ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಒರಿಜಿನಲ್ ವೆಬ್ ಸೀರೀಸ್, ಬಹುನಿರೀಕ್ಷಿತ ದಿ ಫ್ಯಾಮಿಲಿ ಮ್ಯಾನ್ ಹೊಸ ಸೀಸನ್ ಟ್ರೇಲರ್ ಅನ್ನು ಬುಧವಾರ ಬಿಡುಗಡೆ ಮಾಡಿತ್ತು. 2019 ರಲ್ಲಿ ಬಿಡುಗಡೆಯಾಗಿದ್ದ ಮೊದಲ ಸೀಸನ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿ ಪ್ರಿಯರು ಎರಡನೇ ಸೀಸನ್‌ಗಾಗಿ ಕಾತರರಾಗಿದ್ದರು. ಬುಧವಾರ ಬಿಡುಗಡೆಯಾದ ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 37 ದಶಲಕ್ಷ ಮಂದಿ (counting) ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಎರಡು ದಿನಗಳಿಂದ ಯೂಟ್ಯೂಬ್ ನ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ವೀಕ್ಷಕರ ಭರ್ಜರಿ ಪ್ರತಿಕ್ರಿಯೆಯ ಬೆನ್ನಲ್ಲೇ, ಫ್ಯಾಮಿಲಿ ಮ್ಯಾನ್ ತಂಡ, ಬಹು ಭಾಷೆಯಲ್ಲಿ ಸೀಸನ್ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. ವೀಕ್ಷಕರ ಪ್ರೋತ್ಸಾಹಕ್ಕೆ ತಲೆಬಾಗಿರುವ ನಿರ್ಮಾಪಕರಾದ ರಾಜ್ ಹಾಗೂ ಡಿಕೆ ಶೋ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ.
1. ಸುಮಾರು 240 ಕ್ಕೂ ಹೆಚ್ಚು ದೇಶಗಳಲ್ಲಿ ಕಾತರದಿಂದ ಕಾಯುತ್ತಿರುವ ವೀಕ್ಷಕರಿಗೆ ಈ
ಶೋ ಕುರಿತು ಏನು ಹೇಳಲಿಚ್ಚಿಸುವಿರಿ?
ಡಿಕೆ ಮತ್ತು ರಾಜ್: ಹೊಸ ಸೀರೀಸ್ ಬಿಡುಗಡೆಯಾಗುತ್ತಿರುವುದು ಅತ್ಯಂತ ಖುಷಿ ತಂದಿದೆ. ಕಷ್ಟದ ಪರಿಸ್ಥಿತಿ ಹಾಗೂ ಹಲವಾರು ವರ್ಷದ ಕೆಲಸ ಈ ಸೀರೀಸ್‌ನಲ್ಲಿ ಅಡಕವಾಗಿದೆ. 9 ಎಪಿಸೋಡ್‌ಗಳ ಸೀರೀಸ್ ಅನ್ನು ವೀಕ್ಷಕರಿಗೆ ನೀಡುತ್ತಿರುವುದು ನಮ್ಮನ್ನೂ ಸಾಕಷ್ಟು ಕುತೂಹಲದಂತಹ ಸನ್ನಿವೇಶಕ್ಕೆ ತಳ್ಳಿದೆ!
ಕಳೆದ ಬಾರಿಯಂತೆಯೇ ಈ ಸೀಸನ್ ಸಹ ಶ್ರೀಕಾಂತ್ ತಿವಾರಿಯ ಕೌಟಿಂಬಿಕ ವಿಚಾರಗಳತ್ತ ಸಾಗುತ್ತದೆ. ಸಾಮಾನ್ಯ ಮಧ್ಯಮ ವರ್ಗದ ನೌಕರರಾಗಿರುವ ಶ್ರೀಕಾಂತ್, ಒಬ್ಬ ಅತ್ಯದ್ಭುತ ಗೂಢಚಾರಿಯೂ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಈ ಬಾರಿ ಶ್ರೀಕಾಂತ್ ತಿವಾರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ ಹಾಗೂ ಅದನ್ನು ಆತ ನಿಭಾಯಿಸುವ ರೀತಿಯನ್ನು ಬಿಂಬಿಸಲಾಗಿದೆ.
ಈ ಸೀಸನ್ ನ ಇನ್ನೊಂದು ವಿಶೇಷ ಎಂದರೆ, ತೆಲುಗು ಹಾಗೂ ತಮಿಳು ಚಿತ್ರ ನಟಿ ಸಮಂತ ಅಕ್ಕಿನೇನಿ ಅವರು ಡಿಜಿಟಲ್ ಮಾಧ್ಯಮಕ್ಕೆ ಪದಾರ್ಪಣೆ ಮಾಡಿದ್ದಾರೆ.ಭಾರತರ ವಿವಿಧ ಭಾಗ, ಭಾಷೆಗಳು ಇದರಲ್ಲಿ ಅಡಕವಾಗಿದ್ದು, ಬಹುಭಾಷಾ ಕಲಾವಿದರನ್ನೂ ಪರಿಚಯಿಸಿದೆ.
2. ಈ ಸೀಸನ್ ನ ವಿಶೇಷತೆ ಏನು?
ರಾಜ್ ಮತ್ತು ಡಿಕೆ: ಈ ಸೀಸನ್ ಉತ್ತರ ಭಾರತ ಹಾಗೂ ದಕ್ಷಿಣ ಭಾರತವನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವಾಗಿದೆ! ಸೀಸನ್ -1 ಗಿಂತಲೂ ಹೆಚ್ಚಿನ ರೋಚಕತೆ ಹಾಗೂ ಕುತೂಹಲಕಾರಿ, ಆ್ಯಕ್ಷನ್, ಹಾಡುಗಳನ್ನೂ ಅಳವಡಿಸಲಾಗಿದೆ. ಅಲ್ಲದೆ ತಮಿಳುನಾಡಿನ ಅನೇಕ ಮಂದಿ ಕಲಾವಿದರನ್ನೂ ಈ ಸೀಸನ್‌ನಲ್ಲಿ ಕಾಣಬಹುದು. ವಿವಿಧ ಬಗೆಯ ಸನ್ನಿವೇಶ ಹಾಗೂ ಪಾತ್ರಗಳ ಮೂಲಕ ನೂತನ ಸೀಸನ್ ತಯಾರಿಸಲಾಗಿದೆ.
ಕಥೆಯ ಅಗತ್ಯಕ್ಕೆ ಅನುಸಾರ, ಈ ಸೀಸನ್ ನ ಸೆಟ್ ಮುಂಬಯಿ, ತಮಿಳುನಾಡು, ಲಂಡನ್ ಹಾಗೂ ಫ್ರಾನ್ಸ್‌ನಲ್ಲಿ ಹಾಕಲಾಗಿದೆ. ಶೂಟಿಂಗ್ ಹಾಗೂ ಕಥೆಯಲ್ಲಿ ಪಕ್ವತೆ ಹಾಗೂ ಪ್ರೇಕ್ಷಕರ ಅಭೀಷ್ಟೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅನೇಕ ಮಂದಿ ತಜ್ಞರ ಸಲಹೆಗಳನ್ನು ಪಡೆಯಲಾಗಿದೆ. ಭಾರತದ ಕಾರ್ಯಕ್ಷಮತೆ ಹಾಗೂ ಭಾಷಾ ವೈವಿಧ್ಯತೆಯನ್ನೂ ಈ ಸೀಸನ್‌ನಲ್ಲಿ ಕಾಣಬಹುದು.
ಇಷ್ಟು ಮಾತ್ರವಲ್ಲದೆ, ಫ್ಯಾಮಿಲಿ ಮ್ಯಾನ್ ಪ್ರಮುಖ ತಾರಾಗಣದಲ್ಲಿರುವ ಮನೋಜ್ ಬಾಜ್‌ಪೇಯಿ, ಅತ್ಯದ್ಭುತವಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿರುವ ನಟಿ ಸಮಂತಾ, ಈ ಸೀಸನ್‌ಗಾಗಿಯೇ ಮಾರ್ಷಲ್ ಆರ್ಟ್ಸ್ ಕಲಿತುಕೊಂಡಿದ್ದಾರೆ ಹಾಗೂ ಎಲ್ಲ ಆ್ಯಕ್ಷನ್ ಸ್ಟಂಟ್‌ಗಳನ್ನು ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರೀಕರಣ ತಂಡ ಸಹ ಅತ್ಯದ್ಭುತವಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
3. ಉಳಿದ ಪ್ರಾಜೆಕ್ಟ್‌ಗಳಿಗಿಂತ ಫ್ಯಾಮಿಲಿ ಮ್ಯಾನ್ ಹೆಚ್ಚು ಚಾಲೆಂಜಿಂಗ್ ಎಂದೆನಿಸುತ್ತದೆಯೇ?
