ನ್ಯಾಯಾಧೀಶರ ದೂರನ್ನೇ ನಿರ್ಲಕ್ಷ್ಯ ಮಾಡಿದ ಸಿಬಿಐ..? ಸುಪ್ರೀಂ ಕೋರ್ಟ್ ಗರಂ..!

'ಪ್ರತಿಕೂಲವಾಗಿ ತೀರ್ಪು ನೀಡಿದರೆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವುದು ಇತ್ತೀಚಿನ ಪ್ರವೃತ್ತಿಯಾಗಿದೆ. ಬೆದರಿಕೆ ವಿರುದ್ಧ ದೂರು ನೀಡಿದರೆ ಸಿಬಿಐ ಮಾತ್ರವಲ್ಲ, ಗುಪ್ತಚರ ಇಲಾಖೆ ಸಹ ನ್ಯಾಯಾಂಗ ವ್ಯವಸ್ಥೆಗೆ ನೆರವು ನೀಡುವುದಿಲ್ಲ' - ಸುಪ್ರೀಂ ಬೇಸರ

ನ್ಯಾಯಾಧೀಶರ ದೂರನ್ನೇ ನಿರ್ಲಕ್ಷ್ಯ ಮಾಡಿದ ಸಿಬಿಐ..? ಸುಪ್ರೀಂ ಕೋರ್ಟ್ ಗರಂ..!
Linkup
: ಬೆದರಿಕೆಗಳ ಕುರಿತು ನ್ಯಾಯಾಧೀಶರು ನೀಡುವ ದೂರುಗಳನ್ನು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆ ()ಗೆ ನೋಟಿಸ್‌ ಜಾರಿ ಮಾಡಿದೆ. ಜಾರ್ಖಂಡ್‌ನ ಧನಬಾದ್‌ನಲ್ಲಿ ಜುಲೈ 28ರಂದು ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್‌ ಉತ್ತಮ್‌ ಆನಂದ್‌ ಅವರ ಹತ್ಯೆ ಪ್ರಕರಣ ಉಲ್ಲೇಖಿಸಿದ ಮುಖ್ಯ ನ್ಯಾ. ಎನ್‌. ವಿ. ರಮಣ ನೇತೃತ್ವದ ನ್ಯಾಯಪೀಠವು, ನ್ಯಾಯಾಧೀಶರಿಗೆ ಪ್ರಸ್ತುತ ಒದಗಿಸುತ್ತಿರುವ ಭದ್ರತೆ ಕುರಿತು ವರದಿ ಸಲ್ಲಿಸುವಂತೆಯೂ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. 'ದೇಶಾದ್ಯಂತ ಹಲವು ಗ್ಯಾಂಗ್‌ಸ್ಟರ್‌ಗಳು ಹಾಗೂ ಪ್ರಭಾವಶಾಲಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ತೀರ್ಪು ಒಪ್ಪದ ಅಂತಹವರು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಂದ ಹಿಡಿದು ಹೈಕೋರ್ಟ್‌ ನ್ಯಾಯಾಲಯಗಳ ನ್ಯಾಯಮೂರ್ತಿಗಳವರೆಗೆ ಜೀವ ಬೆದರಿಕೆ ಹಾಕುತ್ತಾರೆ. ಜತೆಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೆಸೇಜ್‌ಗಳ ಮೂಲಕ ಮಾನಸಿಕ ಹಿಂಸೆ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ದೂರು ನೀಡಿದರೆ, ಅದಕ್ಕೆ ಉತ್ತಮ ಸ್ಪಂದನೆ ದೊರೆಯುವುದಿಲ್ಲ. ದೂರು ಸಲ್ಲಿಸಲು ಸಹ ನ್ಯಾಯಾಧೀಶರಿಗೆ ಸ್ವಾತಂತ್ರ್ಯವಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ. 'ಪ್ರತಿಕೂಲವಾಗಿ ತೀರ್ಪು ನೀಡಿದರೆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವುದು ಇತ್ತೀಚಿನ ಪ್ರವೃತ್ತಿಯಾಗಿದೆ. ಬೆದರಿಕೆ ವಿರುದ್ಧ ದೂರು ನೀಡಿದರೆ ಸಿಬಿಐ ಮಾತ್ರವಲ್ಲ, ಗುಪ್ತಚರ ಇಲಾಖೆ ಸಹ ನ್ಯಾಯಾಂಗ ವ್ಯವಸ್ಥೆಗೆ ನೆರವು ನೀಡುವುದಿಲ್ಲ. ದೇಶದ ಎರಡು ಕಡೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ ಒಂದು ವರ್ಷವಾದರೂ ಇದುವರೆಗೂ ತನಿಖಾ ಸಂಸ್ಥೆ ಏನೂ ಮಾಡಿಲ್ಲ' ಎಂದು ಅಟಾರ್ನಿ ಜನರಲ್‌ ಕೆ. ಕೆ. ವೇಣುಗೋಪಾಲ್‌ ಅವರಿಗೆ ನ್ಯಾಯಪೀಠ ಖಾರವಾಗಿ ಹೇಳಿತು. ಪ್ರಕರಣದ ಕುರಿತಂತೆ ಲಿಖಿತ ಪ್ರತಿಕ್ರಿಯೆ ನೀಡಲಾಗುವುದು ಎಂದು ವೇಣುಗೋಪಾಲ್‌ ಕೋರ್ಟ್‌ಗೆ ತಿಳಿಸಿದರು. ಆಗಸ್ಟ್‌ 9ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್‌ ತಿಳಿಸಿತು. ಧನಬಾದ್‌ನಲ್ಲಿ ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ನ್ಯಾ. ಉತ್ತಮ್‌ ಆನಂದ್‌ ಅವರಿಗೆ ಆಟೋ ಗುದ್ದಿಸಿ ಹತ್ಯೆ ಮಾಡಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಹತ್ಯೆ ಕುರಿತು ಸುಪ್ರೀಂಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. ಜಾರ್ಖಂಡ್‌ ಸರಕಾರಕ್ಕೂ ತರಾಟೆ: ಧನಬಾದ್‌ ನ್ಯಾಯಾಧೀಶರ ಹತ್ಯೆ ಕುರಿತು ಜಾರ್ಖಂಡ್‌ ಸರಕಾರವನ್ನೂ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. 'ರಾಜ್ಯ ಸರಕಾರದ ನಿರ್ಲಕ್ಷ್ಯವನ್ನು ನಾವು ಸಹಿಸಲು ಆಗುವುದಿಲ್ಲ. ಧನಬಾದ್‌ ಜಿಲ್ಲೆಯು ದಂಧೆಗಳ ಆಗರವಾಗಿದೆ ಎಂಬುದು ಗೊತ್ತು. ವಕೀಲರ ಕೊಲೆಯಾಗಿದೆ, ನ್ಯಾಯಾಧೀಶರ ಮೇಲೆ ದಾಳಿಗಳಾಗಿವೆ. ಆದರೂ ರಾಜ್ಯ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರಕಾರದ ಪರ ವಾದ ಮಂಡಿಸಿದ ವಕೀಲರು, 'ನ್ಯಾಯಾಧೀಶರಿಗೆ ಭದ್ರತೆ ಒದಗಿಸಲಾಗಿದೆ, ನ್ಯಾಯಾಲಯದ ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ' ಎಂದು ತಿಳಿಸಿದರು.