ಸಲಿಂಗ ಕಾಮಕ್ಕಷ್ಟೆ ಅನುಮತಿ, ವಿವಾಹಕ್ಕಿಲ್ಲ ಸಮ್ಮತಿ; ದಿಲ್ಲಿ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ವಿದೇಶಿ ವಿವಾಹ ಕಾಯಿದೆ ಸೇರಿದಂತೆ ವಿವಿಧ ಕಾಯಿದೆಗಳ ಅಡಿಯಲ್ಲಿ ತಮ್ಮ ನಡುವಿನ ಬಂಧವನ್ನು ವಿವಾಹವಾಗಿ ಮಾನ್ಯ ಮಾಡಲು ಕೋರಿದ್ದಾರೆ. ಆದರೆ, ಕೇಂದ್ರ ಸರಕಾರ ಈ ಅರ್ಜಿಗಳನ್ನು ಪುರಸ್ಕರಿಸದಂತೆ ಆರಂಭದಿಂದಲೂ ಮನವಿ ಮಾಡುತ್ತಿದೆ. ಸಲಿಂಗ ವಿವಾಹ ಹಿಂದೂ ಸಂಸ್ಕೃತಿ ಅಥವಾ ಕಾನೂನಿನ ಭಾಗವಲ್ಲ. ಅಂತಹ ಸಂಬಂಧಗಳನ್ನು ಕುಟುಂಬ ಎಂದು ಕರೆಯಲಾಗದು ಎಂಬುದು ಕೇಂದ್ರದ ವಾದ.

ಸಲಿಂಗ ಕಾಮಕ್ಕಷ್ಟೆ ಅನುಮತಿ, ವಿವಾಹಕ್ಕಿಲ್ಲ ಸಮ್ಮತಿ; ದಿಲ್ಲಿ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟನೆ
Linkup
ಹೊಸದಿಲ್ಲಿ: ಭಾರತೀಯ ಕಾನೂನುಗಳ ಪ್ರಕಾರ ‘ಜೈವಿಕ ಪುರುಷ’ ಮತ್ತು ‘ಜೈವಿಕ ಮಹಿಳೆ’ ನಡುವಿನ ವಿವಾಹ ಸಂಬಂಧಕ್ಕೆ ಮಾತ್ರ ಅನುಮತಿ ಇದ್ದು, ಉಳಿದ ನಂಟುಗಳೆಲ್ಲ ಅಕ್ರಮ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ಗೆ ಮಂಗಳವಾರ ಸ್ಪಷ್ಟನೆ ನೀಡಿದೆ. ಜೈವಿಕ ಬದಲಾವಣೆಗಳಿಂದ ಸಲಿಂಗ ರತಿಯೂ ಎಲ್ಲೆಡೆ ಕಂಡು ಬರುತ್ತದೆಯಾದ್ದರಿಂದ ಸಲಿಂಗಿಗಳ ವಿವಾಹಕ್ಕೂ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ.ಡಿ.ಎನ್‌.ಜ್ಯೋತಿ ಸಿಂಗ್‌ ನೇತೃತ್ವದ ಪೀಠ ನಡೆಸಿತು. ‘ಸಲಿಂಗ ಕಾಮವನ್ನು ಪರಿಚ್ಛೇದ 377ರ ಅಡಿಯಲ್ಲಿ ಅಪರಾಧ ಮುಕ್ತಗೊಳಿಸಲಾಗಿದೆ ನಿಜ. ಆದರೆ ಸಲಿಂಗ ಮದುವೆಗೆ ಇದೇ ಪರಿಚ್ಛೇದ ಅನ್ವಯ ಆಗುವುದಿಲ್ಲ. ನವ್‌ತೇಜ್‌ ಸಿಂಗ್‌ ಜೋಹರ್‌ ಪ್ರಕರಣದಲ್ಲಿ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಈ ಪ್ರಕರಣದಲ್ಲಿ ಕೇವಲ ಸಲಿಂಗ ಕಾಮಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ. ಸದ್ಯದ ಕಾನೂನುಗಳ ಪ್ರಕಾರ, ಸಲಿಂಗಿಗಳ ಮದುವೆಗೆ ಸಮ್ಮತಿ ಇಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದರು. ಪ್ರಕರಣದ ಅಂತಿಮ ವಿಚಾರಣೆಯು ನ.30ರಂದು ನಡೆಯಲಿದೆ.2018ರ ಸೆಪ್ಟೆಂಬರ್‌ವರೆಗೆ ಕೂಡ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಈ ವಿಚಾರದಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠ, ಅಂತಿಮವಾಗಿ ಸಲಿಂಗ ಕಾಮವನ್ನು ಮಾತ್ರ ಅಪರಾಧ ಮುಕ್ತಗೊಳಿಸಿತ್ತು. 377ನೇ ಪರಿಚ್ಛೇದದ ಅಡಿಯಲ್ಲಿಯೇ ಸಲಿಂಗ ಕಾಮವನ್ನು ಸಮ್ಮತಿಸಿದ್ದ ನ್ಯಾಯಪೀಠ, ಸಮಾನ ಲಿಂಗಿಗಳ ಮದುವೆ ವಿಚಾರದಲ್ಲಿ ಮೌನ ವಹಿಸಿತ್ತು. ಏನಿದು ಪ್ರಕರಣ?ಸಲಿಂಗ ವಿವಾಹವನ್ನು ಮಾನ್ಯವೆಂದು ಪರಿಗಣಿಸಲು ಕೋರಿ ಅಭಿಜಿತ್‌ ಐಯ್ಯರ್‌ ಮಿತ್ರಾ, ವೈಭವ್‌ ಜೈನ್‌, ಕವಿತಾ ಅರೋರಾ, ಅನಿವಾಸಿ ಭಾರತೀಯ ಜೋಯ್‌ದೀಪ್‌ ಸೇನ್‌ಗುಪ್ತಾ ಹಾಗೂ ಅವರ ಸಹಗಾಮಿ ರಸ್ಸೆಲ್‌ ಬ್ಲೇನ್‌ ಸ್ಟೆಪೆನ್ಸ್‌ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಿಂದೂ ವಿವಾಹ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆ ಸೇರಿದಂತೆ ವಿವಿಧ ಕಾಯಿದೆಗಳ ಅಡಿಯಲ್ಲಿ ತಮ್ಮ ನಡುವಿನ ಬಂಧವನ್ನು ವಿವಾಹವಾಗಿ ಮಾನ್ಯ ಮಾಡಲು ಕೋರಿದ್ದಾರೆ. ಆದರೆ, ಕೇಂದ್ರ ಸರಕಾರ ಈ ಅರ್ಜಿಗಳನ್ನು ಪುರಸ್ಕರಿಸದಂತೆ ಆರಂಭದಿಂದಲೂ ಮನವಿ ಮಾಡುತ್ತಿದೆ. ಸಲಿಂಗ ವಿವಾಹ ಹಿಂದೂ ಸಂಸ್ಕೃತಿ ಅಥವಾ ಕಾನೂನಿನ ಭಾಗವಲ್ಲ. ಅಂತಹ ಸಂಬಂಧಗಳನ್ನು ಕುಟುಂಬ ಎಂದು ಕರೆಯಲಾಗದು ಎಂಬುದು ಕೇಂದ್ರದ ವಾದ.