ರಾಜ್ ಮತ್ತು ಡಿಕೆ: ಸೀಸನ್-1 ಗೆ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆಗೆ ನಾವು ಎಂದಿಗೂ ಆಭಾರಿಯಾಗಿದ್ದೇವೆ. ಸೀಸನ್ 1 ಸಂಪೂರ್ಣಗೊಳ್ಳುವ ಮುನ್ನವೇ ನಾವು ಎರಡೇ ಸೀಸನ್ ನ ಸ್ಕ್ರಿಪ್ಟ್ ಸಿದ್ಧಪಡಿಸಲು ಆರಂಭಿಸಿದ್ದೆವು. ಇದು ನಮ್ಮ ಮೇಲಿದ್ದ ಪ್ರೇಕ್ಷಕರ ಕಾತರದ ಒತ್ತಡವನ್ನು ಕೊಂಚ ಕಡಿಮೆ ಮಾಡಿತು.
ಪ್ರೇಕ್ಷಕರ ಅಭಿಪ್ರಾಯ ಹಾಗೂ ಸಲಹೆಗಳನ್ನು ನಾವು ಧನಾತ್ಮಕವಾಗಿ ಪರಿಗಣಿಸಿದ್ದು, ಕಥೆ, ಚಿತ್ರಕಥೆ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನೂ ಮಾಡಿದ್ದೇವೆ. ಪ್ರೇಕ್ಷಕರ ವ್ಯೂವಿಂಗ್ ಎಕ್ಸ್‌ಪೀರಿಯನ್ಸ್ ಹೆಚ್ಚಿಸುವ ಉದ್ದೇಶದೊಂದಿಗೆ ಕೆಲವಾರು ಬೆಳವಣಿಗೆಯೂ ಸೀಸನ್-2 ನಲ್ಲಿದೆ.
4. ಟ್ರೇಲರ್‌ಗೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಮಂತ ಅವರ “ರಾಜಿ” ಪಾತ್ರ, ಅವರ ಫ್ಯಾನ್ ಕ್ಲಬ್ ಗೆ ಬೇಸರ ತರಬಹುದು ಎಂಬ ಮಾತುಗಳೂ ಕೇಳಿ ಬಂದಿವೆಯಲ್ಲ! ಇದಕ್ಕೆ ಏನು ಹೇಳುತ್ತೀರಿ?
ರಾಜ್ ಮತ್ತು ಡಿಕೆ: ಕೆಲವೇ ಕೆಲವು ಸನ್ನಿವೇಶ, ಶಾಟ್ಸ್‌ಗಳನ್ನು ನೋಡಿ, ಅನೇಕರು ಇಂತಹ ಅಭಿಪ್ರಾಯಪಟ್ಟಿರುವುದು ನಿಜ. ನಮ್ಮ ಚಿತ್ರ ತಂಡದಲ್ಲಿ ಅನೇಕ ಮಂದಿ, ಅಂದರೆ ಪಾತ್ರಧಾರಿಗಳು, ಬರಹಗಾರರದ್ದು ತಮಿಳು ಮೂಲ. ಅಂದರೆ ಅವರೆಲ್ಲ ತಮಿಳುನಾಡಿನವರೇ! ತಮಿಳರು ಹಾಗೂ ತಮಿಳು ಭಾಷೆ, ಸಂಸ್ಕೃತಿಯ ಕುರಿತು ಅಗಾಧವಾದ ಪ್ರೇಮ ಹಾಗೂ ಗೌರವ ನಮಗಿದೆ. ಈ ವೆಬ್ ಸೀರೀಸ್‌ನಲ್ಲಿ ಅನೇಕ ವರ್ಷಗಳ ಶ್ರಮ ಅಡಕವಾಗಿದೆ. ಅಷ್ಟೇ ಅಲ್ಲ ಅನೇಕ ಬಗೆಯ ಕಷ್ಟಗಳ ಹಾದಿಯನ್ನೂ ಸಾಗಿ, ಪ್ರೇಕ್ಷಕರಿಗೆ ಮಡಿಲಿಗೆ ಇಡಲಿದ್ದೇವೆ. ಸೀಸನ್ 1ನಂತೆಯೇ ಸಮತೋಲನದ ಚಿತ್ರಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಶೋವನ್ನು ಸಂಪೂರ್ಣವಾಗಿ ನೋಡಿ, ಆ ಬಳಿಕ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ವಿನಂತಿಸುತ್ತಿದ್ದೇವೆ! ಶೋ ನೋಡಿದ ಬಳಿಕ ಎಲ್ಲರೂ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ.
ಡಿಸ್‌ಕ್ಲೇಮರ್: ಈ ಲೇಖನವನ್ನು ಅಮೆಜಾನ್ ಪ್ರೈಮ್ ವಿಡಿಯೋ ಪರವಾಗಿ ಟೈಮ್ಸ್ ಇಂಟರ್ನೆಟ್ ನ ಸ್ಪಾಟ್‌ಲೈಟ್ ತಂಡವು ಪ್ರಕಟಿಸಿರುತ್ತದೆ.