ಕನ್ನಡ ಚಿತ್ರರಂಗಕ್ಕೆ ಪ್ಯಾಕೇಜ್: ಸಿಎಂ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ ಸುನೀಲ್ ಪುರಾಣಿಕ್
ಕನ್ನಡ ಚಿತ್ರರಂಗಕ್ಕೆ ಪ್ಯಾಕೇಜ್: ಸಿಎಂ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ ಸುನೀಲ್ ಪುರಾಣಿಕ್
ಕೊರೊನಾ ವೈರಸ್, ಲಾಕ್‌ಡೌನ್ ಸಂಕಷ್ಟದ ಕಾರಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅಭಿನಂದಿಸಿದ್ದಾರೆ.
ಕನ್ನಡ ಚಿತ್ರೋದ್ಯಮದ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಭಿನಂದಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರೋದ್ಯಮಕ್ಕೆ ಆಸರೆಯಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಅವರೊಂದಿಗೆ ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಸುನೀಲ್ ಪುರಾಣಿಕ್ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಯವರು ಪ್ಯಾಕೇಜ್ ನೀಡಿದ್ದಾರೆ. ಸಂಕಷ್ಟದಲ್ಲಿ ಪ್ಯಾಕೇಜ್ ನೀಡಿದ ಮುಖ್ಯಮಂತ್ರಿಯವರನ್ನು ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
'ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷದೊಂದಿಗೆ ಮಾನ್ಯ ಮುಖ್ಯಮಂತ್ರಿಯವರು ಎಲ್ಲರಿಗೂ ಕೊರೊನಾ ಸಂಕಷ್ಟದಲ್ಲಿ ಕೈಹಿಡಿದಿದ್ದಾರೆ. ಮೊದಲ ಪ್ಯಾಕೇಜ್‌ನಲ್ಲಿ ಚಿತ್ರೋದ್ಯಮಕ್ಕೆ ಪ್ಯಾಕೇಜ್ ಕೈತಪ್ಪಿತ್ತು. ಆದರೆ ತಾವು ಮಾಡಿದ ಮನವಿಗೆ ಅವರು ಇದೀಗ ಸ್ಪಂದಿಸಿದ್ದಾರೆ' ಎಂದು ಸುನೀಲ್ ಪುರಾಣಿಕ್ ಹೇಳಿದ್ದಾರೆ.
'ಕಳೆದ ವರ್ಷದ ಕೊರೊನಾ ಸಂದರ್ಭದಲ್ಲಿ ಲಾಕ್‌ಡೌನ್ ಸಂಕಷ್ಟದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಕಾಳಜಿಯಿಂದ ಆಹಾರ ಸಾಮಗ್ರಿಗಳ ಖರೀದಿಗೆ ಸಂಕಷ್ಟದಲ್ಲಿದ್ದ ಚಿತ್ರರಂಗದ 6500 ಮಂದಿಗೆ ತಲಾ 3 ಸಾವಿರ ರೂ. ಮೌಲ್ಯದ ರಿಲಾಯನ್ಸ್ ಕೂಪನ್ ಕೊಡಿಸಿದ್ದರು. ಅಲ್ಲದೆ, ಇತ್ತೀಚಿಗೆ ಚಿತ್ರೋದ್ಯಮದವರಿಗಾಗಿ ವಿಶೇಷವಾಗಿ ಲಸಿಕೆಯನ್ನೂ ನೀಡಿ ಸಹಾಯ ಮಾಡಿದ್ದಾರೆ. ಇದನ್ನು ಕನ್ನಡ ಚಿತ್ರೋದ್ಯಮ ಸ್ಮರಿಸುತ್ತದೆ' ಎಂದು ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.
ಅಂದಹಾಗೆ, ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾ 3 ಸಾವಿರ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರವು ನಿರ್ಧಾರ ಮಾಡಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದೆ.