಾ ಗುಣ, ಜನಪರ ಕಾಳಜಿ ನನ್ನ ಮೇಲೆ ಸದಾ ಪ್ರಭಾವ ಬೀರುತ್ತದೆ. ಗಾಸಿಪ್, ಸುಳ್ಳು ಸುದ್ದಿ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ'' ಎಂದೂ ತಮ್ಮ ಪೋಸ್ಟ್‌ನಲ್ಲಿ ರಮ್ಯಾ ಉಲ್ಲೇಖಿಸಿದ್ದಾರೆ.