ತಾಯಿಯ ಹೆಸರನ್ನೂ ಉಪನಾಮವಾಗಿ ಬಳಸುವ ಹಕ್ಕಿದೆ; ಹೆಣ್ಮಕ್ಕಳ ಹಕ್ಕು ಎತ್ತಿ ಹಿಡಿದ ಹೈಕೋರ್ಟ್‌

ಈ ವಿಚಾರದಲ್ಲಿ ತಂದೆಯು ಮಗಳ ಮೇಲೆ ಹಕ್ಕು ಚಲಾಯಿಸುವಂತಿಲ್ಲ. ಪ್ರತಿಯೊಂದು ಮಗುವಿಗೂ ತಾಯಿಯ ಹೆಸರನ್ನು ಉಪನಾಮವಾಗಿ ಬಳಸುವ ಹಕ್ಕು ಇರುತ್ತದೆ. ಮಗುವು ತನಗಿಷ್ಟವಾದವರ ಉಪನಾಮ ಇಟ್ಟುಕೊಂಡರೆ ನಿಮಗೆ ಕಷ್ಟವೇನು? ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

ತಾಯಿಯ ಹೆಸರನ್ನೂ ಉಪನಾಮವಾಗಿ ಬಳಸುವ ಹಕ್ಕಿದೆ; ಹೆಣ್ಮಕ್ಕಳ ಹಕ್ಕು ಎತ್ತಿ ಹಿಡಿದ ಹೈಕೋರ್ಟ್‌
Linkup
ಹೊಸದಿಲ್ಲಿ: ಹೆಣ್ಣು ಮಕ್ಕಳ ಮೇಲೆ ತಂದೆ ಅಧಿಕಾರ ಚಲಾಯಿಸುವುದು ಸಲ್ಲದು, ಆಕೆ ತನ್ನ ತಾಯಿಯ ಹೆಸರನ್ನು ಉಪನಾಮವಾಗಿ ಬಳಸುವ ಹಕ್ಕನ್ನು ಹೊಂದಿರುತ್ತಾಳೆ ಎಂದು ದಿಲ್ಲಿ ಹೈಕೋರ್ಟ್‌ ಶುಕ್ರವಾರ ಹೇಳಿದೆ. ಬಾಲಕಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಆಕೆಯ ತಾಯಿ ಹೆಸರನ್ನು ಉಪನಾಮವಾಗಿ ಬಳಸುವ ಬದಲು ತನ್ನ ಹೆಸರನ್ನೇ ಬಳಸಬೇಕೆಂದು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾ. ರೇಖಾ ಪಲ್ಲಿಅವರು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ವಿಚಾರದಲ್ಲಿ ತಂದೆಯು ಮಗಳ ಮೇಲೆ ಹಕ್ಕು ಚಲಾಯಿಸುವಂತಿಲ್ಲ. ಪ್ರತಿಯೊಂದು ಮಗುವಿಗೂ ತಾಯಿಯ ಹೆಸರನ್ನು ಉಪನಾಮವಾಗಿ ಬಳಸುವ ಹಕ್ಕು ಇರುತ್ತದೆ. ಮಗುವು ತನಗಿಷ್ಟವಾದವರ ಉಪನಾಮ ಇಟ್ಟುಕೊಂಡರೆ ನಿಮಗೆ ಕಷ್ಟವೇನು? ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ. ತಮ್ಮ ಮಗಳು ಅಪ್ರಾಪ್ತೆಯಾಗಿರುವುದರಿಂದ ಉಪನಾಮದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾರಳು. ಹೀಗಾಗಿ ಸದ್ಯಕ್ಕೆ ತಂದೆಯ ಹೆಸರನ್ನೇ ಉಪನಾಮವಾಗಿ ಬಳಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಸ್ತುತ ಮಗುವಿನ ತಂದೆ-ತಾಯಿ ಪ್ರತ್ಯೇಕಗೊಂಡಿದ್ದು, ಈ ಹಂತದಲ್ಲಿ ಮಗುವಿನ ಹೆಸರು ಬದಲಿಸಿದರೆ ವಿಮೆ ಕ್ಲೇಮ್‌ ಕಷ್ಟವಾಗಲಿದೆ ಎಂದು ಆಕೆಯ ತಂದೆ ಕೋರ್ಟ್‌ಗೆ ತಿಳಿಸಿದ್ದಾರೆ.