ಪೆಗಾಸಸ್‌ ಸಂಘರ್ಷ.. ಕೇಂದ್ರ ಸರ್ಕಾರ V/S ಸುಪ್ರೀಂ ಕೋರ್ಟ್..! ಸಮಸ್ಯೆ ಮತ್ತಷ್ಟು ಜಟಿಲ..

'ಭದ್ರತೆಗೆ ಸಂಬಂಧಿಸಿದ ವಿಷಯ ಹೊರತು ಪಡಿಸಿ ವಿಸ್ತೃತ ವರದಿ ಸಲ್ಲಿಸಿ. ಇಲ್ಲದಿದ್ದರೆ ಲಭ್ಯ ಮಾಹಿತಿ ಆಧರಿಸಿ ಮಧ್ಯಂತರ ತೀರ್ಪು ಪ್ರಕಟಿಸಲಾಗುವುದು' - ಮುಖ್ಯ ನ್ಯಾಯಮೂರ್ತಿ ಎನ್‌. ವಿ. ರಮಣ

ಪೆಗಾಸಸ್‌ ಸಂಘರ್ಷ.. ಕೇಂದ್ರ ಸರ್ಕಾರ V/S ಸುಪ್ರೀಂ ಕೋರ್ಟ್..! ಸಮಸ್ಯೆ ಮತ್ತಷ್ಟು ಜಟಿಲ..
Linkup
: ರಾಷ್ಟ್ರೀಯ ಭದ್ರತೆಯಂತಹ ನಾಜೂಕಿನ ವಿಷಯದ ಜತೆ ತಳುಕು ಹಾಕಿಕೊಂಡಿರುವ ಪೆಗಾಸಸ್‌ ಗೂಢಚರ್ಯೆ ಪ್ರಕರಣ ಕುರಿತು ವಿವರವಾದ ಅಫಿಡವಿಟ್‌ ಸಲ್ಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್‌ ಆದೇಶವನ್ನೇ ಸರಕಾರ ಧಿಕ್ಕರಿಸಿರುವುದು ಹೊಸ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. 'ಭದ್ರತೆಗೆ ಸಂಬಂಧಿಸಿದ ವಿಷಯ ಹೊರತು ಪಡಿಸಿ ವಿಸ್ತೃತ ವರದಿ ಸಲ್ಲಿಸಿ. ಇಲ್ಲದಿದ್ದರೆ ಲಭ್ಯ ಮಾಹಿತಿ ಆಧರಿಸಿ ಮಧ್ಯಂತರ ತೀರ್ಪು ಪ್ರಕಟಿಸಲಾಗುವುದು' ಎಂದು ಎನ್‌. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿತು. 'ವಿವಿಧ ಕ್ಷೇತ್ರಗಳ ಗಣ್ಯರ ದೂರವಾಣಿ ಸಂಭಾಷಣೆಯನ್ನು ಇಸ್ರೇಲ್‌ನ ಪೆಗಾಸಸ್‌ ಸ್ಪೈ ವೇರ್‌ ಬಳಸಿ ಕದ್ದಾಲಿಕೆ ಮಾಡಲಾಗಿದೆ. ಆ ಮೂಲಕ ಜನರ ಖಾಸಗಿತನದ ಹಕ್ಕನ್ನು ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಕೋರಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಕೇಂದ್ರ ಸರಕಾರ ಈಗಾಗಲೇ ಸಂಕ್ಷಿಪ್ತ ಅಫಿಡವಿಟ್‌ ಸಲ್ಲಿಕೆ ಮಾಡಿದ್ದು, ಯಾವುದೇ ಕದ್ದಾಲಿಕೆ ಮಾಡಿಲ್ಲ ಹಾಗೂ ಇದರಲ್ಲಿ ಮುಚ್ಚಿಡುವಂತಹ ರಹಸ್ಯವೇನೂ ನಡೆದಿಲ್ಲ ಎಂದು ಹೇಳಿಕೊಂಡಿದೆ. ಇದನ್ನು ಒಪ್ಪದ ಸುಪ್ರೀಂ ಕೋರ್ಟ್‌ ವಿವರವಾದ ಅಫಿಡವಿಟ್‌ಗಾಗಿ ಪಟ್ಟು ಹಿಡಿದಿದೆ. ದಿನದ ವಿಚಾರಣೆ ಆರಂಭಗೊಳ್ಳುತ್ತಿದ್ದಂತೆಯೇ ಪೆಗಾಸಸ್‌ ವಿಷಯದಲ್ಲಿ ಸರಕಾರ ತೆಗೆದುಕೊಂಡ ನಿಲುವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತೊಮ್ಮೆ ನ್ಯಾಯಪೀಠದ ಗಮನಕ್ಕೆ ತಂದರು. 'ಈ ಮೊದಲೇ ನಾವು ಹೇಳಿದಂತೆ ಇದು ದೇಶದ ಭದ್ರತೆಗೆ ಸಂಬಂಧಿಸಿದ ನಾಜೂಕಿನ ವಿಷಯ. ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸರಕಾರ ಯಾವ ಸಾಫ್ಟ್‌ವೇರ್‌ ಬಳಸುತ್ತಿದೆ ಎಂದು ಉಗ್ರರಿಗೆ ತಿಳಿಸುವುದು ಅಸಾಧ್ಯ' ಎಂದರು. ಇದರಿಂದ ಕೆರಳಿದ ನ್ಯಾಯಪೀಠ, 'ಮಿಸ್ಟರ್‌ ಮೆಹ್ತಾ, ಕಳೆದ ಬಾರಿ ನೀವು ನ್ಯಾಯಾಲಯಕ್ಕೆ ವಿಸ್ತೃತ ಅಫಿಡವಿಟ್‌ ಸಲ್ಲಿಸುವ ಬಗ್ಗೆ ಭರವಸೆ ನೀಡಿದ್ದಿರಿ. ಈಗ ಗಡುವು ಮುಗಿದ ನಂತರ ಸರಕಾರ ವಿಸ್ತೃತ ಅಫಿಡವಿಟ್‌ ಸಲ್ಲಿಸಲು ಬಯಸುವುದಿಲ್ಲ ಎಂದು ಹೇಳಿದ್ದನ್ನೇ ಹೇಳುತ್ತಿದ್ದೀರಿ. ನಾವು ಕೂಡ ಭದ್ರತೆಗೆ ಸಂಬಂಧಿಸಿದ ಯಾವುದೇ ವಿಷಯ ತಂದೊಪ್ಪಿಸಿ ಎಂದು ಕೇಳುತ್ತಿಲ್ಲ. ಪ್ರಕರಣದ ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗುವುದು ಎಂದು ನೀವು ಹೇಳುತ್ತಿದ್ದೀರಿ. ಹಾಗಿದ್ದರೆ, ಇರುವ ಮಾಹಿತಿ ಆಧರಿಸಿ ಮಧ್ಯಂತರ ತೀರ್ಪು ಪ್ರಕಟಿಸಲಾಗುವುದು' ಎಂದು ಹೇಳಿತು. 'ನಾವೀಗ ತೀರ್ಪು ಕಾಯ್ದಿರಿಸುತ್ತೇವೆ. ಎರಡು ಮೂರು ದಿನದಲ್ಲಿ ಮಧ್ಯಂತರ ತೀರ್ಪು ಪ್ರಕಟಿಸಲಾಗುವುದು. ಈ ನಡುವೆ ನೀವೇನಾದರೂ ಯೋಚನೆ ಬದಲಿಸಿ ಅಭಿಪ್ರಾಯ ತಿಳಿಸುವುದಾದರೆ ತಿಳಿಸಬಹುದು' ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ತಿಳಿಸಿತು. ಇಸ್ರೇಲಿ ನಿರ್ಮಿತ ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ, ಭಾರತದಲ್ಲಿ 300ಕ್ಕೂ ಹೆಚ್ಚಿನ ಗಣ್ಯರು ಹಾಗೂ ಸಂಘ ಸಂಸ್ಥೆಗಳ ಮೊಬೈಲ್‌ ಸಂಭಾಷಣೆಯನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿಪಕ್ಷಗಳು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದು, ಭಾರಿ ವಿವಾದ ಸೃಷ್ಟಿಯಾಗಿದೆ. ಪೆಗಾಸಸ್‌ ಪಟ್ಟು-ಪೆಟ್ಟು..! ಕದ್ದಾಲಿಕೆಯ ಗದ್ದಲ ಸೃಷ್ಟಿಸಿರುವ ಪೆಗಾಸಸ್‌ ಕುರಿತು ಸಿಜೆಐ ರಮಣ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನಡುವೆ ಆಸಕ್ತಿದಾಯಕ ಸಂಭಾಷಣೆ ನಡೆಯಿತು. ಸಾಲಿಸಿಟರ್ ಜನರಲ್: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾದ್ದರಿಂದ ವಿವರವಾದ ಅಫಿಡವಿಟ್‌ ಸಲ್ಲಿಸಿ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ನಾವು ಬಳಸುವ ಸಾಫ್ಟ್‌ವೇರ್‌ ಬಗ್ಗೆ ಉಗ್ರರಿಗೆ ಮಾಹಿತಿ ನೀಡಲಾಗದು. ನ್ಯಾಯಪೀಠ: ಮಿಸ್ಟರ್‌ ಮೆಹ್ತಾ, ಕಳೆದ ಬಾರಿಯೇ ನಾವು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ನಮಗೆ ಅಫಿಡವಿಟ್‌ ಬೇಕು. ಅದಕ್ಕಾಗಿಯೇ ಆವತ್ತು ನಿಮಗೆ ಹೆಚ್ಚಿನ ಕಾಲಾವಕಾಶ ನೀಡಿದ್ದೆವು. ಈಗ ಈ ರೀತಿ ಹೇಳಿದರೆ ನಾವು ಮೊದಲಿಂದ ಆರಂಭಿಸುತ್ತೇವೆ. ಭದ್ರತೆಗೆ ಸಂಬಂಧಿಸಿದ ವಿಷಯ ಬಹಿರಂಗ ಪಡಿಸುವುದು ಬೇಡ ಎಂದು ನಿಮಗೆ ಎಷ್ಟು ಬಾರಿ ಹೇಳುವುದು? ತಮ್ಮ ಫೋನ್‌ ಕದ್ದಾಲಿಕೆಯಾಗಿವೆ ಎಂದು ಜನ ಹೇಳುತ್ತಿದ್ದಾರೆ, ಆ ಬಗ್ಗೆ ವಿವರ ಕೊಡಿ ಸಾಕು. ಸಾಲಿಸಿಟರ್ ಜನರಲ್: ತಮ್ಮ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಜನ ಹೇಳುತ್ತಿದ್ದರೆ ಅದು ಗಂಭೀರ ವಿಷಯ. ಈ ಕುರಿತು ಗಮನ ಹರಿಸಲು ನಾವು ತಜ್ಞರ ಸಮಿತಿ ರಚಿಸುತ್ತೇವೆ. ನ್ಯಾಯಪೀಠ: ಸಮಿತಿ ರಚಿಸುವುದು ದೊಡ್ಡ ವಿಷಯವಲ್ಲ. ಈಗ ನಿಮ್ಮ ಬಳಿ ಹೊಸದೇನಾದರೂ ಹೇಳಲು ಇದೆಯೇ? ಸಾಲಿಸಿಟರ್ ಜನರಲ್: ಇಲ್ಲ ಸಿಜೆಐ: ಮಿಸ್ಟರ್‌ ಮೆಹ್ತಾ, ಬರೀ ಪೊದೆ ಬಡಿಯುತ್ತಾ ಕೂರುವುದರಿಂದ ಏನು ಪ್ರಯೋಜನ? ವ್ಯರ್ಥ ಕಾಲಹರಣ. ಆಗಲಿ, ನಮ್ಮಿಂದ ಏನು ಆದೇಶ ನೀಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ರಾಷ್ಟ್ರೀಯ ಭದ್ರತೆ ಮಾಹಿತಿ ಕೇಳುತ್ತಿಲ್ಲ