ಕೋವಿನ್, ಆರೋಗ್ಯ ಸೇತುಗಳಲ್ಲಿ ಲಸಿಕೆ ಸ್ಲಾಟ್ ಬುಕ್ ಮಾಡುವುದು ಹೇಗೆ? ಇಲ್ಲಿವೆ ತಂತ್ರಗಳು

ಕೋವಿಡ್ ಲಸಿಕೆ ಪಡೆದುಕೊಳ್ಳಲು ಹೆಸರು ನೋಂದಾಯಿಸುವ ಕೋವಿನ್ ಮತ್ತು ಆರೋಗ್ಯ ಸೇತು ವೇದಿಕೆಗಳಲ್ಲಿ ಸ್ಲಾಟ್‌ಗಳನ್ನು ಪಡೆದುಕೊಳ್ಳುವುದು ಸವಾಲಾಗಿದೆ. ಆದರೆ ಈ ಸ್ಲಾಟ್‌ಗಳನ್ನು ಗುರುತಿಸಲು ಕೆಲವು ತಂತ್ರಗಳಿವೆ.

ಕೋವಿನ್, ಆರೋಗ್ಯ ಸೇತುಗಳಲ್ಲಿ ಲಸಿಕೆ ಸ್ಲಾಟ್ ಬುಕ್ ಮಾಡುವುದು ಹೇಗೆ? ಇಲ್ಲಿವೆ ತಂತ್ರಗಳು
Linkup
ಹೊಸದಿಲ್ಲಿ: ಮಾರಕ ಕೋವಿಡ್ ವಿರುದ್ಧ ಹೋರಾಡುವ ಶಕ್ತಿ ಮೂಡಿಸುವ ಲಸಿಕೆಗಳನ್ನು ನೀಡುವ ಕಾರ್ಯ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶ ನೀಡಿದ ನಂತರ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸುವುದು ಸಾಧ್ಯವಾಗುತ್ತಿಲ್ಲ. ಪಡೆಯಲು ಅದಕ್ಕೆಂದೇ ಇರುವ ಪೋರ್ಟಲ್ ಹಾಗೂ ಆಪ್‌ಗಳಲ್ಲಿ ಉಚಿತ ಮತ್ತು ಶುಲ್ಕ ಸಹಿತ ಲಸಿಕೆಗಳಿಗೆ ನೋಂದಣಿ ಮಾಡಿಕೊಂಡು ದಾಖಲಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಆದರೆ, ತಮ್ಮ ಲಸಿಕೆ ಸಮಯವನ್ನು ನಿಗದಿಗೊಳಿಸಿಕೊಳ್ಳಲು ಜನರಿಗೆ ಸಹಾಯಕವಾಗುವ ಕೆಲವು ಸಾಧನ ಮತ್ತು ತಂತ್ರಗಳೂ ಲಭ್ಯ. ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ Under45.in ಎಂಬ ಅಂತರ್ಜಾಲ ವೇದಿಕೆಯು, ಜಿಲ್ಲಾ ವ್ಯಾಪ್ತಿಗಳಲ್ಲಿ ಖಾಲಿಯಿರುವ ಲಸಿಕೆ ಸ್ಲಾಟ್‌ಗಳ ವಿವರಗಳನ್ನು ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಒದಗಿಸುತ್ತದೆ. ಇದೇ ರೀತಿಯ ಇನ್ನೊಂದು ಪ್ಲಾಟ್‌ಫಾರ್ಮ್, Getjab.in ಇ-ಮೇಲ್ ಮೂಲಕ ಮಾಹಿತಿ ನೀಡುತ್ತದೆ. ಆನ್‌ಲೈನ್ ಪೇಮೆಂಟ್ ವೇದಿಕೆಯಾದ ಪೇಟಿಎಂ ಕೂಡ ತನ್ನ ಮೊಬೈಲ್ ಆಪ್‌ಗಳಲ್ಲಿ ಸಮಗ್ರ ಲಸಿಕೆ ವಿವರಗಳನ್ನು ನೀಡುತ್ತದೆ. 'ಮೈ ಗವರ್ನ್‌ಮೆಂಟ್ ಕೊರೊನಾ ಹೆಲ್ಪ್‌ಡೆಸ್ಕ್‌'ನ ಚಂದಾದಾರರು ಲಸಿಕೆ ಕೇಂದ್ರಗಳ ಕುರಿತು ವಾಟ್ಸಾಪ್‌ನಲ್ಲಿ ಮಾಹಿತಿ ಪಡೆಯಬಹುದು. ಆದರೆ ಅದು ಲಭ್ಯವಿರುವ ಲಸಿಕೆ ಸ್ಲಾಟ್‌ಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಪ್ರಸ್ತುತ ಕೋವಿಡ್ ಎರಡನೆಯ ಅಲೆ ತೀವ್ರವಾಗಿರುವುದರಿಂದ ಜನರು ಲಸಿಕೆ ಪಡೆದುಕೊಳ್ಳಲು ಮುನ್ನುಗ್ಗುತ್ತಿದ್ದಾರೆ. ಆದರೆ ಮೊದಲ ಡೋಸ್ ಪಡೆದುಕೊಂಡು ಎರಡನೆಯ ಡೋಸ್ ಸಮಯ ಬಂದಿರುವವರು ಹಾಗೂ ಇನ್ನೂ ಮೊದಲ ಡೋಸ್‌ಗಾಗಿ ಕಾಯುತ್ತಿರುವ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಸರಿಯಾಗಿ ಸಿಗುತ್ತಿಲ್ಲ. ಈ ಮಧ್ಯೆ ಯುವಜನರೂ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಪೋರ್ಟಲ್‌ಗಳಲ್ಲಿ ವಿಭಿನ್ನ ಟೂಲ್‌ಗಳನ್ನು ಬಳಸಿ ಹುಡುಕುವುದರಿಂದ ಎಲ್ಲಿ ಲಸಿಕೆ ಲಭ್ಯವಿದೆ ಎನ್ನುವುದನ್ನು ಪತ್ತೆಹಚ್ಚಬಹುದು. ದೂರ ಪ್ರದೇಶಕ್ಕೆ ತೆರಳಿ ಲಸಿಕೆ ತೆಗೆದುಕೊಳ್ಳಲು ಸಿದ್ಧರಿರುವವರಿಗೆ ಇದು ಸಾಧ್ಯ. 'ನಾನು ವಾಸಿಸುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ ಲಸಿಕೆ ನೀಡುವಿಕೆ ಇಂದು ಶುರುವಾಗಿದೆ. ಆದರೆ ನಾನು ದಕ್ಷಿಣ ದೆಹಲಿಗೆ ತೆರಳಿ ಲಸಿಕೆ ಪಡೆದಿದ್ದೇನೆ. ಇದಕ್ಕೆ ಪದೇ ಪದೇ ಕೋವಿನ್ ಪೋರ್ಟಲ್‌ನಲ್ಲಿ ಹುಡುಕುತ್ತಾ ಇರಬೇಕಾಗುತ್ತದೆ' ಎನ್ನುತ್ತಾರೆ ನೊಯ್ಡಾದಲ್ಲಿ ವಾಸಿಸುವ ಹರ್ಷ್ ರಾಣಾ. ಸಂಜೆ 6 ರಿಂದ ರಾತ್ರಿ 11ರವರೆಗೆ ಸ್ಲಾಟ್‌ಗಳನ್ನು ಹುಡುಕುವುದು ಸೂಕ್ತ ಸಮಯ. ಅದಕ್ಕಾಗಿ ಕೋವಿನ್ ವೆಬ್‌ಸೈಟ್‌ಅನ್ನು ಪದೇಪದೇ ರಿಫ್ರೆಶ್ ಮಾಡಿ ನೋಡುತ್ತಾ ಇರಬೇಕು. ಸ್ಲಾಟ್ ಕಾಣಿಸುತ್ತಿದ್ದಂತೆಯೇ ಸಮಯ ನಿಗದಿಯ ಬಗ್ಗೆ ಹೆಚ್ಚು ಯೋಚನೆ ಮಾಡದೆಯೇ ಕೂಡಲೇ ಅದನ್ನು ಕಾಯ್ದಿರಿಸಬೇಕು ಎಂದು ಗುರುಗ್ರಾಮದ ರೇಶ್ವಾ ಮುಂಜಾಲ್ ಸಲಹೆ ನೀಡಿದ್ದಾರೆ. ಕೋವಿನ್ ಆಪ್‌ನಲ್ಲಿ ನೋಂದಾಯಿಸಿಕೊಂಡ ಬಳಿಕ ಲಸಿಕೆ ಸ್ಲಾಟ್‌ಗಾಗಿ ಅದರಲ್ಲಿಯೇ ಪದೇ ಪದೇ ರಿಫ್ರೆಶ್ ಮಾಡಿ ಹುಡುಕುತ್ತಿರಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಯ ಅದಕ್ಕಾಗಿ ಕಳೆದುಹೋಗುತ್ತಿದೆ. ಲಸಿಕೆ ಲಭ್ಯತೆ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ಲಸಿಕೆ ಕೇಂದ್ರಕ್ಕೆ ಹೋಗಿ ಸರದಿಯಲ್ಲಿ ನಿಂತರೂ ಕೆಲವೊಮ್ಮೆ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ದಿನಪೂರ್ತಿ ವ್ಯರ್ಥವಾಗುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ.